ಮುಂಡಗೋಡದ ಬಸ್ ನಿಲ್ದಾಣ ರಸ್ತೆಯಲ್ಲಿ ವಾಹನಗಳು ಟ್ರಾಫಿಕ್ ಸಮಸ್ಯೆಗೆ ಸಿಲುಕಿರುವುದು.
ದಾಂಡೇಲಿ ನಗರದ ಲಿಂಕ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿರುವುದು.
ಗೋಕರ್ಣದ ಮುಖ್ಯ ದೇವಸ್ಥಾನದ ಎದುರಿನ ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿರುವುದು.

ಶಾಲೆ ಬಿಡುವ ಸಮಯದಲ್ಲಿ ಪ್ರಮುಖ ಹೆದ್ದಾರಿಯಲ್ಲೇ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿ ಮಕ್ಕಳಿಗೆ ಪಾಲಕರಿಗೆ ತೊಂದರೆಯಾಗುತ್ತಿದೆ
ಗೋಪಾಲಕೃಷ್ಣ ಭಟ್ಟ ಯಲ್ಲಾಪುರ ಪಾಲಕ
ಪಾದಚಾರಿ ಮಾರ್ಗ ವ್ಯಾಪಾರಿಗಳಿಂದ ಒತ್ತುವರಿ ಆಗಿರುವುದರಿಂದ ಪಾದಚಾರಿಗಳು ರಸ್ತೆ ಮೇಲೆಯೇ ನಡೆಯಬೇಕು. ಸಂಚಾರ ನಿಯಮ ಪಾಲನೆ ಆಗದಿರುವುದು ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಲು ಕಾರಣ
ಪ್ರಕಾಶ್ ಮುಂಡಗೋಡ ನಿವಾಸಿ
ಪ್ರವಾಸಿಗರ ಆಗಮನದ ಕಾರಣ ವಾರದ ಕೊನೆಯಲ್ಲಿ ಹೆದ್ದಾರಿಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ
ಪ್ರಸನ್ನ ಶೇಟ್ ಹೊನ್ನಾವರ ನಿವಾಸಿಜಾರಿಗೆ ಬಾರದ ಆದೇಶ
ಗೋಕರ್ಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು ವಾಹನ ದಟ್ಟಣೆಯಿಂದ ಇಲ್ಲಿಯ ಜನತೆ ಹೈರಾಣಾಗಿದ್ದಾರೆ. ಸಾಲು ಸಾಲು ರಜಾ ದಿನಗಳಲ್ಲಂತೂ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು ಸವಾಲಿನ ಕೆಲಸವಾಗಿದೆ. 2013ರ ಜನವರಿಯಲ್ಲಿ ಆಗಿನ ಜಿಲ್ಲಾಧಿಕಾರಿ ಗೋಕರ್ಣದ ಮುಖ್ಯ ರಸ್ತೆಯಲ್ಲಿ ಏಕಮುಖ ಸಂಚಾರವಾಗಿ ವಾಹನಗಳು ಚಲಿಸುವಂತೆ ಆದೇಶ ಜಾರಿಗೊಳಿಸಿದ್ದರು. ಆದರೆ ಆದೇಶ ಇನ್ನೂ ಜಾರಿಗೆ ಬಂದಿಲ್ಲ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ. ‘ಕಂಡ ಕಂಡಲ್ಲಿ ವಾಹನ ನಿಲ್ಲಿಸುವುದೂ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಸ್ಥಳೀಯ ಆಡಳಿತ ಸೂಕ್ತ ಸ್ಥಳದಲ್ಲಿ ಫಲಕಗಳನ್ನೂ ಅಳವಡಿಸಬೇಕಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀರಾಮ ಸುರೆ ಹೇಳುತ್ತಾರೆ.
ನಿಲುಗಡೆ ಜಾಗ ಅಂಗಡಿಕಾರರಿಂದ ಒತ್ತುವರಿ
ದಾಂಡೇಲಿ ನಗರದ ಪ್ರಮುಖ ರಸ್ತೆಗಳಾದ ಜೆ.ಎನ್ ರಸ್ತೆ ಚನ್ನಮ್ಮ ವೃತ್ತ ಲಿಂಕ್ ರಸ್ತೆಗಳಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರ ವಾಹನ ದಟ್ಟಣೆಯಿಂದಾಗಿ ನಿಲುಗಡೆ ಸಮಸ್ಯೆ ಉಂಟಾಗುತ್ತದೆ. ಭಾನುವಾರ ಸಂತೆಯ ದಿನ ಸೇರಿದಂತೆ ವಾಹನ ನಿಲುಗಡೆಗೆ ಲಿಂಕ್ ರಸ್ತೆಯಲ್ಲಿ ಮಾತ್ರ ಜಾಗ ಗುರುತಿಸಲಾಗಿದೆ. ಜಾಗವು ಚಿಕ್ಕದಾಗಿರುವ ಕಾರಣ ಸ್ಥಳೀಯ ವಾಹನಗಳಿಗೆ ಸಾಲುತ್ತಿಲ್ಲ. ಮಾರುಕಟ್ಟೆಯಲ್ಲಿನ ಪಾರ್ಕಿಂಗ್ ಜಾಗದಲ್ಲಿ ಹಣ್ಣುಗಳ ಅಂಗಡಿ ಹಾಕಲಾಗಿದ್ದು ಇದರಿಂದಾಗಿ ಸಮಸ್ಯೆ ಬಿಗಾಡಿಯಿಸಿದೆ ಎನ್ನುವುದು ಸಾರ್ವಜನಿಕರ ಆರೋಪ. ‘ಬಸ್ ನಿಲ್ದಾಣದಲ್ಲಿ ಜಾಗವಿದ್ದು ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಹುಬ್ಬಳ್ಳಿ ವಿಭಾಗದ ಸಾರಿಗೆ ನಿರ್ದೇಶಕರಿಗೆ ಹಲವು ಬಾರಿ ಪತ್ರವನ್ನು ಬರೆಯಲಾಗಿದೆ. ಶುಲ್ಕ ನಿಗದಿ ಪಡಿಸಿದರೆ ಸರ್ಕಾರಕ್ಕೆ ಆದಾಯ ಮತ್ತು ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗಬಹುದು’ ಎನ್ನುತ್ತಾರೆ ವ್ಯಾಪಾರಿ ಸುಧೀರ್ ಶೆಟ್ಟಿ.