ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ‘ಸಸ್ಯ ಶ್ಯಾಮಲಾ’ ರಕ್ಷಣೆ ಸವಾಲು

Published 29 ಫೆಬ್ರುವರಿ 2024, 5:44 IST
Last Updated 29 ಫೆಬ್ರುವರಿ 2024, 5:44 IST
ಅಕ್ಷರ ಗಾತ್ರ

ಶಿರಸಿ: ಶಾಲೆಗಳ ಹಸಿರೀಕರಣಕ್ಕೆ ಪೂರಕವಾಗಿ ‘ಸಸ್ಯ ಶ್ಯಾಮಲಾ’ ಯೋಜನೆಯಡಿ ನಾಟಿ ಮಾಡಿದ ಸಾವಿರಾರು ಗಿಡಗಳ ಸಂರಕ್ಷಣೆಯು ನೀರಿನ ಕೊರತೆಯಿಂದ ಸವಾಲಾಗಿದೆ.

‘ಸಸ್ಯ ಶ್ಯಾಮಲಾ’ ಯೋಜನೆಯಡಿ ಸೆಪ್ಟೆಂಬರ್ ತಿಂಗಳಲ್ಲಿ ಅರಣ್ಯ ಇಲಾಖೆಯ ವಿಭಾಗದ ಕಚೇರಿಗಳಿಂದ ಒದಗಿಸಲಾಗುವ ವಿವಿಧ ಬಗೆಯ ಸಸಿಗಳನ್ನು, ಆಯಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಶ್ರಮದಾನದ ಮೂಲಕ ನೆಟ್ಟು, ಪೋಷಿಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ 1,180 ಸರ್ಕಾರಿ ಶಾಲೆಗಳಲ್ಲಿ ಗಿಡಗಳ ನಾಟಿ ಮಾಡಲಾಗಿದೆ.

ಶಿರಸಿ ತಾಲ್ಲೂಕಿನಲ್ಲಿ 4321, ಸಿದ್ದಾಪುರ 690, ಯಲ್ಲಾಪುರ 1200, ಮುಂಡಗೋಡ 560, ಹಳಿಯಾಳ 838, ಜೊಯಿಡಾ 642 ಗಿಡಗಳನ್ನು ನೆಡಲಾಗಿದೆ. ವಿವಿಧ ಜಾತಿಯ 8 ಸಾವಿರಕ್ಕೂ ಹೆಚ್ಚು ಗಿಡಗಳು ಶಾಲೆಗಳ ಸುತ್ತಮುತ್ತ ಆಳದ ಗುಂಡಿ ತೋಡಿ, ಗೊಬ್ಬರ ಹಾಕಿ ಬೆಳೆಸಲಾಗುತ್ತಿದೆ. ಈ ಗಿಡಗಳ ನಾಟಿ ಮಾಡುವ ತಿಂಗಳಲ್ಲಿ ಉತ್ತಮ ಮಳೆಯಾಗಬೇಕಿತ್ತಾದರೂ ಮಳೆ ಕೊರತೆ ಕಾರಣಕ್ಕೆ ಆರಂಭದಲ್ಲೇ ಗಿಡಗಳು ನಿರೀಕ್ಷಿತ ಬೆಳವಣಿಗೆ ಕಂಡಿಲ್ಲ. ಇರುವ ಜಲಮೂಲವನ್ನೇ ಬಳಸಿಕೊಂಡು ಗಿಡಗಳ ರಕ್ಷಣೆ ಮಾಡಲು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪ್ರಯ್ನಿಸಿದ್ದಾರೆ.

ಆದರೆ, ಸದ್ಯ ನೀರಿನ ಕೊರತೆ, ಬಿಸಿಲ ತಾಪಕ್ಕೆ ಗಿಡಗಳೆಲ್ಲ ಬಾಡಲಾರಂಭಿಸಿವೆ. ಶಾಲಾ ಅವಧಿಯಲ್ಲಿ ಇತರ ಕೆಲಸಕ್ಕೆ ಬಳಸಿದ ನೀರನ್ನು ಗಿಡಗಳಿಗೆ ಹಾಕಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ.

‘ಶಾಲೆಗಳಲ್ಲಿ ಬಿಸಿಯೂಟ, ಕುಡಿಯಲು ನೀರಿಲ್ಲದಂತಾಗಿದೆ. ನೀರಿನ ಮೂಲಗಳು ಬತ್ತಿವೆ. ಬೇರೆಯವರ ಮನೆಯ ಬಾವಿಯಿಂದ ನೀರು ತಂದು ಬಳಸುವ ಸ್ಥಿತಿ ಎದುರಾಗಿದೆ. ಕೆಲವೆಡೆ ಸಮೀಪದ ಕೆರೆಯ ನೀರನ್ನು ಶುದ್ಧೀಕರಿಸಿ ಬಳಸುವ ಪರಿಸ್ಥಿತಿ ಇದೆ. ಇನ್ನೂ ಕೆಲವೆಡೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನೀರು ಪೂರೈಸಲಾಗುತ್ತಿದೆ. ಬೇಸಿಗೆ ರಜಾ ಅವಧಿಯಲ್ಲಿ ಗಿಡಗಳ ಪೋಷಣೆ ಕಷ್ಟವಾಗಬಹುದು’ ಎಂದು ಶಿಕ್ಷಕರೊಬ್ಬರು ಹೇಳಿದರು.

ಗಿಡಗಳ ರಕ್ಷಣೆಗೆ ಶಾಲಾ ಹಂತದಲ್ಲಿಯೇ ಪರಿಹಾರ ಕಲ್ಪಿಸಿಕೊಳ್ಳಲು ಸೂಚಿಸಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ನೀರು ಒದಗಿಸಲು ನಿರ್ದೇಶನ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ
ಪಿ.ಬಸವರಾಜ್ ಡಿಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT