ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬೂತ್ ಮಟ್ಟದಲ್ಲಿ 15 ಸದಸ್ಯರ ತಂಡ

ಗ್ರಾಮೀಣ ಮಟ್ಟದಲ್ಲೂ ಕೊರೊನಾ ನಿಯಂತ್ರಣಕ್ಕೆ ಕ್ರಮ: ಸಚಿವ ಶಿವರಾಮ ಹೆಬ್ಬಾರ
Last Updated 20 ಜುಲೈ 2020, 13:51 IST
ಅಕ್ಷರ ಗಾತ್ರ

ಕಾರವಾರ: ‘ನಮ್ಮ ರಕ್ಷಣೆ, ನಮ್ಮ ಆರೋಗ್ಯ’ಎಂಬ ಧ್ಯೇಯವಾಕ್ಯದ ಅಡಿಯಲ್ಲಿಜಿಲ್ಲೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ15 ಜನರ ತಂಡವನ್ನು ಇನ್ನು 10 ದಿನಗಳಲ್ಲಿ ರಚಿಸಲಾಗುತ್ತದೆ. ಇದು ರಾಜ್ಯದಲ್ಲೇ ಪ್ರಥಮ ಪ್ರಯೋಗವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೊರೊನಾ ವೈರಸ್ ಹರಡುವುದನ್ನು ತಡೆಯಲು ಈ ತಂಡಗಳು ಸಹಕಾರಿಯಾಗಲಿವೆ. ಬೂತ್ ಮಟ್ಟದಲ್ಲಿ ಯಾರೇ ಬಂದರೂ ಈ ತಂಡದಿಂದ ಮಾಹಿತಿ ಸಿಗಲಿದೆ.ವಿವಿಧ ಇಲಾಖೆಗಳ ಐವರು ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಶಾನುಭಾಗರು, ಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಮಾಜದ ಪ್ರಮುಖರು ತಂಡದಲ್ಲಿ ಇರಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಹಾಸಿಗೆ ಹೆಚ್ಚಿಸಲು ಕ್ರಮ:‘ಕೋವಿಡ್ ಪೀಡಿತರ ಚಿಕಿತ್ಸೆಗೆ ಜಿಲ್ಲೆಯಲ್ಲಿ ಈಗ 3,500 ಹಾಸಿಗೆಗಳು ಸಿದ್ಧ ಇವೆ. ಇನ್ನೂ 2,000 ಹಾಸಿಗೆಗಳನ್ನು ಅಳವಡಿಸಲು ಅಣಿಯಾಗಿದ್ದೇವೆ. ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಕೋವಿಡ್ ಅವಧಿಯನ್ನು ಸದ್ಬಳಕೆ ಮಾಡಲಾಗಿದೆ. ಈಗ ಚಿಕಿತ್ಸೆ ಪಡೆಯುತ್ತಿರುವ ಯಾರೂ ಅಪಾಯದಲ್ಲಿಲ್ಲ. ಕೋವಿಡ್ ಬಗ್ಗೆ ಎಚ್ಚರಿಕೆ ಅಗತ್ಯವೇ ಹೊರತು ಹೆದರಿಕೆ ಬೇಡ’ ಎಂದು ಹೇಳಿದರು.

‘ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವಕೋವಿಡ್ಸೋಂಕಿತರಿಗೆ ಯಾವುದೇ ಸಮಸ್ಯೆಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾರನ್ನೂ ತಾರತಮ್ಯದಿಂದ ಕಾಣಬಾರದು. ಪ್ರತಿಯೊಬ್ಬರಿಗೂ ಉತ್ತಮ ಚಿಕಿತ್ಸೆ ಲಭಿಸಬೇಕು. ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ಹಿರಿಯರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಬೇಕು’ ಎಂದು ಸೂಚಿಸಿದರು.

ಅಲ್ಪಸಂಖ್ಯಾತರಕಲ್ಯಾಣಇಲಾಖೆಯ ಪ್ರಗತಿ ಪರಿಶೀಲಿಸಿದ ಅವರು, ‘ಕಾರವಾರಕ್ಕೆ ಮಂಜೂರಾಗಿರುವ ಅಲ್ಪಸಂಖ್ಯಾತ ಬಾಲಕಿಯರ ವಸತಿ ನಿಲಯವನ್ನು ಭಟ್ಕಳದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಬಾಲಕಿಯರಿಗೆ ಅನುಕೂಲವಾಗಲಿದೆ’ ಎಂದು ಸೂಚಿಸಿದರು.

‘ಅಧಿಕೃತ ಔಷಧಿ ಸಿದ್ಧವಾಗಿಲ್ಲ’:‘ಕೋವಿಡ್– 19ಗೆ ಅಧಿಕೃತವಾದ ಔಷಧಿ ಇನ್ನೂ ಸಿದ್ಧವಾಗಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಸೂಚಿಸಿದ ಔಷಧಿಯೇಅಧಿಕೃತವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರಸ್ಪಷ್ಟಪಡಿಸಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಕಂಪನಿಗಳ ಔಷಧಗಳನ್ನು ಕೋವಿಡ್– 19ಚಿಕಿತ್ಸೆಗೆ ಪರಿಣಾಮಕಾರಿ ಎಂದು ಬಿಂಬಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದರ ಬಗ್ಗೆ ನಿಗಾ ವಹಿಸಬೇಕು’ ಎಂದು ಅವರು ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ್ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT