ಪ್ರವೀಣಕುಮಾರ ಸುಲಾಖೆ
ದಾಂಡೇಲಿ: ಮಳೆಗಾಲಕ್ಕೆ ಮುನ್ನ ಪೌರಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ನೀಡಬೇಕಿದ್ದ ನಗರಸಭೆ ಈವರೆಗೆ ಅವುಗಳನ್ನು ಪೂರೈಸದಿರುವ ಆರೋಪಕ್ಕೆ ಗುರಿಯಾಗಿದೆ.
ನಗರವನ್ನು ಸ್ವಚ್ಛವಾಗಿಡಲು ನಿತ್ಯವೂ ದುಡಿಯುವ ಪೌರಕಾರ್ಮಿಕರಿಗೆ ಮಳೆಗಾಲದಲ್ಲಿ ಕೆಲಸ ಮಾಡಲು ಹಲವು ತೊಡಕುಗಳು ಎದುರಾಗುತ್ತವೆ. ಹೀಗಾಗಿ ಅವರಿಗೆ ಸುರಕ್ಷತೆ ದೃಷ್ಟಿಯಿಂದ ಗಮ್ ಬೂಟ್, ಕೈಗವಸು, ರೇನ್‍ಕೋಟ್ ನೀಡಲಾಗುತ್ತದೆ. ಮಳೆಗಾಲದ ಆರಮಭದಲ್ಲಿಯೇ ಅವುಗಳನ್ನು ಒದಗಿಸುವ ಕೆಲಸ ಮಾಡಬೇಕಿತ್ತು.
‘ಮಳೆಗಾಲ ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಸುರಕ್ಷತಾ ಸಲಕರಣೆಗಳನ್ನು ಪೂರೈಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಮಳೆಗಾಲದಲ್ಲಿ ನಿರಂತವಾಗಿ ಸುರಿಯುವ ಮಳೆಯಲ್ಲಿ ಚರಂಡಿ ಸ್ವಚ್ಛ ಮಾಡುವ ವೇಳೆಯಲ್ಲಿ ಕೈ ಕಾಲುಗಳಿಗೆ ನೀರಿನಿಂದಾಗಿ ಸೆಲೆತು ಗಾಯಗಳಾಗುವ ಸಾಧ್ಯತೆಗಳಿವೆ’ ಎಂದು ಪೌರಕಾರ್ಮಿಕರೊಬ್ಬರು ಸಮಸ್ಯೆ ಹೇಳಿಕೊಂಡರು.
‘ಪ್ರತಿ ವರ್ಷ ಸುರಕ್ಷತಾ ಸಲಕರಣೆ ನೀಡಬೇಕೆನ್ನುವ ನಿಯಮವಿದ್ದರೂ ಎರಡು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ಅದನ್ನೂ ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ನಗರವನ್ನು ಸ್ವಚ್ಛವಾಗಿಡುವ ನಮ್ಮ ಆರೋಗ್ಯ ಕಾಳಜಿ ಬಗ್ಗೆ ಹೊಣೆ ಹೋರುವವರು ಯಾರು?’ ಎಂದೂ ಪ್ರಶ್ನಿಸಿದರು.
ನಗರಸಭೆಯಲ್ಲಿ ಸಪಾಯಿ ಕರ್ಮಚಾರಿ, ಸ್ವಚ್ಛತೆ ಕಾರ್ಮಿಕರು, ನೀರು ಸರಬರಾಜು ಸೇರಿದಂತೆ ಅನೇಕ ವಿಭಾಗಗಳಲ್ಲಿ 11 ಕಾಯಂ ಪೌರಕಾರ್ಮಿಕರು ಸೇರಿದಂತೆ 69 ಹೊರಗುತ್ತಿಗೆ ನೌಕರರ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಪೌರ ಕಾರ್ಮಿಕರಿಗೆ ಪ್ರತಿ ಬಾರಿ ಸುರಕ್ಷತಾ ಪರಿಕರಗಳನ್ನು ನೀಡಲಾಗುತ್ತಿದೆ. ಆದರೆ ಅದನ್ನು ಸರಿಯಾಗಿ ಬಳಕೆ ಮಾಡಲು ಬಹುತೇಕ ಸಿಬ್ಬಂದಿ ಹಿಂದೇಟು ಹಾಕುತ್ತಾರೆ’ ಎಂದು ನಗರಸಭೆ ಅಧಿಕಾರಿಯೊಬ್ಬರು ಹೇಳಿದರು.
‘ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನವನ್ನೂ ನೀಡುತ್ತಿಲ್ಲ. ಮಳೆಗಾಲ ಪ್ರಾರಂಭಕ್ಕಿಂತ ಮೊದಲೇ ಪೌರ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳನ್ನು ಪೂರೈಸಬೇಕಿತ್ತು. ಮಳೆಗಾಲದಲ್ಲಿ ಅವರು ಜೀವ ಕೈಲಿ ಹಿಡಿದು ಕೆಲಸ ಮಾಡುವ ಸ್ಥಿತಿ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಇದಕ್ಕೆ ಕಾರಣ’ ಎಂದು ಆರೋಪಿಸುತ್ತಾರೆ ಮುನಿಸಿಪಲ್ ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಸ್ಯಾಮ್ಸನ್.
ಸುರಕ್ಷತಾ ಪರಿಕರಗಳ ವಿತರಣೆಗೆ ಸಂಬಂಧಿಸಿದಂತೆ ಈ ವರ್ಷದ ಜುಲೈ ತಿಂಗಳಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಸುರಕ್ಷತಾ ಪರಿಕರಗಳು ಲಭ್ಯವಾಗಲಿವೆ. ವಿಲಾಸ ದೇವಕರ ದಾಂಡೇಲಿ ನಗರಸಭೆ ಆರೋಗ್ಯ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.