ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆ: ನನಸಾಗದ ‘ಸ್ವಂತ ಕಟ್ಟಡ’ದ ಕನಸು

ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳು ಕಲಿಯುವ ಅನಿವಾರ್ಯತೆ
Published 2 ಫೆಬ್ರುವರಿ 2024, 4:53 IST
Last Updated 2 ಫೆಬ್ರುವರಿ 2024, 4:53 IST
ಅಕ್ಷರ ಗಾತ್ರ

ಶಿರಸಿ: ಜಾಗ ಮಂಜೂರಾಗಿ ಮೂರು ವರ್ಷ ಕಳೆದರೂ ಇಸಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಸ್ವಂತ ಕಟ್ಟಡದ ಕನಸು ನನಸಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದ ತರಗತಿಯಲ್ಲಿ ಮೂಲ ಸೌಕರ್ಯ ಕೊರತೆ ನಡುವೆ ವ್ಯಾಸಂಗ ಮಾಡುವಂತಾಗಿದೆ.

ತಾಲ್ಲೂಕಿನ ಇಸಳೂರು ಪಂಚಾಯಿತಿ ವ್ಯಾಪ್ತಿಯ ಡೊಂಬೆಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಅಂಬೇಡ್ಕರ್ ವಸತಿ ಶಾಲೆ ನಡೆಸಲಾಗುತ್ತಿದೆ. 2017ರಿಂದ ಈವರೆಗೂ ಇಲ್ಲಿನ ಬಾಡಿಗೆ ಕಟ್ಟಡದಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿದೆ. 

ವಸತಿ ಶಾಲೆಯಲ್ಲಿ ಹಾಲಿ 189 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಮಕ್ಕಳಿಗೆ ಕುಳಿತುಕೊಳ್ಳಲು ಸೂಕ್ತ ಡೆಸ್ಕ್, ಬೆಂಚ್ ವ್ಯವಸ್ಥೆ ಇಲ್ಲ. ಪ್ರತ್ಯೇಕ ವಸತಿಗೆ ಜಾಗದ ಕೊರತೆ ಕೂಡ ಇದ್ದು, ವಿದ್ಯಾರ್ಥಿಗಳು ಮೂಲ ಸೌಕರ್ಯ ಕೊರತೆ ನಡುವೆ ಕಲಿಯುತ್ತಿದ್ದಾರೆ. ಇದನ್ನು ಮನಗಂಡು ಆಗಿನ ರಾಜ್ಯ ಸರ್ಕಾರ 2020ರಲ್ಲಿ ತಾಲ್ಲೂಕಿನ ಹುಲೇಕಲ್ ಹೋಬಳಿಯ ಹುಲೇಕಲ್‍ನಲ್ಲಿ ಎರಡು ಎಕರೆ ಏಳು ಗುಂಟೆ ಜಾಗ ಮಂಜೂರು ಮಾಡಿತ್ತು.

‘ವಸತಿ ಶಾಲೆಗೆ ಮಂಜೂರಾಗಿರುವ ಜಾಗ ವಸತಿ ಶಾಲೆ ಸಮುಚ್ಛಯ ನಿರ್ಮಿಸುವಷ್ಟು ವಿಸ್ತಾರವಾಗಿಲ್ಲ. ಕನಿಷ್ಠ ನಾಲ್ಕು ಎಕರೆ ಇದ್ದರೆ ಅನುಕೂಲ ಆಗುತ್ತಿತ್ತು. ಈ ನಿಟ್ಟಿನಲ್ಲಿ ಬೇರೆ ಜಾಗದ ಹುಡುಕಾಟ ನಡೆಯುತ್ತಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕರು ಕಾಮಗಾರಿ ಗುತ್ತಿಗೆ ಕರೆದಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. 

‘ಈಗಿರುವ ಶಾಲೆಯಲ್ಲಿ ಮಕ್ಕಳ ಶೌಚಾಲಯ ಸರಿಯಾಗಿಲ್ಲ. ಬಿಸಿ ನೀರಿನ ವ್ಯವಸ್ಥೆಯಿಲ್ಲ. ವಸತಿಗೆ ಸರಿಯಾದ ಕೊಠಡಿಯಿಲ್ಲ. ಶಾಲೆಗೆ ಹೊಸ ಕಟ್ಟಡ ಈ ವರ್ಷವಾದರೂ ನಿರ್ಮಾಣವಾಗಬಹುದು ಎಂಬ ನಿರೀಕ್ಷೆ ಇತ್ತು. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರೂ ಅದೇ ಭರವಸೆ ನೀಡಿದ್ದರು. ಆದರೆ ಇನ್ನೂ ಇಕ್ಕಟ್ಟಾದ ಕಟ್ಟಡದಲ್ಲೇ ತರಗತಿ ನಡೆಸಲಾಗುತ್ತಿದೆ’ ಎಂದು ಪಾಲಕರೊಬ್ಬರು ದೂರಿದರು.

ಬಾಡಿಗೆ ಕಟ್ಟಡವಾದ್ದರಿಂದ ವಿದ್ಯಾರ್ಥಿಗಳಿಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಲು ಕಷ್ಟಸಾಧ್ಯ. ಸ್ವಂತ ಕಟ್ಟಡವಾದರೆ ವಿದ್ಯಾರ್ಥಿಗಳ ಜತೆ ಶಾಲೆಯ ಸಿಬ್ಬಂದಿಗೂ ವಸತಿಗೆ ಅನುಕೂಲ ಆಗುತ್ತದೆ ಚಂದ್ರಶೇಖರ ಇಸಳೂರು

-ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಪ್ರಾಚಾರ್ಯ

ಅನಿವಾರ್ಯವಾಗಿ ಬಾಡಿಗೆ ಕಟ್ಟಡ

‘ಬಾಡಿಗೆ ಕಟ್ಟಡದಲ್ಲಿರುವ ಶಾಲೆಗೆ ವಾರ್ಷಿಕ ₹5 ರಿಂದ ₹7 ಲಕ್ಷದವರೆಗೆ ಬಾಡಿಗೆ ನೀಡಲಾಗುತ್ತದೆ. ಹಲವಾರು ವರ್ಷಗಳಿಂದ ಈ ಶಾಲೆ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ. ಹುಲೇಕಲ್‍ನಲ್ಲಿ ಹೊಸ ಕಟ್ಟಡ ನಿರ್ಮಾಣ ಆಗದ ಕಾರಣ ಇಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದರೂ ಅನಿವಾರ್ಯವಾಗಿ ಇಲ್ಲಿಯೇ ಶಾಲೆ ನಡೆಸಬೇಕಾಗಿದೆ. ಹೆಚ್ಚುವರಿ ಕೊಠಡಿ ನೀಡಿದರೆ ಬಾಡಿಗೆಯ ದರವೂ ಹೆಚ್ಚಾಗುತ್ತದೆ. ಹೀಗಾಗಿ ಇರುವ ವ್ಯವಸ್ಥೆಯಲ್ಲೇ ಮಕ್ಕಳು ಕಲಿಯುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಸಮಸ್ಯೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT