ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಹಿಷ್ಣುತೆ ವಿಶ್ವ ಮಾನವ ಗುಣ: ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್

ಕಲ್ಲೂರು ಎಜುಕೇಷನ್ ಟ್ರಸ್ಟ್‌ನ ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ
Last Updated 3 ಜನವರಿ 2022, 12:46 IST
ಅಕ್ಷರ ಗಾತ್ರ

ಕಾರವಾರ: ‘ಎಲ್ಲ ಧರ್ಮಗಳನ್ನು ಗೌರವಿಸುವುದೇ ವಿಶ್ವ ಮಾನವನ ಗುಣ. ಕುವೆಂಪು ಹೇಳಿದ ಈ ಸಂದೇಶದಂತೆ ಎಲ್ಲರೂ ಬದುಕಬೇಕು’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ, ಕಲ್ಲೂರು ಎಜುಕೇಷನ್ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿದ್ದ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್‌, ‘ವಿದ್ಯಾಭ್ಯಾಸ ಮಾಡದಿದ್ದರೆ ಮುಂದೆ ಏನಾಗಬಹುದು ಎಂಬ ಭಯವೇ ಓದಿಗೆ ಸ್ಫೂರ್ತಿಯಾಗಬೇಕು’ ಎಂದರು.

ಮಾಜಿ ಶಾಸಕ ಗಂಗಾಧರ ಭಟ್, ‘ವಿದ್ಯಾರ್ಥಿಗಳಲ್ಲಿ ಅಯೋಗ್ಯರು ಯಾರೂ ಇಲ್ಲ. ಅವರವರ ಸಾಮರ್ಥ್ಯಕ್ಕೆ ಸರಿಯಾಗಿ ಅವರು ಮುಂದೆ ಬರುತ್ತಾರೆ. ಎಲ್ಲ ವಿದ್ಯಾರ್ಥಿಗಳನ್ನು ಒಂದೇ ದೃಷ್ಟಿಯಿಂದ ಕಾಣಬೇಕು’ ಎಂದು ಅಭಿಪ್ರಾಯಪಟ್ಟರು.

ಸಾಧಕರಿಗೆ ಸನ್ಮಾನ:‘ಪದ್ಮಶ್ರೀ’ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಭಾನುವಾರವೇ ‘ವಿದ್ಯಾರತ್ನ’ ಗೌರವವನ್ನು ಕಲ್ಲೂರು ಎಜುಕೇಷನ್ ಟ್ರಸ್ಟ್‌ನಿಂದ ಪ್ರದಾನ ಮಾಡಲಾಯಿತು. ಉಳಿದಂತೆ, ಸಮಾಜ ಸೇವಕ ಸ್ಯಾಮ್ಸನ್ ಡಿಸೋಜಾ ಅವರಿಗೆ ‘ಸಮಾಜ ಸೇವಾ ರತ್ನ’, ಶಿಕ್ಷಕರಾದ ದಿನೇಶ ಗಾಂವ್ಕರ್ ಅವರಿಗೆ‘ಗುರು ಶ್ರೇಷ್ಠ’, ಗಣೇಶ ಭಿಷ್ಠಣ್ಣನವರ್ ಅವರಿಗೆ ‘ಶಿಕ್ಷಣ ರತ್ನ’ ಗೌರವದೊಂದಿಗೆ ಸನ್ಮಾನಿಸಲಾಯಿತು. ಕಳೆದ ಬಾರಿಯ ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.

ಕೆರವಡಿ ಸರ್ಕಾರಿ ಪ್ರೌಢಶಾಲೆಯ ದೀಕ್ಷಿತಾ ಆಚಾರ್ಯ, ಚಿತ್ತಾಕುಲಾ ಪ‍್ರೌಢಶಾಲೆಯ ರಮ್ಯಾ ರಾಯ್ಕರ್ ಹಾಗೂ ಶಿವಾಜಿ ವಿದ್ಯಾ ಮಂದಿರದ ಪಲಕ್ ತಳೇಕರ್, ಸೌದಿ ಅರೇಬಿಯಾದಲ್ಲಿ ವೈದ್ಯೆಯಾಗಿರುವ ಕೌಸರ್ ಬಾನು ಹಾಗೂ ಮಂಗಳೂರಿನ ಪ್ರೊ.ಶಬಾನಾ ಬೇಗಂ ಅವರನ್ನು ಕಲ್ಲೂರು ಎಜುಕೇಷನ್ ಟ್ರಸ್ಟ್‌ನಿಂದ ಅಭಿನಂದಿಸಲಾಯಿತು.

ಕಲ್ಲೂರು ಎಜಕೇಷನ್ ಟ್ರಸ್ಟ್‌ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ನಿಕೇತನ ಸಂಗೀತ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಗಣೇಶ ಭಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.

ಅಸ್ನೋಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಯ.ಜಿ.ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಅಸ್ನೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ ಕೊಠಾರಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ ನಾಯ್ಕ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ರಾಮ ನಾಯ್ಕ, ಸಮಾಜಸೇವಕ ಸ್ಯಾಮ್ಸನ್ ಡಿಸೋಜಾ, ಶಿವಾಜಿ ವಿದ್ಯಾ ಮಂದಿರದ ದಿನೇಶ ಗಾಂವ್ಕರ್, ಪ್ರಮುಖರಾದ ಅಲ್ತಾಫ್ ಶೇಖ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT