ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಕ್ಕು ಹಿಡಿದ ‘ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್’

Published 30 ಜೂನ್ 2024, 6:20 IST
Last Updated 30 ಜೂನ್ 2024, 6:20 IST
ಅಕ್ಷರ ಗಾತ್ರ

ಕಾರವಾರ: ಎರಡು ದಶಕಗಳ ಹಿಂದೆ ಪ್ರವಾಸಿಗರನ್ನು ಭರಪೂರ ಆಕರ್ಷಿಸಿದ್ದ ‘ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್’ ಹೆಸರಿನ ಪುಟಾಣಿ ರೈಲು ಸ್ಥಗಿತಗೊಂಡು ದೀರ್ಘ ಕಾಲವಾಗಿದೆ. ಕಡಲತೀರದಲ್ಲಿರುವ ಶೆಡ್‍ನೊಳಗೆ ಲಕ್ಷಾಂತರ ಮೌಲ್ಯದ ಸರಂಜಾಮು ಸೇರಿದಂತೆ ಪುಟಾಣಿ ರೈಲು ತುಕ್ಕು ಹಿಡಿಯುತ್ತ ನಿಂತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ 1999ರಿಂದ ಸುಮಾರು 2006ರ ಅವಧಿಯಲ್ಲಿ ಪುಟಾಣಿ ರೈಲು ಓಡಾಟ ನಡೆಸುತ್ತಿತ್ತು. ಆಕರ್ಷಕ ರೈಲು ನಿಲ್ದಾಣ, ಕಡಲತೀರದ ಗುಂಟ ರೈಲಿನ ಓಡಾಟ ಜನರನ್ನು ಆಕರ್ಷಿಸುತ್ತಿತ್ತು. ಮರಳಿನಲ್ಲಿ ಅಳವಡಿಸಿದ ಹಳಿಗಳ ಮೇಲೆ ಓಡುವ ರೈಲಿನಲ್ಲಿ ಕುಳಿತು ಕಡಲತೀರದ ವಿಹಂಗಮ ನೋಟ ಸವಿಯಲು ಜನರು ಮುಗಿಬೀಳುತ್ತಿದ್ದರು.

ಆದರೆ, 2006ರ ಬಳಿಕ ಸ್ಥಗಿತಗೊಂಡ ಯೋಜನೆ ಸಂಪೂರ್ಣ ಮೂಲೆ ಗುಂಪಾಯಿತು. 18 ವರ್ಷಗಳಿಂದಲೂ ಕಡಲ ತೀರದಲ್ಲಿರುವ ಯುದ್ಧನೌಕೆ ವಸ್ತು ಸಂಗ್ರಹಾಲಯ ಉದ್ಯಾನದ ಮೂಲೆಯಲ್ಲಿರುವ ಶೆಡ್‍ನೊಳಗೆ ಪುಟಾಣಿ ರೈಲು ನಿಂತಿದೆ. ಸೋರುವ ಕಟ್ಟಡದಲ್ಲಿ ಮಳೆ ನೀರು ಜಿನುಗುತ್ತಿದ್ದು, ಲಕ್ಷಾಂತರ ಮೌಲ್ಯದ ರೈಲು ತುಕ್ಕು ಹಿಡಿದು ಬಳಕೆಗೆ ಬಾರದ ಸ್ಥಿತಿಗೆ ತಲುಪುತ್ತಿದೆ.

‘ಪ್ರವಾಸೋದ್ಯಮದ ದೃಷ್ಟಿಯಿಂದ ಪುಟಾಣಿ ರೈಲು ಯೋಜನೆ ಆರಂಭಿಸಿದ್ದರು. ಕಡಲ ತೀರದಲ್ಲಿ ಓಡಾಡುವ ರೈಲು ಏರಿ ಪಯಣಿಸಲು ದೇಶದ ವಿವಿಧೆಡೆಯಿಂದ ಜನರು ಬರುತ್ತಿದ್ದರು. ಯೋಜನೆ ಆರಂಭವಾದಾಗ ಸ್ವಾತಂತ್ರ್ಯ ದೊರೆತು 50 ವರ್ಷ ಕಳೆದ ಹಿನ್ನೆಲೆಯಲ್ಲಿ ರೈಲಿಗೆ ಸ್ವರ್ಣ ಜಯಂತಿ ಎಕ್ಸಪ್ರೆಸ್ ಎಂದೂ ನಾಮಕರಣ ಮಾಡಿದ್ದರು. ಮಳೆಗಾಲದಲ್ಲಿ ಕಡಲು ಕೊರೆತದಿಂದ ಪದೇ ಪದೇ ರೈಲು ಹಳಿಗೆ ಹಾನಿ ಉಂಟಾಗಿದ್ದರಿಂದ ರೈಲ್ವೆ ಓಡಾಟ ಹಲವು ಬಾರಿ ಸ್ಥಗಿತಗೊಂಡಿದ್ದೂ ಇದೆ. ಕೆಲ ಸಮಯದ ಬಳಿಕ ಮತ್ತೆ ಪುನರಾರಂಭಿಸು ತ್ತಿದ್ದರು. 2006ರಲ್ಲಿ ಐ.ಎನ್.ಎಸ್. ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಸ್ಥಾಪನೆಯ ಹೊತ್ತಿನಲ್ಲಿ ರೈಲು ಯೋಜನೆ ಕೈಬಿಟ್ಟಿದ್ದರು. ಆ ಬಳಿಕ ಪುನರಾರಂಭಿಸುವ ಪ್ರಯತ್ನವೂ ನಿಂತಿತು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಾಗರಾಜ ಜೋಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT