ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯಮನೆ ಹಂಚಿಕೆಯಲ್ಲಿ ರಾಜಕೀಯ ಸಲ್ಲ: ಹೆಬ್ಬಾರ್

Published 25 ಸೆಪ್ಟೆಂಬರ್ 2023, 13:11 IST
Last Updated 25 ಸೆಪ್ಟೆಂಬರ್ 2023, 13:11 IST
ಅಕ್ಷರ ಗಾತ್ರ

ಶಿರಸಿ: ದೀನದಲಿತರಿಗೆ ವರದಾನವಾಗಿರುವ ಆಶ್ರಯ ಮನೆ ಹಂಚಿಕೆಯಲ್ಲಿ ಅಧಿಕಾರಿಗಳ ರಾಜಕೀಯವನ್ನು ಒಪ್ಪುವುದಿಲ್ಲ. ಬಡವರ ಈ ಯೋಜನೆ ಅವರಿಗೆ ಬೆನ್ನೆಲುಬಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ತಾಲ್ಲೂಕಿನ ಬನವಾಸಿಯಲ್ಲಿ ಹೋಬಳಿಯ ಫಲಾನುಭವಿಗಳಿಗೆ ವಸತಿ ಯೋಜನೆ ಮನೆ ಮಂಜೂರಾತಿ ಆದೇಶ ಪತ್ರ ಸೋಮವಾರ ವಿತರಣೆ ಮಾಡಿ ಮಾತನಾಡಿದರು. 

ಈಗ ನೀಡಲಾಗುತ್ತಿರುವ ಆದೇಶ ಪತ್ರ ಪಂಚಾಯಿತಿಗೆ ಸಹಜವಾಗಿ ಬಂದ ಮನೆಗಳಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ವಿಶೇಷ ಯತ್ನದ ಮೂಲಕ ಕ್ಷೇತ್ರಕ್ಕೆ 2.5 ಸಾವಿರ ಹೆಚ್ಚುವರಿ ಮನೆಗಳನ್ನು ಯಾವ ಪಂಚಾಯಿತಿಯಲ್ಲಿ ಜನಸಂಖ್ಯೆ ಜಾಸ್ತಿ ಇದೆ ಎಂಬುದನ್ನು ಆಧರಿಸಿ ಮನೆ ಹಂಚಿಕೆ ಮಾಡಿದ್ದೇವೆ ಎಂದರು.

ಚುನಾವಣೆ ಪೂರ್ವದಲ್ಲಿಯೇ ಮಂಜೂರಾದ ಮನೆ ಇದಾಗಿದ್ದರೂ ಹಂಚುವಿಕೆಯಲ್ಲಿ ವಿಳಂಬ ಮಾಡಿದ್ದಾರೆ. ಒಂದೊಮ್ಮೆ ಈ ಮನೆ ವಾಪಸ್ ಹೋದರೆ ಅಧಿಕಾರಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮನೆ ನಿರ್ಮಾಣಕ್ಕೆ ಕೇವಲ ₹1.20 ಲಕ್ಷ ನೀಡಲಾಗುತ್ತಿದೆ. ಅದೂ ವಾಪಸ್ ಹೋದರೆ ಬಡವರು ಏನು ಮಾಡಬೇಕು? ಮನೆ ನಿರ್ಮಾಣಕ್ಕೆ ಪಿಡಿಒ, ಅಧಿಕಾರಿಗಳು ಆಲಸ್ಯ ತೋರುವುದು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಪಿಡಿಒಗಳಿಗೆ ಎಲ್ಲ ಸೌಲಭ್ಯ ಒದಗಿಸಿದ್ದೇವೆ, ಉತ್ತಮ ವೇತನ ನೀಡುತ್ತಿದ್ದೇವೆ. ಆದರೂ ಬಡವರ ಪರ ಕಾಳಜಿ ತೋರದೇ ರಾಜಕಾರಣ ಮಾಡಿದರೆ ಸಹಿಸುವುದಿಲ್ಲ. ಬನವಾಸಿಯ ಸರ್ವತೋಮುಖ ಬೆಳವಣಿಗೆಗೆ ಶ್ರಮ ಹಾಕಿ ಎಂದರು.

ಕೆರೆ ತುಂಬಿಸುವ ಯೋಜನೆ ಅಪೂರ್ಣವಾದ ಹಿನ್ನೆಲೆಯಲ್ಲಿ ಈಗಾಗಲೇ ₹4 ಕೋಟಿ ಹೆಚ್ಚುವರಿ ಮಂಜೂರು ಮಾಡಿದ್ದೇನೆ. ಬನವಾಸಿ ಗ್ರಿಡ್‌ಗೆ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲ ಕೂತು ಬಗೆಹರಿಸಬೇಕು. ಬನವಾಸಿಯನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದು, ರೈತರಿಗೆ ಯಾವ ರೀತಿ ನೆರವಾಗಬೇಕು ಎಂಬ ಬಗ್ಗೆ ಅಧಿಕಾರಿಗಳು ಚಿಂತಿಸಬೇಕು ಎಂದು ಹೇಳಿದರು.

ಬನವಾಸಿಯ ನೀರಿನ ಸಮಸ್ಯೆಯನ್ನು ಬಗೆಹರಿಸಲು ವಿಶೇಷ ಯೋಜನೆ ಹಾಕಿಕೊಂಡಿದ್ದೇವೆ. ₹6 ಕೋಟಿ ವೆಚ್ಛದಲ್ಲಿ ಮೂರು ಕಡೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ 24 ಗಂಟೆಯೂ ನೀರು ಒದಗಿಸಲಾಗುತ್ತಿದೆ. ಮುಂದಿನ 20 ವರ್ಷದ ಬಳಕೆಯನ್ನು ದೃಷ್ಟಿಕೋನದಲ್ಲಿ ಇಟ್ಟು ಯೋಜನೆ ರೂಪಿಸಿ. ಈಗ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ನಿರ್ಮಾಣ ಜಾಗದ ಕುರಿತು ಇದ್ದ ಗೊಂದಲವನ್ನೂ ಬಗೆಹರಿಸಲಾಗಿದೆ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT