ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಗ್ರಹಣ

Published 6 ಜನವರಿ 2024, 4:44 IST
Last Updated 6 ಜನವರಿ 2024, 4:44 IST
ಅಕ್ಷರ ಗಾತ್ರ

ಶಿರಸಿ: ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ಶಿರಸಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಸಂಬಂಧ ತಿಂಗಳ ಹಿಂದಷ್ಟೇ ಸಮಗ್ರ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹೀಗಾಗಿ ಕೇಂದ್ರ ಸ್ಥಾಪನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.

2020-21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಶಿರಸಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ₹7 ಕೋಟಿ ಅನುದಾನ ಘೋಷಿಸಲಾಗಿತ್ತು. ನಗರದಿಂದ 7 ಕಿ.ಮೀ. ದೂರದಲ್ಲಿರುವ ಇಸಳೂರು ಗ್ರಾಮ ಪಂಚಾಯಿತಿಯ ಸರ್ವೆ ನಂ.45ರಲ್ಲಿರುವ 3.14 ಎಕರೆ ಜಾಗವನ್ನೂ ಇದಕ್ಕಾಗಿ ಮೀಸಲಿಡಲಾಗಿತ್ತು. ನಂತರದಲ್ಲಿ ಕೇಂದ್ರ ಸ್ಥಾಪನೆಯ ಉದ್ದೇಶಿತ ಜಾಗ ವಿಜ್ಞಾನ ಸೊಸೈಟಿಯ ಹೆಸರಿಗೆ ನೋಂದಣಿ ಕೂಡ ಆಗಿದೆ. ಅದಾಗಿ ಎರಡು ವರ್ಷಗಳು ಸಂದರೂ ಈವರೆಗೂ ವಿಜ್ಞಾನ ಕೇಂದ್ರ ಸ್ಥಾಪನೆ ನನೆಗುದಿಗೆ ಬಿದ್ದಿದೆ.

‘2022ರಲ್ಲಿ ಕೇಂದ್ರ ಸ್ಥಾಪನೆಯ ಜಾಗ ಅಂತಿಮಗೊಳಿಸಲಾಗಿತ್ತು. ಬಳಿಕ ಮಾದರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಕನಿಷ್ಠ ₹10 ಕೋಟಿ ಅಗತ್ಯವಿದೆ. ಬಜೆಟ್‌ನಲ್ಲಿ ಘೋಷಣೆಯಾದ ಅನುದಾನದ ಹೊರತಾಗಿ ಹೆಚ್ಚುವರಿ ₹3 ಕೋಟಿ ಅಗತ್ಯವಿದ್ದು, ಅದಕ್ಕಾಗಿ ಪ್ರಸ್ತಾವ ಸಲ್ಲಿಸಿ ಎಂದು ಆಗಿನ ವಿಧಾನಸಭೆ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದರು. ಆ ಪ್ರಕಾರ ₹10 ಕೋಟಿಗೆ ಯೋಜನಾ ವರದಿ ಸಲ್ಲಿಸಲಾಗಿತ್ತು. ಹೆಚ್ಚುವರಿ ಅನುದಾನ ಒಳಗೊಂಡ ಪ್ರಸ್ತಾವಕ್ಕೆ ಹಸಿರು ನಿಶಾನೆ ತೋರಿದ ಬಳಿಕವಷ್ಟೇ ಕೇಂದ್ರ ಸ್ಥಾಪನೆಗೆ ತಯಾರಿ ನಡೆಯುವ ನಿರೀಕ್ಷೆಯಿತ್ತು. ಆದರೆ ಆ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ಸೂಚಿಸದ ಕಾರಣ ಹಳೆಯ ಪ್ರಸ್ತಾವವನ್ನು ತಿಂಗಳ ಹಿಂದೆ ಮತ್ತೆ ಸಲ್ಲಿಸಲಾಗಿದೆ’ ಎಂಬ ಮಾಹಿತಿಯನ್ನು ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ ಸಂಬಂಧ ರಚಿಸಲಾದ ಸಮಿತಿ ಸದಸ್ಯರೊಬ್ಬರು ತಿಳಿಸಿದರು.

‘ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ₹4 ಕೋಟಿ ವಿಜ್ಞಾನ ಕೇಂದ್ರದ ಕಟ್ಟಡಕ್ಕೆ ಮೀಸಲಿಟ್ಟಿದ್ದಾರೆ. ₹3 ಕೋಟಿಯನ್ನು ಸಂಶೋಧನೆ, ಅಧ್ಯಯನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜ್ಞಾನ ಉಪಕರಣಗಳು, ವಿಜ್ಞಾನ ಮಾದರಿ ವಸ್ತುಗಳ ಖರೀದಿಗೆ ಅನುದಾನ ಮೀಸಲಿಡಲಾಗಿದೆ. ಹೆಚ್ಚುವರಿ ಅನುದಾನವಿದ್ದರೆ ಉತ್ತಮ ಉಪಕರಣ ಸೌಲಭ್ಯ ನೀಡಲಾಗುತ್ತಿತ್ತು. ಆದರೂ ಇರುವ ಅನುದಾನದಲ್ಲೇ ಆಸ್ಟ್ರಾನಾಮಿಕಲ್ ಥೀಮ್ ಆಧಾರದ ಮೇಲೆ ಅತ್ಯುತ್ತಮ ಕೇಂದ್ರ ಸ್ಥಾಪಿಸಲು ಕ್ರಮವಹಿಸಲಾಗುವುದು. ಆದರೆ ಈಗ ಸಲ್ಲಿಸಿರುವ ಪ್ರಸ್ತಾವಕ್ಕೆ ಸರ್ಕಾರ ಮಂಜೂರಿ ನೀಡಬೇಕಿದೆ’ ಎಂದು ಅವರು ಹೇಳಿದರು.

ಆಸ್ಟ್ರಾನಾಮಿಕಲ್ ಥೀಮ್ ಮೇಲೆ ಕೇಂದ್ರ ನಿರ್ಮಿಸಲು ₹10 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಒಪ್ಪದ ಕಾರಣ ₹7 ಕೋಟಿ ಮೊತ್ತಕ್ಕೇ ಯೋಜನಾ ವರದಿ ಮತ್ತೆ ಸಲ್ಲಿಸಲಾಗಿದೆ.
ಬಸವರಾಜ ಪಿ., ಕೇಂದ್ರದ ಸದಸ್ಯ ಕಾರ್ಯದರ್ಶಿ
ಈಗಾಗಲೇ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಸಂಬಂಧಪಟ್ಟ ಇಲಾಖೆ ಸಚಿವರ ಜತೆ ಯೋಜನಾ ವರದಿಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಲಾಗಿದೆ.
ಭೀಮಣ್ಣ ನಾಯ್ಕ ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT