ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಮೂಲಸೌಕರ್ಯ ವಂಚಿತ ಸ್ಮಶಾನಗಳು; ಅಂತ್ಯಸಂಸ್ಕಾರಕ್ಕೂ ಸಾರ್ವಜನಿಕರಿಗೆ ತೊಡಕು

Published 18 ಡಿಸೆಂಬರ್ 2023, 5:48 IST
Last Updated 18 ಡಿಸೆಂಬರ್ 2023, 5:48 IST
ಅಕ್ಷರ ಗಾತ್ರ

ಶಿರಸಿ: ಕೊನೆಯುಸಿರೆಳೆದ ವ್ಯಕ್ತಿಗಳ ಅಂತ್ಯಕ್ರಿಯೆಗೆ ನಗರ ಪ್ರದೇಶದ ಜನರು ಇಂದಿಗೂ ಸಂಕಷ್ಟ ಎದುರಿಸುತ್ತಿದ್ದಾರೆ. ಬಹುತೇಕ ಸ್ಮಶಾನಗಳು ಮುಳ್ಳುಕಂಟಿ, ಹುಲ್ಲು, ಜೀಡಿನಿಂದ ತುಂಬಿದ್ದು, ಮೂಲಸೌಕರ್ಯಗಳಿಂದ ವಂಚಿತವಾಗಿರುವುದೇ ಇದಕ್ಕೆ ಕಾರಣವಾಗಿದೆ. 

ನಗರಸಭೆ ವ್ಯಾಪ್ತಿಯಲ್ಲಿ 80 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನಗಳಿವೆ. ನಗರದ ಹುಲೇಕಲ್ ರಸ್ತೆಯ ಗಣೇಶನಗರ, ಮರಾಠಿಕೊಪ್ಪ, ವಿದ್ಯಾನಗರ, ನೆಹರೂನಗರ, ಕಲ್ಕುಣಿ ಸಮೀಪ ಇರುವ ಸ್ಮಶಾನಗಳನ್ನು ಹಿಂದೂ ಸಮುದಾಯದವರಿಗೆ ಮೀಸಲಿಡಲಾಗಿದೆ. ಆದರೆ ಈ ಸ್ಮಶಾನಗಳು ಮೂಲ ಸೌಕರ್ಯದಿಂದ ಸಂಪೂರ್ಣ ವಂಚಿತವಾಗಿವೆ. ಇದರಿಂದ ಶವ ಸಂಸ್ಕಾರಕ್ಕೆ ತೊಡಕಾಗುತ್ತಿದೆ ಎಂಬುದು ಆಯಾ ಭಾಗದ ನಾಗರಿಕರ ದೂರಾಗಿದೆ.  

'ಬಹುತೇಕ ಸ್ಮಶಾನದಲ್ಲಿ ವ್ಯವಸ್ಥಿತವಾದ ಚಿತಾಗಾರವಿಲ್ಲ. ನೀರಿನ ಸೌಕರ್ಯವಿಲ್ಲ. ಶವ ದಹಿಸಲು ಕಟ್ಟಿಗೆ ಸಂಗ್ರಹವಿಲ್ಲ. ಶವ ಹೊತ್ತು ಸಾಗುವ ಜಾಗ ಉಬ್ಬು ತಗ್ಗುಗಳಿಂದ ಕೂಡಿದೆ. ಕಸದ ತೊಟ್ಟಿ ವ್ಯವಸ್ಥೆ ಕೂಡ ಇಲ್ಲ. ಬೆಳಕಿನ ವ್ಯವಸ್ಥೆ ಇಲ್ಲ. ಕಾಲಕಾಲಕ್ಕೆ ಸೂಕ್ತ ನಿರ್ವಹಣೆಯಿಲ್ಲದೆ ಸ್ಮಶಾನಗಳ ಆವರಣಗಳು ಕಾಡಿನಂತೆ ಮಾರ್ಪಟ್ಟಿವೆ' ಎನ್ನುತ್ತಾರೆ ಗಣೇಶನಗರದ ಚಂದನ್ ನಾಯ್ಕ.

'ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ಬರುವ ವೃದ್ಧರು, ಅಂಗವಿಕಲರು, ಮಹಿಳೆಯರು ಮುಳ್ಳುಕಂಟಿ, ವಿಷಜಂತುಗಳ ಭಯ ಕಾಡುವ ಕಾರಣ ಕೃತಕ ಬೆಳಕಿನ ವ್ಯವಸ್ಥೆ ಮಾಡಿಕೊಂಡು ಬರುವಂತಾಗಿದೆ. ಆಕಸ್ಮಿಕ ದುರ್ಘಟನೆ, ಅಪಘಾತಗಳಂಥ ಸಂದರ್ಭದಲ್ಲಿ ಶವ ಸಂಸ್ಕಾರ ಹೆಚ್ಚಾಗಿ ರಾತ್ರಿ ವೇಳೆ ನಡೆಯುತ್ತವೆ. ಸ್ಮಶಾನದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಕತ್ತಲಲ್ಲೇ ಜನರು ಅಂತ್ಯಕ್ರಿಯೆ ನಡೆಸುವಂತಾಗಿದೆ' ಎನ್ನುತ್ತಾರೆ ಅವರು. 

'ಇತ್ತೀಚಿನ ವರ್ಷಗಳಲ್ಲಿ ಸ್ಮಶಾನದ ಅಭಿವೃದ್ಧಿಗೆ ಹಣ ಮೀಸಲಿಡಲಾಗುತ್ತಿದ್ದರೂ, ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಕನಿಷ್ಠ ಸ್ವಚ್ಛತೆ ಕಾಪಾಡಲೂ ಆಗದ ದುಸ್ಥಿತಿಗೆ ನಗರಾಡಳಿತ ತಲುಪಿದಂತಿದೆ' ಎಂಬುದು ನಗರಸಭೆ ಸದಸ್ಯರೊಬ್ಬರ ಮಾತಾಗಿದೆ.

ಪ್ರತಿ ವರ್ಷ ಸ್ಮಶಾನ ಅಭಿವೃದ್ಧಿಗೆ ಹಣ ಮೀಸಲಿಡಲಾಗುತ್ತದೆ. ಆದರೆ ಕನಿಷ್ಠ ಮೂಲಸೌಕರ್ಯ ಒದಗಿಸಲು ನಗರಾಡಳಿತ ವಿಫಲವಾಗಿದೆ
ಗಣೇಶ ಶೆಟ್ಟಿ ನಗರ ನಿವಾಸಿ 
ಸ್ಮಶಾನಗಳ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು
ಕಾಂತರಾಜ್ ಪೌರಾಯುಕ್ತ
ಮಾದರಿ ರುದ್ರಭೂಮಿ 
ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ದೃಷ್ಟಿಯಿಂದ ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ರುದ್ರಭೂಮಿಯಲ್ಲಿ ಕೇವಲ ಶವ ಸಂಸ್ಕಾರವಷ್ಟೇ ಮಾಡುತ್ತಿಲ್ಲ. ಇದರ ಆವರಣದಲ್ಲಿ ರಂಗಧಾಮ ನಿರ್ಮಿಸಿ ಸಾಂಸ್ಕೃತಿಕ ಕಲೆ ಸಾಹಿತ್ಯ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುವ ಕಾರ್ಯವಾಗಿದೆ. ವೈವಿಧ್ಯಮಯ ಹಣ್ಣಿನ ಗಿಡಗಳು ಗಮನ ಸೆಳೆಯುತ್ತವೆ. ಈ ಸ್ಮಶಾನದ ಸ್ವಚ್ಛತೆಗೆ ವಿವಿಧ ಸಂಘಟನೆಗಳು ಸ್ವಯಂ ಪ್ರೇರಣೆಯಿಂದ ಕೈಜೋಡಿಸುತ್ತಿವೆ. ಇಡೀ ಸ್ಮಶಾನದ ಆವರಣವನ್ನು ಅತಿಕ್ರಮಣವಾಗದಂತೆ ಭದ್ರಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT