ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳುಮೆಣಸು ದರ ಕುಸಿತ, ಬೆಳೆಗಾರರು ಕಂಗಾಲು

ವಿಯೆಟ್ನಾಂ ಸರಕು ಭಾರತಕ್ಕೆ ಲಗ್ಗೆ: ಬೆಳೆಗಾರರು ಕಂಗಾಲು
Published 18 ಫೆಬ್ರುವರಿ 2024, 0:30 IST
Last Updated 18 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಶಿರಸಿ: ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ದರ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಒಂದು ವಾರದ ಹಿಂದೆ ಪ್ರತಿ ಕ್ವಿಂಟಲ್‍ಗೆ ₹60 ಸಾವಿರ ಆಸುಪಾಸಿನಲ್ಲಿದ್ದ ದರವು ಈಗ ₹54 ಸಾವಿರಕ್ಕೆ ಇಳಿಕೆಯಾಗಿದೆ. ಎರಡು ವರ್ಷಗಳಿಂದ ಸ್ಥಿರವಾಗಿದ್ದ ದರ ಹಂಗಾಮಿನ ಆರಂಭದಲ್ಲೇ ಇಳಿಮುಖವಾಗಿದೆ. ಇದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.

ಶಿರಸಿ ಎಪಿಎಂಸಿ ವ್ಯಾಪ್ತಿಯಲ್ಲಿ ವಾರದ ಹಿಂದೆ ಪ್ರತಿ ಕ್ವಿಂಟಲ್ ಕಾಳುಮೆಣಸಿಗೆ ₹61 ಸಾವಿರ ಗರಿಷ್ಠ ದರ ಇತ್ತು. ದಿಢೀರ್‌ ಕುಸಿತದಿಂದ ಈ ವರ್ಷ ಹೊಸ ಸರಕನ್ನು ಮಾರುಕಟ್ಟೆಗೆ ಪೂರೈಸಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ.

ವಿಯೆಟ್ನಾಂನಲ್ಲಿ ಕಾಳುಮೆಣಸಿನ ದರ ಪ್ರತಿ ಕ್ವಿಂಟಲ್‍ಗೆ ₹38 ಸಾವಿರದಿಂದ ₹42 ಸಾವಿರ ಇದೆ. ಅಲ್ಲಿಂದ ಅಪಾರ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ, ಉತ್ತರ ಭಾರತದ ರಾಜ್ಯಗಳ ಬಹುತೇಕ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಲಭಿಸುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.  

‘ಸ್ಥಳೀಯ ಮಾರುಕಟ್ಟೆಯಲ್ಲಿ ವಿದೇಶಿ ಸರಕನ್ನು ಅಗ್ಗದ ದರಕ್ಕೆ ಮಾರುತ್ತಿರುವುದೇ ಧಾರಣೆ ಕುಸಿತಕ್ಕೆ ಕಾರಣವಾಗಿದೆ. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಸ್ಥಳೀಯವಾಗಿ ಬೆಳೆದಿರುವ ಕಾಳಿನ ಗಾತ್ರವೂ ಕಡಿಮೆ ಆಗಿದೆ. ಇದು ಕೂಡ ಮಾರುಕಟ್ಟೆಯಲ್ಲಿ ದರ ಕುಸಿಯಲು ಕಾರಣವಾಗಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಬೆಳೆಗಾರರ ಹಿತ ಕಾಪಾಡಲು ಮನವಿ:

‘ರಾಜ್ಯದ ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಾಗಿ ಕಾಳುಮೆಣಸು ಬೆಳೆಯಲಾಗುತ್ತದೆ. ದೇಶದಲ್ಲಿ ವಾರ್ಷಿಕ ಉತ್ಪಾದನೆ 70 ಸಾವಿರ ಟನ್‌ ಇದೆ. ಇದರಲ್ಲಿ ಕರ್ನಾಟಕದ ಪಾಲು 33 ಸಾವಿರ ಟನ್‌ನಷ್ಟಿದೆ’ ಎಂದು ಶಿರಸಿಯ ಬೆಳೆಗಾರ ಸತೀಶ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಥಳೀಯ ಬೆಳೆಗಾರರ ಹಿತದೃಷ್ಟಿಯಿಂದ ಕಾಳುಮೆಣಸಿಗೆ ಸ್ಥಿರ ದರ ಲಭಿಸುವಂತೆ ಸರ್ಕಾರ ಅಗತ್ಯ ಕ್ರಮವಹಿಸಬೇಕು. ಅಕ್ರಮ ಆಮದಿಗೂ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು. 

ಕಾಳುಮೆಣಸಿನ ದರವು ಏರಿಳಿತವಾಗುತ್ತಿದೆ. ಬೆಳೆಗಾರರು ಆತಂಕಕ್ಕೆ ಒಳಗಾಗದೇ ಕಾದು ನೋಡುವುದು ಸೂಕ್ತ

-ವಿಜಯಾನಂದ ಭಟ್ ಪ್ರಭಾರ ಪ್ರಧಾನ ವ್ಯವಸ್ಥಾಪಕ ತೋಟಗಾರ್ಸ್ ಕೋ–ಆಪ್‌ರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT