ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ತಂಬಾಕಿಗಾಗಿ ತಲೆ ಜಜ್ಜಿಕೊಂಡ ಕೈದಿಗಳು...

Published 29 ಆಗಸ್ಟ್ 2024, 22:30 IST
Last Updated 29 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಗುರುವಾರ ತಂಬಾಕು ಪೂರೈಕೆಗೆ ಬೇಡಿಕೆ ಇಟ್ಟು ಗಲಾಟೆ ಮಾಡಿದರು. ಕೈದಿಯೊಬ್ಬ ಕಲ್ಲಿನಿಂದ ತಲೆಗೆ ಜಜ್ಜಿಕೊಂಡು ಗಾಯ ಮಾಡಿಕೊಂಡಿದ್ದು ಅಲ್ಲದೇ, ಆತ ಬೀಸಿದ ಕಲ್ಲಿನ ಏಟಿಗೆ ಇನ್ನೊಬ್ಬ ಕೈದಿಗೆ ಗಾಯವಾಯಿತು.

ಕಾರಾಗೃಹದ ಒಂದನೇ ಬ್ಯಾರಕ್‍ನಲ್ಲಿದ್ದ ಮುಜಮ್ಮಿಲ್ ಮತ್ತು ಫರ‍್ಹಾನ್ ಚಬ್ಬಿ ಗಾಯಗೊಂಡವರು. ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಾಗೃಹದಿಂದ ಹೊರಗಡೆ ತರುವಾಗ ಇಬ್ಬರೂ, ‘ನಮಗೆ ಜೈಲರ್ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ’ ಎಂದು ಆರೋಪಿಸಿದರು.

‘ಬ್ಯಾರಕ್‍ನಲ್ಲಿದ್ದ ಟಿವಿ ದುರಸ್ತಿಗೆ ಮೊದಲು ಬೇಡಿಕೆಯಿಟ್ಟ ಕೈದಿಗಳು ಗಲಾಟೆ ಆರಂಭಿಸಿದರು. ನಂತರ ತಂಬಾಕು ಬೇಕೆಂದು ಕೂಗಾಡಿದರು. ತಂಬಾಕು ಕೊಡಿ ಎನ್ನುತ್ತ ಮುಜಮ್ಮಿಲ್ ಕಲ್ಲಿನಿಂದ ತಲೆ ಜಜ್ಜಿಕೊಂಡಿದ್ದು ಅಲ್ಲದೇ ಸಿಟ್ಟಿನಲ್ಲಿ ಗೋಡೆಗೂ ಕಲ್ಲು ಎಸೆದ. ಅದು ಗೋಡೆಗೆ ಬಡಿದು, ಸಮೀಪದಲ್ಲಿದ್ದ ಫರ‍್ಹಾನ್ ಹಣೆಗೆ ತಗುಲಿ ಆತನಿಗೆ ಗಾಯವಾಯಿತು’ ಎಂದು ಕಾರಾಗೃಹ ಮೂಲಗಳು ತಿಳಿಸಿವೆ.

‘ಜೈಲಿನ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆಂದು ಕೈದಿಗಳು ಆರೋಪಿಸಿದ್ದಾರೆ. ಆದರೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅವರೇ ಕಲ್ಲಿನಿಂದ ಹಲ್ಲೆ ನಡೆಸಿಕೊಂಡಿದ್ದು ಸ್ಪಷ್ಟವಾಗಿದೆ. ಇಬ್ಬರ ವಿರುದ್ಧವೂ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್  ತಿಳಿಸಿದರು. ಕಾರಾಗೃಹದಲ್ಲಿ ಸದ್ಯ 142 ಪುರುಷ, ಮೂವರು ಮಹಿಳಾ ವಿಚಾರಣಾಧೀನ ಕೈದಿಗಳಿದ್ದಾರೆ.

‘ನಟ ದರ್ಶನ್ ಚಹಾ ಪಾರ್ಟಿ ನಡೆಸಿದ ದೃಶ್ಯಗಳು ಹರಿದಾಡಿದ ಬಳಿಕ ಇಲ್ಲಿನ ಕಾರಾಗೃಹದಲ್ಲಿಯೂ ಬಿಗುಗೊಳಿಸಲಾಗಿದೆ. ಕೈದಿಗಳಿಗೆ ಅವರ ಸಂಬಂಧಿಕರು ಹೊರಗಿನ ಊಟ, ಕದ್ದುಮುಚ್ಚಿ ತಂಬಾಕು ಉತ್ಪನ್ನ ತಂದು ಕೊಡುವುದಕ್ಕೆ ಆಸ್ಪದ ನೀಡುತ್ತಿಲ್ಲ. ಇದರಿಂದ ಕೆಲ ಕೈದಿಗಳು ಗಲಾಟೆ ನಡೆಸಿರಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT