ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷಹಂಸ’ ಕೃತಿ ಲೋಕಾರ್ಪಣೆ: ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಗ್ರಂಥ

Published 30 ಏಪ್ರಿಲ್ 2024, 20:25 IST
Last Updated 30 ಏಪ್ರಿಲ್ 2024, 20:25 IST
ಅಕ್ಷರ ಗಾತ್ರ

ಶಿರಸಿ: ಎಂಟು ದಶಕಗಳಿಂದ ಯಕ್ಷಗಾನ ಕ್ಷೇತ್ರದ ಆಳ-ಅಗಲ ಅರಿಯುವುದರ ಜತೆ ಯಕ್ಷಗಾನಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದ ಹೊಸ್ತೋಟ ಮಂಜುನಾಥ ಭಾಗವತರ ಕುರಿತ ‘ಯಕ್ಷಹಂಸ’ ಸಂಸ್ಮರಣ ಗ್ರಂಥವನ್ನು ಮಂಗಳವಾರ ಪಲ್ಲಕ್ಕಿಯಲ್ಲಿ ತಂದು, ಯಕ್ಷಗಾನದ ಹಿಮ್ಮೇಳದ ಮೂಲಕ ಬರಮಾಡಿಕೊಂಡು ವಿಶೇಷ ಗೌರವ ಸಲ್ಲಿಸಿ ಬಿಡುಗಡೆ ಮಾಡಲಾಯಿತು. ಗ್ರಂಥವನ್ನು ಭಾಗವತರ ಸಂಸ್ಮರಣ ಗ್ರಂಥ ಸಮಿತಿ ಪ್ರಕಟಿಸಿದೆ.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಂಥವನ್ನು ಬಿಡುಗಡೆ ಮಾಡಿದ ಹೆಗ್ಗೋಡು ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ ಅವರು, ‘ಹೊಸ್ತೋಟ ಮಂಜುನಾಥ ಭಾಗವತ ಅವರ ಕುರಿತು ದಂತ ಕತೆಗಳು ಸಾಕಷ್ಟಿದ್ದವು’ ಎಂದು ಒಡನಾಟ ನೆನಪಿಸಿಕೊಂಡರು. ‘ಯಕ್ಷಗಾನ, ತಾಳಮದ್ದಲೆ ಬಹುಸಂಖ್ಯಾತ ಕಲಾವಿದರ ರಂಗಭೂಮಿ. ಆದರೆ, ಯಕ್ಷಗಾನದಲ್ಲಿ ಕೆಲಸ ಮಾಡುವವರು ಪ್ರಸಿದ್ಧಿಗೆ ಬರುತ್ತಿಲ್ಲ. ಯಕ್ಷಗಾನ ಹಾಗೂ ತಾಳಮದ್ದಲೆಯನ್ನು ನೋಡುವ ಒಳಗಣ್ಣು ಮರೆಯಾಗುತ್ತಿರುವುದು ಇದಕ್ಕೆ ಕಾರಣ’ ಎಂದರು.

ಹಿರಿಯ ವಿದ್ವಾಂಸ ಪ್ರಭಾಕರ ಜೋಶಿ ಮಾತನಾಡಿ, ‘ಭಾಗವತರ ಕುರಿತಾದ ಪುಸ್ತಕಕ್ಕೆ ಪ್ರಧಾನ ಮಾರ್ಗದರ್ಶಕನಾಗಿದ್ದು ಬದುಕಿನಲ್ಲಿ ನನಗೆ ದೊಡ್ಡ ಗೌರವ ಸಿಕ್ಕಂತಾಗಿದೆ. ಅವರು ಮಾಡಿದ ಕೆಲಸ ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಭಾಗವತರು ದಕ್ಷಿಣೋತ್ತರ ಕನ್ನಡದಲ್ಲಿ ಯಕ್ಷಗಾನದ ಯುಗ ಪರಿವರ್ತಕರು. ಯಕ್ಷಗಾನದಲ್ಲಿ ಅಗಾಧ ಕೆಲಸ ಮಾಡಿದ್ದಾರೆ. ವೇಷಧಾರಿ, ಗುರು, ಕವಿ, ಮದ್ದಳೆಗಾರ, ಭಾಗವತ ಹೀಗೆ ಎಲ್ಲ ವಿಭಾಗಗಳಲ್ಲೂ ತಜ್ಞರಾಗಿದ್ದರು’ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ, ಪ್ರಕಾಶಕ ಕಿರಣ ಉಪಾಧ್ಯಾಯ, ಬರಹಗಾರ ಅಶೋಕ ಹಾಸ್ಯಗಾರ, ಕಲಾವಿದ ಸುಬ್ರಾಯ ಕೆರೆಕೊಪ್ಪ ಇತರರು ಇದ್ದರು. ಕಲಾವಿದ ಶಿವಾನಂದ ಹೆಗಡೆ ಕೆರೆಮನೆ ಸ್ವಾಗತಿಸಿದರು. ಗ್ರಂಥ ಸಂಪಾದಕಿ ವಿಜಯನಳಿನಿ ರಮೇಶ ಪ್ರಸ್ತಾವಿಕ ಮಾತನಾಡಿದರು. ಕವಿ ದಿವಾಕರ ಹೆಗಡೆ ಕೆರೆಹೊಂಡ‌ ಪರಿಚಯಿಸಿದರು. ಶೈಲಜಾ ಗೋರ್ನಮನೆ ನಿರ್ವಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT