ಶಿರಸಿ: ಮಲೆನಾಡ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಳುಮೆಣಸಿನ ಇಳುವರಿ ಈ ಬಾರಿ ಬೆಳೆಗಾರರ ಕೈಸುಡುತ್ತಿದೆ. ಕಳೆದ ಎರಡು ವರ್ಷಗಳ ಇಳುವರಿಗೆ ಹೋಲಿಸಿದರೆ ಈ ವರ್ಷ ಉತ್ಪಾದನೆಯಲ್ಲಿ ಶೇಕಡಾ 40ರಷ್ಟು ಇಳಿಮುಖವಾಗಿದೆ. ಈಗಾಗಲೇ ಅಡಿಕೆಯಲ್ಲಿ ತೀವ್ರ ನಷ್ಟ ಅನುಭವಿಸಿರುವ ಬೆಳೆಗಾರರು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಾಳುಮೆಣಸು ಸತತವಾಗಿ ಸುರಿದ ಮಳೆಯ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಎರಡು ವರ್ಷಗಳಿಂದ ಮಳೆಯ ಪ್ರಮಾಣ ಮಿತಿಮೀರಿದ್ದರಿಂದ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಕಾಳುಮೆಣಸಿನ ಬಳ್ಳಿಗಳಿಗೆ ಮಾರಕವಾದ ಕಟ್ಟೆ ರೋಗ ಹಾಗೂ ಸೊರಗು ರೋಗ ಕಾಣಿಸಿಕೊಂಡಿತ್ತು. ರೋಗಬಾಧೆಯಿಂದಾಗಿ ಬಳ್ಳಿಗಳು ಸತ್ತಿರುವುದು ಒಂದೆಡೆಯಾದರೆ, ಚೇತರಿಕೆ ಕಂಡ ಬಳ್ಳಿಗಳಲ್ಲಿ ಇಳುವರಿ ಕುಸಿತವಾಗಿರುವುದು ಇನ್ನೊಂದೆಡೆಯಾಗಿದೆ.

ಜಿಲ್ಲೆಯಲ್ಲಿ ಬಹುತೇಕ ಅಡಿಕೆ ಬೆಳೆಗಾರರು ಕಾಳುಮೆಣಸನ್ನು ಉಪಬೆಳೆಯಾಗಿ ಬೆಳೆಸುತ್ತಿದ್ದಾರೆ. ಅದರಲ್ಲಿ 3 ರಿಂದ 4 ಸಾವಿರ ರೈತರು ಕಾಳುಮೆಣಸನ್ನು ಅಡಿಕೆ ಬೆಳೆಗಿಂತಲೂ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಅವರ ಆರ್ಥಿಕ ಲೆಕ್ಕಾಚಾರಗಳು ಬುಡಮೇಲು ಆಗುವ ಸ್ಥಿತಿ ಎದುರಾಗಿದೆ.

‘ಪ್ರಸ್ತುತ ಅಡಿಕೆ ಕೊಯ್ಲು ಬಹುತೇಕ ಮುಕ್ತಾಯದ ಹಂತ ತಲುಪಿದ್ದು, ಮರಗಳಿಗೆ ಹಬ್ಬಿರುವ ಕಾಳುಮೆಣಸಿನ ಕೊಯ್ಲು ಆರಂಭವಾಗಿದೆ. ಆದರೆ, ಕಾರ್ಮಿಕರು ಮರವೇರಿ ಗೊಂಚಲುಗಳನ್ನು ಕುಯ್ದು ಕೆಳಗಿಳಿಸಿದಾಗ ಇಳುವರಿ ಕುಸಿತದ ಸಂಗತಿ ಹೊರಬರುತ್ತಿದೆ. ನೋಡಲು ಬಳ್ಳಿಗಳು ಹಸಿರಾಗಿ ಕಂಡರೂ, ಗೊಂಚಲುಗಳಲ್ಲಿ ಕಾಳುಗಳ ಹಿಡುಪು (ಸಾಂದ್ರತೆ) ಅತ್ಯಂತ ಕಡಿಮೆ ಇದೆ. ಗೊಂಚಲುಗಳು ಜೊಳ್ಳಾಗಿದ್ದು, ನಿರೀಕ್ಷಿತ ತೂಕ ಬರುತ್ತಿಲ್ಲ’ ಎಂದು ಹತ್ತಾರು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಸಣ್ಣ ಮತ್ತು ಅತಿಸಣ್ಣ ಬೆಳೆಗಾರರ ಸ್ಥಿತಿಯಂತೂ ವಿವರಿಸಲಾಗದಂತಿದೆ. ಗೊಬ್ಬರ, ಕೂಲಿ ಆಳುಗಳ ವೆಚ್ಚ ಹಾಗೂ ಔಷಧೋಪಚಾರಕ್ಕೆ ಮಾಡಿದ ಖರ್ಚು ಕೂಡ ಕೈಗೆ ಬರದಂತಾಗಿದೆ. ಒಂದೆಡೆ ಅಡಿಕೆ ಇಳುವರಿ ತೀವ್ರವಾಗಿ ಕುಸಿದಿದೆ. ಈಗ ಕಾಳುಮೆಣಸು ಅದೇ ಹಾದಿಯಲ್ಲಿ ಸಾಗುತ್ತಿದೆ. ಮಳೆಯ ಅನಿಶ್ಚಿತತೆ ಮತ್ತು ರೋಗಬಾಧೆ ರೈತರ ಬದುಕನ್ನು ಹೈರಾಣಾಗಿಸಿದೆ’ ಎನ್ನುತ್ತಾರೆ ಕಾಳುಮೆಣಸು ಬೆಳೆಗಾರ ಕೃಷ್ಣಮೂರ್ತಿ ಹೆಗಡೆ.

‘ಕಾಳುಮೆಣಸಿನ ಇಳುವರಿ ಕುಂಠಿತಗೊಂಡಿರುವುದರಿಂದ ಕೇವಲ ರೈತರಷ್ಟೇ ಅಲ್ಲದೆ, ಮಾರುಕಟ್ಟೆಯ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಕುಸಿತದ ನೇರ ಪ್ರತಿಫಲನ ಮಾರುಕಟ್ಟೆಯಲ್ಲಿ ಕಾಣಿಸುತ್ತಿದ್ದು, ಶಿರಸಿಯ ಟಿ.ಎಂ.ಎಸ್. ಸಂಸ್ಥೆಯ ಅಂಕಿಅಂಶಗಳೇ ಇದಕ್ಕೆ ಸಾಕ್ಷಿ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರುಕಟ್ಟೆಗೆ 1,649 ಕ್ವಿಂಟಲ್ ಕಾಳುಮೆಣಸು ಆವಕವಾಗಿತ್ತು. ಆದರೆ ಈ ವರ್ಷ ಅದರ ಪ್ರಮಾಣ ಕೇವಲ 965 ಕ್ವಿಂಟಲ್ಗೆ ಸೀಮಿತವಾಗಿದೆ. ಅಂದರೆ ಅರ್ಧಕ್ಕರ್ಧ ಆವಕ ಕುಸಿದಿರುವುದು ಮಾರುಕಟ್ಟೆಯ ಆತಂಕಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ.

ಹಾನಿಗೊಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ಹಾಗೂ ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಮಾರ್ಗದರ್ಶನ ನೀಡಬೇಕಾದ ತುರ್ತು ಅಗತ್ಯವಿದೆ
ಶ್ರೀಧರ ಗೌಡ ಹುಲೇಕಲ್ ಕಾಳುಮೆಣಸು ಬೆಳೆಗಾರ

ಮೇ ತಿಂಗಳಲ್ಲಿ ಮಳೆ ಸುರಿದ ಪರಿಣಾಮ ಬಳ್ಳಿ ಬೆಳೆಯಿತೇ ಹೊರತು ಹೂವು ಕಚ್ಚಲು ಅವಕಾಶವೇ ಆಗಲಿಲ್ಲ. ಈ ನಿಟ್ಟಿನಲ್ಲಿಯೂ ಇಳುವರಿ ಕುಸಿತವಾಗಿರುವ ಸಾಧ್ಯತೆಯಿದೆ
ಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ

ಸಮೀಕ್ಷೆ ಅಗತ್ಯ

‘ಜಿಲ್ಲೆಯ ರೈತರು ಅಡಿಕೆಯ ಜತೆಗೆ ಕಾಳುಮೆಣಸನ್ನು ಮನೆ ನಿರ್ವಹಣೆಯ ಪ್ರಮುಖ ಆದಾಯವೆಂದು ನಂಬಿದ್ದರು. ಆದರೆ ಈಗ ಬೆಳೆ ನಷ್ಟ ಅವರ ಬದುಕು ಹೈರಾಣಾಗಿಸಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ನಷ್ಟ ಅನುಭವಿಸಿದ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಅವರ ನೆರವಿಗೆ ಧಾವಿಸಬೇಕಾದ ತುರ್ತು ಅಗತ್ಯವಿದೆ’ ಎಂಬುದು ಜಿಲ್ಲೆಯ ಕಾಳುಮೆಣಸು ಬೆಳೆಗಾರರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.