ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ನಿಧಾನಗತಿ

ಆರ್ಥಿಕ ವರ್ಷದ ಅಂತ್ಯ ಸಮೀಪಿಸಿದರೂ ಶೇ 43 ರಷ್ಟು ಮಾತ್ರ ಪ್ರಗತಿ
Published 7 ಫೆಬ್ರುವರಿ 2024, 4:39 IST
Last Updated 7 ಫೆಬ್ರುವರಿ 2024, 4:39 IST
ಅಕ್ಷರ ಗಾತ್ರ

ಕಾರವಾರ: ಆರ್ಥಿಕ ವರ್ಷ ಅಂತ್ಯಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿದ್ದರೂ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ನಿಧಾನಗತಿಯಲ್ಲಿ ಸಾಗಿದೆ.

229 ಗ್ರಾಮ ಪಂಚಾಯ್ತಿಗಳಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು ₹14.52 ಕೋಟಿ ಕರ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈವರೆಗೆ ಕೇವಲ ₹6.26 ಕೋಟಿ ಮಾತ್ರ ಸಂಗ್ರಹಗೊಂಡಿದ್ದು ಶೇ 43 ರಷ್ಟು ಪ್ರಗತಿ ಸಾಧನೆಯಾಗಿದೆ. ಹಿಂದಿನ ವರ್ಷದ ಬಾಕಿಯೂ ಸೇರಿದಂತೆ ಒಟ್ಟು ₹12.79 ಕೋಟಿ ತೆರಿಗೆ ಸಂಗ್ರಹಗೊಳ್ಳಬೇಕಿದೆ.

ಗ್ರಾಮ ಪಂಚಾಯ್ತಿಗಳು ಸಂಗ್ರಹಿಸುವ ಆಸ್ತಿ ತೆರಿಗೆಯಲ್ಲಿ ನೀರುಗಂಟಿಗಳ ವೇತನ, ಗ್ರಾಮಸಭೆ, ಜಾಗೃತಿ ಕಾರ್ಯಕ್ರಮಗಳು, ಸಭಾಭವನಗಳ ನಿರ್ವಹಣೆ ಸೇರಿದಂತೆ ಆಡಳಿತ ವೆಚ್ಚಕ್ಕೆ ಬಳಕೆ ಆಗುತ್ತವೆ. ಅಲ್ಲದೆ ಶೇ 25ರಷ್ಟು ಮೊತ್ತವನ್ನು ಪರಿಶಿಷ್ಟರ ವರ್ಗಕ್ಕೆ, ಶೇ 3 ರಷ್ಟನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ಕೆ, ಶೇ 2 ರಷ್ಟನ್ನು ಕ್ರೀಡಾ ಚಟುವಟಿಕೆಗೆ ವ್ಯಯಿಸಬೇಕೆಂಬ ನಿಯಮವಿದೆ.

ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗದ ಕಾರಣ ಅಗತ್ಯ ಚಟುವಟಿಕೆಗೆ ಆರ್ಥಿಕ ಹೊರೆ ಬೀಳುತ್ತಿದೆ. ಇದರಿಂದ ಪರಿಶಿಷ್ಟರ ಕಲ್ಯಾಣ, ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಹಣ ವ್ಯಯಿಸುತ್ತಿಲ್ಲ ಎಂಬ ಆರೋಪಗಳು ಗ್ರಾಮ ಪಂಚಾಯಿತಿಗಳ ಮೇಲಿದೆ.

‘ಆಸ್ತಿ ತೆರಿಗೆ ಸಂಗ್ರಹಣೆಯ ಪ್ರಮಾಣವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕೆಂಬ ನಿಯಮಾವಳಿ ಇದೆ. ಉಪನೋಂದಣಾಧಿಕಾರಿ ನಿರ್ಧರಿಸಿದ ಆಯಾ ಗ್ರಾಮಗಳ ಜಮೀನುಗಳ ಮೌಲ್ಯ, ಕಟ್ಟಡಗಳ ಮೌಲ್ಯಮಾಪನ ಆಧರಿಸಿ ತೆರಿಗೆ ಪ್ರಮಾಣ ನಿಗದಿಯಾಗುತ್ತದೆ. ಅವುಗಳನ್ನು ಗ್ರಾಮಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದ ಬಳಿಕ ಅಂತಿಮಗೊಳಿಸಲಾಗುತ್ತದೆ’ ಎಂದು ಪಿಡಿಒ ಒಬ್ಬರು ತಿಳಿಸಿದರು.

‘ಗುಡ್ಡಗಾಡು ಜಿಲ್ಲೆಯಾಗಿರುವ ಕಾರಣ ಮಳೆಗಾಲದ ನಾಲ್ಕು ತಿಂಗಳು ತೆರಿಗೆ ಸಂಗ್ರಹ ಕಷ್ಟ. ತೆರಿಗೆ ಪ್ರಮಾಣ ನವೆಂಬರ್ ವೇಳೆಗೆ ನಿರ್ಧರಿಸಲಾಗುತ್ತದೆ. ಆ ಬಳಿಕ ಸಂಗ್ರಹ ಕಾರ್ಯ ಆರಂಭಗೊಳ್ಳುತ್ತದೆ. ಬಹುತೇಕ ಜನರು ಜನವರಿಯಿಂದ ಮಾರ್ಚ್ ಅವಧಿಯೊಳಗೆ ತೆರಿಗೆ ಪಾವತಿಗೆ ಮುಂದಾಗುತ್ತಾರೆ. ಕೃಷಿ ಫಸಲು ಕೈಸೇರಿದ ಬಳಿಕ ಅದರ ಮಾರಾಟದಿಂದ ತೆರಿಗೆ ಮೊತ್ತ ಪಾವತಿಸುವುದರಿಂದ ಮಾರ್ಚ್ ಅಂತ್ಯದ ವೇಳೆಗೆ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ. ಅದಕ್ಕಿಂತ ಮೊದಲು ಅಷ್ಟೇನೂ ತೆರಿಗೆ ಸಂಗ್ರಹವಾಗದು’ ಎಂದರು.

ನೆಟ್‍ವರ್ಕ್ ಸಮಸ್ಯೆ

ಗ್ರಾಮ ಪಂಚಾಯಿತಿಗಳಿಗೆ ಆಸ್ತಿ ತೆರಿಗೆ ಸಂಗ್ರಹಣೆಗೆ ನಗದು ರಹಿತ ವ್ಯವಸ್ಥೆ ಕಲ್ಪಿಸಲು ಸ್ವೈಪಿಂಗ್ ಮಶಿನ್ (ಪಿ.ಒ.ಎಸ್ ಯಂತ್ರ) ಒದಗಿಸಲಾಗಿದೆ. ಆದರೆ, ಅವುಗಳ ಮೂಲಕ ಪಾವತಿ ನೀಡಲು ನೆಟ್‍ವರ್ಕ್ ಸಮಸ್ಯೆ ಎದುರಾಗುತ್ತಿದೆ ಎಂಬುದು ಹಲವು ಪಿಡಿಒಗಳ ದೂರು.

‘ಸ್ವೈಪಿಂಗ್ ಯಂತ್ರದಲ್ಲಿ ಆಸ್ತಿ ಸಂಖ್ಯೆ ನಮೂದಿಸಿದ ತಕ್ಷಣ ತೆರಿಗೆ ಪ್ರಮಾಣ, ಮಾಹಿತಿ ಒಳಗೊಂಡ ಪಾವತಿ ಚೀಟಿ ದೊರೆಯುತ್ತದೆ. ಆದರೆ ಯಂತ್ರ ಕಾರ್ಯಾಚರಿಸಲು ಇಂಟರನೆಟ್ ಸಂಪರ್ಕ ಅಗತ್ಯವಿದೆ. ಪದೇ ಪದೇ ನೆಟ್‍ವರ್ಕ್ ಕೈಕೊಡುವುದರಿಂದ ತೆರಿಗೆ ಸಂಗ್ರಹಕ್ಕೆ ಅಡ್ಡಿಯಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಪಿಡಿಒ ಒಬ್ಬರು ಸಮಸ್ಯೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT