ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಮಾಧ್ಯಮಗಳಿಂದ ಗೊತ್ತಾಗಿದೆ. ಆದರೆ, ಈ ತನಕವೂ ಪಕ್ಷ ಬಿಡುವ ಕುರಿತಾಗಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತಾಗಲಿ ನಮ್ಮೊಂದಿಗೆ ಚರ್ಚೆ ಮಾಡಿಲ್ಲ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಲ್.ಟಿ. ಪಾಟೀಲ ಹೇಳಿದರು.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಹೆಬ್ಬಾರ ಅವರನ್ನು ಸೋಲಿಸಲು ಸ್ವಪಕ್ಷೀಯರೇ ಕೆಲಸ ಮಾಡಿದ್ದಾರೆ ಎಂಬ ಆರೋಪವನ್ನು ಹೆಬ್ಬಾರ ಅವರು ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಪಕ್ಷ ಬಿಡುವಂಥ ಯಾವುದೇ ಬಲವಾದ ಕಾರಣ ಇದ್ದಂತೆ ಕಾಣುತ್ತಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಹತ್ತಿರ ಚರ್ಚೆ ಮಾಡಿದರೆ ಪರಿಹಾರ ಕಂಡುಕೊಳ್ಳಲು ಆಗುತ್ತದೆ. ಅವರು ಪಕ್ಷ ಬಿಡದಂತೆ ಮನವೊಲಿಸಲಾಗುವುದು’ ಎಂದು ಅವರು ಹೇಳಿದರು.
‘ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಶ್ರಮಕ್ಕೆ ಬೆಲೆ ನೀಡಿ, ಶಾಸಕ ಹೆಬ್ಬಾರ ಅವರು ಪಕ್ಷದಲ್ಲಿಯೇ ಇರುವ ವಿಶ್ವಾಸವಿದೆ. ರಾಜೀನಾಮೆ ನೀಡುವುದು ಅಥವಾ ಪಕ್ಷಾಂತರದ ಕುರಿತು ಸದ್ಯಕ್ಕೆ ಎದ್ದಿರುವ ಊಹಾಪೋಹಗಳಿಗೆ ಶಾಸಕ ಹೆಬ್ಬಾರ ಅವರು ತಿಲಾಂಜಲಿ ನೀಡಬೇಕು. ಈ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳೋಣ. ಹೆಬ್ಬಾರ ಅವರ ಹಿಂದೆ ಅಪಾರ ಜನ ಸಮೂಹ ಇದೆ. ಎಲ್ಲರೂ ಒಟ್ಟಾಗಿ ಬಿಜೆಪಿಯಲ್ಲಿದ್ದು ಜನರ ಸೇವೆ ಮಾಡೋಣ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದಾಗಲೂ, ಯಲ್ಲಾಪುರ ಕ್ಷೇತ್ರದ ಜನರು ಹೆಬ್ಬಾರ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಒಂದು ವೇಳೆ ಶಾಸಕ ಹೆಬ್ಬಾರ ಅವರು ಬಿಜೆಪಿ ತೊರೆದರೂ, ನಾನು ಬಿಜೆಪಿಯಲ್ಲಿಯೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಅವರು ಹೇಳಿದರು.
ಬಿಜೆಪಿ ಮುಖಂಡ ಡಿ.ಎಫ್. ಮಡ್ಲಿ, ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಚಲವಾದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.