ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ರೈತರಿಗೆ ವರದಾನವಾಗಿಲ್ಲ ಭತ್ತದ ಬೆಂಬಲ ಬೆಲೆ ಖರೀದಿ

ಯೋಜನೆಯಡಿ ಜಿಲ್ಲೆಯಲ್ಲಿ ಮಾರಾಟವಾಗಿದ್ದು 1645 ಕ್ವಿಂಟಲ್ ಭತ್ತ ಮಾತ್ರ
Last Updated 18 ಜುಲೈ 2020, 19:30 IST
ಅಕ್ಷರ ಗಾತ್ರ

ಶಿರಸಿ: ಸಣ್ಣ ಹಿಡುವಳಿದಾರರ ಅನುಕೂಲಕ್ಕಾಗಿ ಸರ್ಕಾರ ನೀಡಿದ್ದ ಬೆಂಬಲ ಬೆಲೆಯಡಿ ಭತ್ತ ಖರೀದಿ ಯೋಜನೆಯು ಪ್ರಚಾರದ ಕೊರತೆ ಹಾಗೂ ತಾಂತ್ರಿಕ ತೊಂದರೆಯಿಂದಾಗಿ, ಜಿಲ್ಲೆಯಲ್ಲಿ ನೈಜ ಫಲಾನುಭವಿಗಳನ್ನು ತಲುಪಲು ವಿಫಲವಾಗಿದೆ.

ಉತ್ತರ ಕನ್ನಡದ ಕರಾವಳಿ ಹಾಗೂ ಘಟ್ಟ ಪ್ರದೇಶ ಸೇರಿ 50,600 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತದೆ. ಅಂದಾಜು 1.75 ಲಕ್ಷ ಟನ್ ಭತ್ತ ಉತ್ಪಾದನೆಯಾಗುತ್ತದೆ. ಸಣ್ಣ ಹಾಗೂ ಅತಿಸಣ್ಣ ಹಿಡುವಳಿದಾರರು ಹೆಚ್ಚಿರುವ ಇಲ್ಲಿನ ಕೃಷಿಕರ ಅನುಕೂಲಕ್ಕಾಗಿ, ಈ ಯೋಜನೆ ಜಾರಿಗೊಂಡಿತ್ತು. ಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು, ಶಿರಸಿಯಲ್ಲಿ ಕೆಎಫ್‌ಸಿಎಸ್‌ಸಿ ಪಡಿತರ ಸಗಟು ಕೇಂದ್ರ, ಕುಮಟಾ ಹಾಗೂ ಮುಂಡಗೋಡಿನಲ್ಲಿ ಎಪಿಎಂಸಿ ಮಳಿಗೆಗಳಲ್ಲಿ ರೈತರಿಗೆ ನೋಂದಣಿ ಪ್ರಕ್ರಿಯೆಗೆ ಸ್ಥಳ ನಿಗದಿಗೊಳಿಸಿತ್ತು.

ಜನೆವರಿ 1ರಿಂದ ಮಾರ್ಚ್‌ ಕೊನೆಯವರೆಗೆ ನೀಡಿದ್ದ ನೋಂದಣಿ ದಿನಾಂಕವನ್ನು ಮೇವರೆಗೆ ವಿಸ್ತರಿಸಿ, ನಂತರ ಜೂನ್ ಅಂತ್ಯದವರೆಗೂ ಖರೀದಿ ನಡೆಯಿತು. ಆದರೂ, ಜಿಲ್ಲೆಯಲ್ಲಿ ಈ ಯೋಜನೆಯಡಿ ಭತ್ತ ಖರೀದಿಯಾಗಿದ್ದು 1645.12 ಕ್ವಿಂಟಲ್ ಮಾತ್ರ!

ಮೂರು ತಾಲ್ಲೂಕುಗಳಲ್ಲಿ ಮೂರು ಅಕ್ಕಿ ಗಿರಣಿಗಳನ್ನು ಖರೀದಿಗೆ ಗುರುತಿಸಿದ್ದರೂ, ತಾಂತ್ರಿಕ ತೊಂದರೆಯಿಂದ ಅಕ್ಕಿ ಗಿರಣಿ ಮಾಲೀಕರು ಖರೀದಿಗೆ ಹಿಂದೇಟು ಹಾಕಿದರು. ಶಿರಸಿ ತಾಲ್ಲೂಕಿನ ಬನವಾಸಿಯ ಅಕ್ಕಿ ಗಿರಣಿಯಲ್ಲಿ ಮಾತ್ರ ಭತ್ತ ಖರೀದಿ ನಡೆಯಿತು. ಮೇ ಕೊನೆಯವರೆಗೆ ರೈತರಿಂದ ಕೇವಲ 200 ಕ್ವಿಂಟಲ್ ಭತ್ತ ಬಂದಿತ್ತು. ಜೂನ್‌ನಲ್ಲಿ ಅಧಿಕ ರೈತರು ಭತ್ತ ಮಾರಾಟ ಮಾಡಿದರು ಎನ್ನುತ್ತಾರೆ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ.

‘ಯೋಜನೆಯಡಿ ಪ್ರತಿ ರೈತ ಎಕರೆಗೆ 16 ಕ್ವಿಂಟಲ್‌ನಂತೆ ಗರಿಷ್ಠ 40 ಕ್ವಿಂಟಲ್‌ ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಭತ್ತಕ್ಕೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ವೊಂದಕ್ಕೆ ₹ 1400ರಿಂದ ₹ 1600ರಷ್ಟು ದರವಿದೆ. ಬೆಂಬಲ ಬೆಲೆಯಡಿ ಕ್ವಿಂಟಲ್‌ವೊಂದಕ್ಕೆ ₹ 1805 ದರ ಸಿಗುತ್ತದೆ. ಆದರೆ, ಅವಧಿ ವಿಸ್ತರಣೆ ಮಾಡಿದ್ದು ನಮಗೆ ಗೊತ್ತಾಗಿಲ್ಲ. ಅಲ್ಲದೇ, ಇಡೀ ಜಿಲ್ಲೆಯಲ್ಲಿ ಒಂದೇ ಕಡೆ ಖರೀದಿ ಕೇಂದ್ರವಿದ್ದರೆ, ಸಾಗಾಟದ ವೆಚ್ಚವೂ ರೈತರಿಗೆ ಭಾರವಾಗುತ್ತದೆ. ಕಳೆದ ವರ್ಷ ದರ ಸಿಗಬಹುದೆಂದು ಭತ್ತ ಉಳಿಸಿಕೊಂಡು, ನಂತರ ಅರ್ಧಕ್ಕಿಂತ ಹೆಚ್ಚು ಹೆಗ್ಗಣಗಳ ಪಾಲಾಯಿತು. ಹೀಗಾಗಿ, ಈ ಬಾರಿ ಬೇಗ ಮಾರಾಟ ಮಾಡಿದೆ’ ಎನ್ನುತ್ತಾರೆ ರೈತ ಬಂಗಾರ್ಯ ಚೆನ್ನಯ್ಯ.

ನಿಯಮಾವಳಿ ತೊಡಕು:‘ಸರ್ಕಾರದ ನಿಯಮದಂತೆ, ಖರೀದಿಸಿದ ಪ್ರತಿ ಒಂದು ಕ್ವಿಂಟಲ್ ಭತ್ತಕ್ಕೆ 67 ಕೆ.ಜಿ ಅಕ್ಕಿಯನ್ನು ನಾವು ಕೊಡಬೇಕು. ಈ ಭಾಗದ ಭತ್ತದಿಂದ ಕ್ವಿಂಟಲ್‌ವೊಂದಕ್ಕೆ ಸರಾಸರಿ 63ರಿಂದ 64 ಕೆ.ಜಿ ಅಕ್ಕಿ ಸಿಗುತ್ತದೆ. ಅಲ್ಲದೇ, ಈ ಯೋಜನೆಯಡಿ ಭತ್ತ ಖರೀದಿಸುವ ಗಿರಣಿ ಮಾಲೀಕ, ಉತ್ಪನ್ನ ಖರೀದಿ ಪ್ರಮಾಣ ಆಧರಿಸಿ ಬ್ಯಾಂಕ್‌ ಠೇವಣಿ ಇಡಬೇಕು. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ನಿಯಮಾವಳಿಗಳಿಂದಾಗಿ ಅಕ್ಕಿ ಗಿರಣಿ ಮಾಲೀಕರು ಖರೀದಿಗೆ ಹಿಂದೇಟು ಹಾಕುತ್ತಾರೆ. ಬ್ಯಾಂಕ್ ಠೇವಣಿ ಬದಲಾಗಿ, ಆಸ್ತಿಯನ್ನು ಭದ್ರತೆಯಾಗಿರುವ ನಿಯಮವಿದ್ದರೆ ಅನುಕೂಲ’ ಎನ್ನುತ್ತಾರೆ ಬನವಾಸಿ ಕರ್ನಾಟಕ ರೈಸ್‌ಮಿಲ್ ಮಾಲೀಕ ಶಫಿ ಶೇಖ್.

ಬೆಂಬಲ ಬೆಲೆಯಡಿ ಮಾರಾಟವಾದ ಭತ್ತ (ಕ್ವಿಂಟಲ್‌ಗಳಲ್ಲಿ)

ಶಿರಸಿ- 1490,ಕುಮಟಾ- 82,ಮುಂಡಗೋಡ- 72

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT