ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಸಿಹಿ ಈರುಳ್ಳಿಗೆ ಹಾವುಸುಳಿ ರೋಗ

ವನ್ನಳ್ಳಿ ಭಾಗದ ರೈತರಲ್ಲಿ ಆತಂಕ: ಬೆಳವಣಿಗೆ ಹಂತದಲ್ಲೇ ಸಾಯುವ ಸಸಿ
Published 4 ಫೆಬ್ರುವರಿ 2024, 5:11 IST
Last Updated 4 ಫೆಬ್ರುವರಿ 2024, 5:11 IST
ಅಕ್ಷರ ಗಾತ್ರ

ಕುಮಟಾ: ಸಿಹಿ ಈರುಳ್ಳಿ ಬೆಳೆಗೆ ಪ್ರಸಿದ್ಧಿಯಾಗಿರುವ ತಾಲ್ಲೂಕಿನ ವನ್ನಳ್ಳಿ ಭಾಗದಲ್ಲಿ ಹಾವುಸುಳಿ ರೋಗಬಾಧೆಯಿಂದ ಈರುಳ್ಳಿ ಬೆಳೆಗಾರರು ಕಂಗೆಟ್ಟಿದ್ದಾರೆ.

ಪ್ರತೀ ವರ್ಷ ನೂರಾರು ಕ್ವಿಂಟಲ್ ಸಿಹಿ ಈರುಳ್ಳಿ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದ ರೈತರು ಈ ಬಾರಿ ರೋಗಬಾಧೆಯಿಂದ ಬೆಳೆ ಬೆಳೆಯಲು ಹಿಂದೇಟು ಹಾಕುವ ಸ್ಥಿತಿ ಉಂಟಾಗಿದೆ. ಹಾವುಸುಳಿ ರೋಗ ನಿಯಂತ್ರಣಕ್ಕೆ ರೈತರು ಹಲವು ಪ್ರಯೋಗ ನಡೆಸಿದರೂ ನಿಯಂತ್ರಣಕ್ಕೆ ಬಂದಿಲ್ಲ.

‘ಈರುಳ್ಳಿ ಬೀಜ ಬಿತ್ತಿ ಅವು ಸಸಿಯಾಗಿ ಬೆಳೆಯುವ ಮುನ್ನವೇ ರೋಗಕ್ಕೀಡಾಗುತ್ತಿದೆ. ಹಲವು ಸಸಿಗಳು ಹಾಳಾಗಿದ್ದು ಇದರಿಂದ ಬೆಸತ್ತು ಈರುಳ್ಳಿ ಬದಲು ಬೆಂಡೆ ಕಾಯಿ ಬೆಳೆಯಲು ಮುಂದಾಗುತ್ತಿದ್ದೇನೆ’ ಎಂದು ರೈತ ಬಾಬು ನಾಯ್ಕ ಹೇಳಿದರು.

‘ಪ್ರತೀ ವರ್ಷವೂ ಈರುಳ್ಳಿ ಸಸಿಯ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ವರ್ಷ ಹಾನಿ ಅನುಭವಿಸಿದರೂ ಈ ವರ್ಷವಾದರೂ ಬೆಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಸಸಿ ನೆಟ್ಟರೆ ಈ ವರ್ಷ ಸಸಿ ಬೆಳೆಯುವ ಮುನ್ನವೇ ರೋಗಕ್ಕೀಡಾಗಿದೆ’ ಎಂದರು.

‘ಈರುಳ್ಳಿಗೆ ಯುರಿಯಾ ಬಳಸದೆ ಅದಕ್ಕೆ ಅಗತ್ಯವಿರುವ ಬೋರಿಯಂ ದ್ರಾವಣ ಹಾಗೂ ಸುಫಲಾ ಗೊಬ್ಬರ ಹಾಕಿ ನೆಟ್ಟ ಸಸಿಗಳು ಆರಂಭದಲ್ಲಿ ಚೆನ್ನಾಗಿ ಬಂದರೂ ಈಗ ಒಂದು ಬದಿಯಿಂದ ರೋಗಕ್ಕೀಡಾಗುತ್ತಿದೆ. ಸಸಿ ನೆಡಲು ಖರ್ಚು ಮಾಡಿದ ₹50 ಸಾವಿರ ಮೈಮೇಲೆ ಬರುತ್ತಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕಿದೆ’ ಎಂದು ಪ್ರಗತಿಪರ ಕೃಷಿಕ ನಾಗೇಶ ನಾಯ್ಕ ಒತ್ತಾಯಿಸಿದರು.

ಕುಮಟಾ ಸಮೀಪದ ವನ್ನಳ್ಳಿಯ ನಾಗೇಶ ನಾಯ್ಕ ಅವರ ಗದ್ದೆಯಲ್ಲಿ ಹಾವುಸುಳಿ ರೋಗಕ್ಕೆ ತುತ್ತಾಗುತ್ತಿರುವ ಈರುಳ್ಳಿ ಸಸಿ.

ಕುಮಟಾ ಸಮೀಪದ ವನ್ನಳ್ಳಿಯ ನಾಗೇಶ ನಾಯ್ಕ ಅವರ ಗದ್ದೆಯಲ್ಲಿ ಹಾವುಸುಳಿ ರೋಗಕ್ಕೆ ತುತ್ತಾಗುತ್ತಿರುವ ಈರುಳ್ಳಿ ಸಸಿ.

‘ಪ್ರತೀ ವರ್ಷ ಭತ್ತದ ಕಟಾವು ಆದ ಗದ್ದೆಯ ತೇವಾಂಶ ಆರಲು ಒಂದು ತಿಂಗಳು ಬಿಡುವು ಕೊಡುತ್ತಿದ್ದರು. ಈಗ ಅಕಾಲಿಕ ಮಳೆಯಿಂದ ಗದ್ದೆಯ ತೇವಾಂಶ ಆರುತ್ತಿಲ್ಲ. ಭತ್ತದ ಕಟಾವು ಆದ ನಂತರ ಹಸಿ ನೆಲದಲ್ಲಿ ಈರುಳ್ಳಿ ಬೆಳೆಯಲು ಮುಂದಾಗುವ ರೈತರು ರೋಗ ಎದುರಿಸುವಂತಾಗಿದೆ. ಪ್ರತೀ ವರ್ಷ ರೈತರು ಈರುಳ್ಳಿ ಬಿತ್ತನೆ ಮೊದಲು ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿದರೆ ಕ್ರಮ ಕೈಗೊಳ್ಳಬಹುದು. ಇನ್ಮುಂದೆ ಮುಂಜಾಗ್ರತಾ ಕ್ರಮ ಕೈಗೊಂಡ ನಂತರವೇ ಬಿತ್ತನೆ ಬಗ್ಗೆ ಯೋಚಿಸುವುದು ಉತ್ತಮ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚೇತನ ನಾಯ್ಕ ಪ್ರತಿಕ್ರಿಯಿಸಿದರು.

ರೈತರಿಗೆ ರೋಗ ರಹಿತ ಈರುಳ್ಳಿ ಬೀಜ ಪೂರೈಸಲು ತೋಟಗಾರಿಕಾ ವಿ.ವಿಗೆ ಮನವಿ ಮಾಡಲಾಗಿದೆ
-ಚೇತನ ನಾಯ್ಕ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT