ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಬಳಕೆಗೆ ಸಿಗದ ಪಾದಚಾರಿ ಮಾರ್ಗ

ಶಿರಸಿ: ಹೆಚ್ಚಿದ ಒತ್ತುವರಿ, ಅಕ್ರಮವಾಗಿ ಸ್ಥಾಪನೆಯಾಗುತ್ತಿವೆ ಗೂಡಂಗಡಿ
Published 30 ಮಾರ್ಚ್ 2024, 7:24 IST
Last Updated 30 ಮಾರ್ಚ್ 2024, 7:24 IST
ಅಕ್ಷರ ಗಾತ್ರ

ಶಿರಸಿ: ಜಿಲ್ಲೆಯ ವಾಣಿಜ್ಯ ನಗರಿ ಶಿರಸಿಯಲ್ಲಿ ಪಾದಚಾರಿ ಮಾರ್ಗದ ಅತಿಕ್ರಮಣಕ್ಕೆ ತಡೆಯೊಡ್ಡದ ಕಾರಣ ಪಾದಚಾರಿಗಳು ನಿರಾತಂಕವಾಗಿ ಸಾಗಲು ಮಾರ್ಗವಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.

ನಗರದಲ್ಲಿ ಪಾದಚಾರಿ ಮಾರ್ಗಕ್ಕಿಂತ ಅತಿಕ್ರಮಣಕ್ಕೆ ಒಳಗಾದ ರಸ್ತೆಗಳೇ ಹೆಚ್ಚು ಕಾಣಸಿಗುತ್ತಿವೆ. ಕೆಲ ಕಡೆ ಪಾದಚಾರಿ ಮಾರ್ಗಗಳಿದ್ದರೂ ನಡೆದಾಡಲು ಸೂಕ್ತವಾಗಿಲ್ಲ. ಅಲ್ಲಲ್ಲಿ ಹತ್ತಿ ಇಳಿದು ಸಂಚಾರ ಮಾಡುವ ದುಃಸ್ಥಿತಿ ಇದೆ. ನಗರದ ಕೋರ್ಟ್‌ ರಸ್ತೆ, ಸಿಪಿ ಬಝಾರ್, ಐದು ರಸ್ತೆ, ಹೊಸಪೇಟೆ ರಸ್ತೆ, ಶಿವಾಜಿ ಚೌಕ ಸೇರಿದಂತೆ ಹಲವೆಡೆ ಫುಟ್‌ಪಾತ್‌ ಆಕ್ರಮಿಸಿದ್ದರೆ, ಇನ್ನೂ ಹಲವು ಕಡೆ ಪಾದಚಾರಿ ಮಾರ್ಗವೇ ಇಲ್ಲ. ಇದರಿಂದ ಪಾದಚಾರಿಗಳು ರಸ್ತೆಯ ಮೇಲೆ ನಡೆಯುವುದು ಮಾತ್ರ ತಪ್ಪಿಲ್ಲ.

‘ಪಾದಚಾರಿಗಳ ಮಾರ್ಗಗಳು ಭರ್ಜರಿ ಆದಾಯ ತರುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ತರಕಾರಿ, ಮಿರ್ಚಿ ಭಜಿ, ಪಾನಿಪುರಿ, ತಿಂಡಿ ತಿನಿಸು ಮಾರುವ ತಳ್ಳುಗಾಡಿಗಳು, ಎಳನೀರು ಕೇಂದ್ರ, ಹಣ್ಣು ಹಂಪಲು ಮಾರಾಟದ ತಳ್ಳುಗಾಡಿ, ಗೂಡಂಗಡಿ, ಟೀ ಅಂಗಡಿ, ವಿವಿಧ ಆಟಿಕೆ ಸಾಮಾನುಗಳ ಅಂಗಡಿ ಇಡಲಾಗುತ್ತಿದೆ. ವಿವಿಧ ಕಡೆ ಪ್ರಮುಖ ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಅಂಗಡಿಗಳನ್ನು ಸ್ಥಾಪನೆ ಮಾಡಲಾಗಿದೆ. ಇನ್ನೂ ಕೆಲವರು ಸರ್ಕಾರದ ಜಾಗದಲ್ಲೇ ಡಬ್ಬಾ ಅಂಗಡಿಗಳನ್ನು ಸ್ಥಾಪಿಸಿ ಕೆಲವರಿಗೆ ಬಾಡಿಗೆ ಆಧಾರದ ಮೇಲೆ ನೀ‌ಡುತ್ತಿದ್ದಾರೆ. ಇದರಿಂದ ಸರ್ಕಾರದ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮಿಸಿಕೊಂಡು ಬಾಡಿಗೆ ನೀಡಲಾಗುತ್ತಿದೆ’ ಎಂಬುದು ಸಾರ್ವಜನಿಕರ ಆರೋಪ.

‘ನಗರದಲ್ಲಿ ಕೆಲವರು ಗೂಡಂಗಡಿಗಳ ಬಾಡಿಗೆ ವ್ಯವಹಾರ ನಡೆಸುತ್ತಿದ್ದಾರೆ. ನಗರಸಭೆ ಕಚೇರಿಯ ಎದುರೇ ಜಾಗ ಒತ್ತುವರಿ ಮಾಡಿ ಗೂಡಂಗಡಿ ನಿರ್ಮಿಸಲಾಗಿದೆ. ಇದರಿಂದ ಪಾದಚಾರಿಗಳು ರಸ್ತೆಯ ಮೇಲೆ ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂಬುದು ಜನರ ದೂರು.

‘ನಗರದಲ್ಲಿ ಹಲವೆಡೆ ಪಾದಚಾರಿ ಮಾರ್ಗ ಒತ್ತುವರಿ ರಾಜಾರೋಷವಾಗಿ ನಡೆದಿದೆ. ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸದೇ ಸುಮ್ಮನೆ ಕುಳಿತಿದ್ದಾರೆ. ಕೂಡಲೇ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪಿ.ಎಸ್.ಹೆಗಡೆ.

ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ತಂಡ ರಚನೆ ಮಾಡಲಾಗುವುದು. ಶೀಘ್ರವೇ ತೆರವುಗೊಳಿಸುವ ಕೆಲಸ ಮಾಡಲಾಗುವುದು

- ಕಾಂತರಾಜ್ ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT