ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳ ಆದಾಯಕ್ಕೆ ‘ಶಕ್ತಿ’

2023–24ನೇ ಸಾಲಿನಲ್ಲಿ ಹೆಚ್ಚಿದ್ದ ಭಕ್ತರ ಸಂಖ್ಯೆ: ಕಾಣಿಕೆ ಸಂಗ್ರಹದಲ್ಲಿ ಚೇತರಿಕೆ
Published 9 ಏಪ್ರಿಲ್ 2024, 6:31 IST
Last Updated 9 ಏಪ್ರಿಲ್ 2024, 6:31 IST
ಅಕ್ಷರ ಗಾತ್ರ

ಕಾರವಾರ: ಆರ್ಥಿಕ ವರ್ಷ ಮುಗಿಯುತ್ತಿದ್ದಂತೆಯೇ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ವಾರ್ಷಿಕ ಆದಾಯದ ಮಾಹಿತಿ ಪ್ರಕಟಿಸಿದ್ದು, ಜಿಲ್ಲೆಯ ಕೆಲವು ದೇವಾಲಗಳ ಆದಾಯವು ಕಳೆದ ವರ್ಷಕ್ಕಿಂತ ಏರಿಕೆಯಾಗಿರುವುದು ದೃಢಪಟ್ಟಿದೆ.

ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಿದ ‘ಶಕ್ತಿ’ ಯೋಜನೆ ಜಾರಿಗೊಂಡ ಬಳಿಕ ದೇವಾಲಯಗಳಿಗೆ ಭಕ್ತರ ಸಂಖ್ಯೆ ಗಣನೀಯ ಹೆಚ್ಚಳವಾಗಿತ್ತು. ಪ್ರಮುಖ ದೇವಾಲಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ, ಹಬ್ಬದ ವೇಳೆಯಲ್ಲಿ ಭಕ್ತರ ಜಂಗುಳಿ ಕಂಡುಬಂದಿತ್ತು. ಇದು ದೇವಾಲಯಗಳ ಆದಾಯ ಹೆಚ್ಚಲು ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಎ ದರ್ಜೆಯ ದೇವಾಲಯಗಳ ಪಟ್ಟಿಯಲ್ಲಿರುವ ಶಿರಸಿಯ ಮಾರಿಕಾಂಬಾ, ಇಡಗುಂಜಿಯ ಸಿದ್ಧಿವಿನಾಯಕ, ಭಟ್ಕಳದ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಾಲಯಗಳು ಆದಾಯ ಮಾಹಿತಿ ನೀಡಿಲ್ಲ. ಉಳಿದ ಆರು ದೇವಾಲಯಗಳು ಮಾಹಿತಿ ನೀಡಿವೆ. ಈ ಪೈಕಿ ಶಿರಸಿ ತಾಲ್ಲೂಕಿನ ಮಂಜುಗುಣಿಯ ವೆಂಕಟರಮಣ ದೇವಾಲಯವು 2023–24ನೇ ಸಾಲಿನಲ್ಲಿ ₹2.02 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಈ ದೇವಾಲಯವು ₹1.74 ಕೋಟಿ ಆದಾಯ ಗಳಿಸಿತ್ತು.

ಎ ದರ್ಜೆಯ ದೇವಾಲಯಗಳಾದ ಮುರ್ಡೇಶ್ವರದ ಮಾತ್ಹೋಬಾರ ಮುರ್ಡೇಶ್ವರ ದೇವಾಲಯ, ಭಟ್ಕಳ ತಾಲ್ಲೂಕಿನ ಕಡವಿನಕಟ್ಟಾದ ದುರ್ಗಾಪರಮೇಶ್ವರಿ ದೇವಾಲಯ, ಕುಮಟಾ ತಾಲ್ಲೂಕು ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯದ ಆದಾಯ ಕಳೆದ ವರ್ಷಕ್ಕಿಂತ ಅಲ್ಪ ಏರಿಕೆಯಾಗಿದೆ. ಶಿರಸಿಯ ಮಹಾಣಪತಿ ದೇವಾಲಯ ಮತ್ತು ಭಟ್ಕಳ ತಾಲ್ಲೂಕು ಸೂಸಗಡಿಯ ಚನ್ನಪಟ್ಟಣ ಹನುಮಂತ ದೇವಾಲಯದ ಆದಾಯವು ಇಳಿಕೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟೂ 9 ಎ ದರ್ಜೆಯ ದೇವಸ್ಥಾನಗಳು, 8 ಬಿ ದರ್ಜೆಯ ದೇವಸ್ಥಾನಗಳು, 645 ಸಿ ದರ್ಜೆಯ ದೇವಸ್ಥಾನಗಳು ಇವೆ. ಇದರ ಹೊರತಾಗಿ ನೂರಾರು ಖಾಸಗಿ ದೇವಾಲಯಗಳೂ ಇವೆ. ಖಾಸಗಿ ದೇವಸ್ಥಾನಗಳನ್ನು ಹೊರತುಪಡಿಸಿ ಉಳಿದೆಲ್ಲ ದೇವಾಲಯಗಳಿಂದ ಮುಜರಾಯಿ ಇಲಾಖೆ ಪ್ರತಿ ವರ್ಷ ಆದಾಯದ ಮಾಹಿತಿ ಸಂಗ್ರಹಿಸುತ್ತಿದೆ.

‘ದೇವಾಲಯಗಳಿಗೆ ಸಂದಾಯವಾಗುವ ದೇಣಿಗೆ, ಭಕ್ತರಿಂದ ಬಂದ ಕಾಣಿಕೆ, ಧಾರ್ಮಿಕ ಸೇವೆಗಳಿಂದ ಸಂಗ್ರಹವಾದ ಆದಾಯ ಸೇರಿದಂತೆ ವಾರ್ಷಿಕವಾಗಿ ದೇವಾಲಯಕ್ಕೆ ಬಂದ ಒಟ್ಟು ಆದಾಯದ ಮಾಹಿತಿ ಸಂಗ್ರಹಿಸಲಾಗುತ್ತದೆ. ಕೆಲವು ದೇವಾಲಯಗಳು ಸಕಾಲಕ್ಕೆ ಮಾಹಿತಿ ನೀಡುತ್ತಿವೆ. ಕೆಲ ದೇವಾಲಯಗಳ ಆಡಳಿತ ಮಂಡಳಿಗಳು ಮಾಹಿತಿ ನೀಡಲು ನಿರಾಕರಿಸುತ್ತಿವೆ’ ಎಂದು ಮುಜರಾಯಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT