ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಸೌಲಭ್ಯ ವಂಚಿತ ನೈಸರ್ಗಿಕ ‘ಪಕ್ಷಿಧಾಮ’

ಪ್ರವಾಸಿ ಸ್ನೇಹಿ ಸೌಕರ್ಯಗಳ ಅಳವಡಿಕೆಗೆ ಸೋಂದಾ ಜಾಗೃತ ವೇದಿಕೆ ಆಗ್ರಹ
Published 25 ಮೇ 2024, 7:08 IST
Last Updated 25 ಮೇ 2024, 7:08 IST
ಅಕ್ಷರ ಗಾತ್ರ

ಶಿರಸಿ: ದಶಕಗಳಿಂದ ವೈವಿಧ್ಯಮಯ ಪಕ್ಷಿಗಳಿಗೆ ನೆಲೆ ಒದಗಿಸಿ ನೈಸರ್ಗಿಕವಾಗಿ ಪಕ್ಷಿಧಾಮವಾಗಿ ರೂಪುಗೊಂಡ ತಾಲ್ಲೂಕಿನ ಸೋಂದಾ ಸಮೀಪದ ಮುಂಡಿಗೆಕೆರೆ ಪಕ್ಷಿಧಾಮ ಪ್ರವಾಸಿ ಸ್ನೇಹಿ ಸೌಲಭ್ಯಗಳಿಂದ ವಂಚಿತವಾಗಿದೆ. 

ಐತಿಹಾಸಿಕ ಸೋಂದಾ ಕ್ಷೇತ್ರದ ವ್ಯಾಪ್ತಿಯ ಸೋಂದಾ ಗ್ರಾಮದ ಬಾಡಲಕೊಪ್ಪ ಹಾಗೂ ಖಾಸಾಪಾಲ ಮಜರೆಗಳ ಮಧ್ಯದಲ್ಲಿ ಮುಂಡಿಗೆಕೆರೆ ಎನ್ನುವಲ್ಲಿ ಪಕ್ಷಿಗಳ ನೆಲೆವೀಡು ಕಂಡುಬರುತ್ತದೆ. ಸೋಂದಾ ಗ್ರಾಮದ ಕೆರೆ ಸರ್ವೆ ಸಂಖ್ಯೆ 141ರಲ್ಲಿ 4.14 ಕ್ಷೇತ್ರವನ್ನು ಆವರಿಸಿದೆ. ಕೆರೆಯ ತುಂಬೆಲ್ಲ ವ್ಯಾಪಕ ಮುಂಡಿಗೆ ಜಾತಿಯ ಸಸ್ಯ ವಿಫುಲವಾಗಿ ಬೆಳೆದು ಸುತ್ತೆಲ್ಲ ಹರಡಿಕೊಂಡಿದೆ. ಅದಕ್ಕೆಂದೇ ಮುಂಡಿಗೆ ಕೆರೆ ಎಂದೇ ಪರಿಚಿತವಾಗಿದೆ. ಹೀಗೆ ವಿಶಾಲವಾಗಿ ಹಬ್ಬಿದ ಮುಂಡಿಗೆ ಗಿಡಗಳ ಮಧ್ಯೆ ಪಕ್ಷಿಗಳಿಗೆ ಆಶ್ರಯ ತಾಣವಾಗಿ ಸಂತಾನೋತ್ಪತ್ತಿಗೆ ಸುರಕ್ಷಿತವಾಗಿ ಮಾರ್ಪಟ್ಟಿದೆ.

ಸ್ಥಳೀಯ ಹಾಗೂ ನಾನಾ ಕಡೆಗಳಿಂದ ಸಾವಿರಾರು ಪಕ್ಷಿಗಳು ಕೆರೆಗೆ ಪ್ರತಿ ವರ್ಷ ಬಂದು ಹೋಗುತ್ತಿರುತ್ತವೆ. ಅವುಗಳ ವೀಕ್ಷಣೆಗೆ ಮತ್ತು ಅಧ್ಯಯನಕ್ಕೆ ಪ್ರವಾಸಿಗರು, ಶಾಲಾ ಮಕ್ಕಳು, ಪಕ್ಷಿ ಪ್ರಿಯರು ಸೇರಿದಂತೆ ಸಾವಿರಾರು ಮಂದಿ ಬರುತ್ತಾರೆ. ಆದರೆ, ಸೌಲಭ್ಯಗಳ ಕೊರತೆಯು ಅವರನ್ನು ಕಾಡುತ್ತಿದೆ.

‘ಈಗಾಗಲೇ ಸೋಂದಾ ಜಾಗೃತ ವೇದಿಕೆಯ ಸತತ ಪ್ರಯತ್ನದ ಫಲವಾಗಿ 40 ಅಡಿ ಎತ್ತರದ ವೀಕ್ಷಣಾ ಗೋಪುರವನ್ನು ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ ನಿರ್ಮಿಸಿಕೊಟ್ಟಿದೆ. ಇದರಿಂದ ಒಂದಷ್ಟು ಅನುಕೂಲಗಳು ಆಗಿವೆ. ಆದರೆ ಇಷ್ಟಕ್ಕೆ ಸೀಮಿತವಾಗದೇ ಇನ್ನಷ್ಟು ಪೂರಕ ಕ್ರಮಗಳು, ಅಭಿವೃದ್ಧಿ ಕಾರ್ಯಗಳು ಅಲ್ಲಿ ಆಗಬೇಕಾಗಿವೆ’ ಎನ್ನುತ್ತಾರೆ ಸ್ಥಳಿಯರು.

‘ಮುಂಡಿಗೆ ಕೆರೆಯ ಏರಿ ದುರಸ್ತಿ ಹಾಗೂ ಒನಕೆ ತೂಬಿನ ವ್ಯವಸ್ಥೆಗೆ ಕ್ರಮವಾಗಿಲ್ಲ. ಮಾರ್ಗಸೂಚಿ ಫಲಕಗಳಿಲ್ಲ. ವಿವಿಧ ಪಕ್ಷಿಗಳ ಕುರಿತು ಫಲಕ ಸ್ಥಾಪನೆ, ಪಕ್ಷಿಗಳ ಬಗ್ಗೆ ಮಾಹಿತಿ ಕೊರತೆ ಪ್ರವಾಸಿಗರನ್ನು ಕಾಡುತ್ತಿದೆ. ಪ್ರವಾಸಿಗರನ್ನು ಸೆಳೆಯುವುದಕ್ಕೆ ಪೂರಕವಾಗಿ ಸಸ್ಯವನ ನಿರ್ಮಾಣ, ಆಸನದ ವ್ಯವಸ್ಥೆ, ವಿಶ್ರಾಂತಿ ಕೊಠಡಿ ನಿರ್ಮಾಣ, ಸುಲಭ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ಪಾರ್ಕಿಂಗ್ ಸೌಲಭ್ಯ, ವೀಕ್ಷಣಾ ಗೋಪುರಕ್ಕೆ ಹೋಗಲು ಅನುಕೂಲವಾಗುವಂತೆ ಫುಟ್ ಬ್ರಿಜ್ ನಿರ್ಮಾಣ, ಪಕ್ಷಿಗಳ ಕುರಿತು ಗ್ರಂಥಾಲಯ ನಿರ್ಮಾಣ, ವಾಚಮನ್ ನೇಮಕ, ವಸತಿ ಗೃಹ ಹಂತಹಂತವಾಗಿ ಈ ಪ್ರದೇಶದಲ್ಲಿ ಆಗಬೇಕಿದೆ’ ಎಂಬುದು ಸೋಂದಾ ಜಾಗೃತ ವೇದಿಕೆಯ ಪ್ರಮುಖ ರತ್ನಾಕರ ಬಾಡಲಕೊಪ್ಪ ಅವರ ಒತ್ತಾಯ.

ಮುಂಡಿಗೆಕೆರೆಯಲ್ಲಿ ಕಾಣುವ ಬಾಡಿಗಳು
ಮುಂಡಿಗೆಕೆರೆಯಲ್ಲಿ ಕಾಣುವ ಬಾಡಿಗಳು
ಮುಂಡಿಗೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಯಾಗಿದೆ. ಅದರ ಅಭಿವೃದ್ಧಿ ಸಂಬಂಧ ಗ್ರಾಮ ಸಭೆಯಲ್ಲಿ ಠರಾವಾದಂತೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.
–ರಾಮಚಂದ್ರ ಹೆಗಡೆ ಸೋಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT