ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಕಣ್ಣಿಗೆ ಕಂಡರೂ ಕೈಗೆಟುಕದ ‘ಟುಪಲೇವ್’

ಮರುಜೋಡಣೆಯಾಗಿ 8 ತಿಂಗಳಾದರೂ ಆರಂಭವಾಗದ ಯುದ್ಧವಿಮಾನ ವಸ್ತು ಸಂಗ್ರಹಾಲಯ
Published 26 ಜೂನ್ 2024, 4:19 IST
Last Updated 26 ಜೂನ್ 2024, 4:19 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ‘ಐಎನ್ಎಸ್ ಚಪಲ್’ ಯುದ್ಧನೌಕೆ ವಸ್ತುಸಂಗ್ರಹಾಲಯದ ಪಕ್ಕ 8 ತಿಂಗಳಿನಿಂದ ನೆಲೆ ನಿಂತಿರುವ ‘ಟುಪಲೇವ್ (142–ಎಂ)’ ವಿಶ್ರಾಂತ ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಇನ್ನೂ ಮುಕ್ತವಾಗಿಲ್ಲ. ಇದಕ್ಕೆ ಪೂರಕವಾದ ಕಾರ್ಯಗಳು ಆಮೆಗತಿಯಲ್ಲಿ ಸಾಗಿದೆ.

2017ರಲ್ಲಿ ಭಾರತೀಯ ಸೇನೆಯ ಕರ್ತವ್ಯದಿಂದ ಮುಕ್ತವಾದ ಯುದ್ಧವಿಮಾನದ ಬಿಡಿಭಾಗಗಳನ್ನು ತಮಿಳುನಾಡಿನ ಅರಕ್ಕೋಣಮ್‍ನಲ್ಲಿನ ರಾಜೋಲಿ ನೌಕಾನೆಲೆಯಿಂದ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಾರವಾರಕ್ಕೆ ತರಲಾಯಿತು. ಅಕ್ಟೋಬರ್‌ನಲ್ಲಿ ಯುದ್ಧವಿಮಾನದ ಭಾಗಗಳನ್ನು ಮರುಜೋಡಿಸಿ, ಉದ್ಯಾನದಲ್ಲಿ ಇರಿಸಲಾಯಿತು. ಸಾಗಣೆ, ಮರು ಜೋಡಣೆ ವೆಚ್ಚ ನೌಕಾದಳ ಭರಿಸಿದೆ. ನಿರ್ವಹಣೆ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ.

ಡಿಸೆಂಬರ್ ವೇಳೆಗೆ ಯುದ್ಧವಿಮಾನ ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆ ಇತ್ತು. ಆದರೆ, ಅದು ಈಡೇರಲಿಲ್ಲ. 53.6 ಮೀಟರ್ ಉದ್ದ ಮತ್ತು 35 ಮೀಟರ್ ಅಗಲವಿರುವ ಯುದ್ಧ ವಿಮಾನವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇದೆ. ಸಹಜವಾಗಿ ಕುತೂಹಲ ಮೂಡುತ್ತದೆ. ಆದರೆ, ಅದನ್ನು ವೀಕ್ಷಿಸಲು ಸಮೀಪ ತೆರಳಿದರೆ, ವಿಮಾನವಿರುವ ಉದ್ಯಾನದ ಬಾಗಿಲು ಹಾಕಿರುವುದು ಗೋಚರಿಸುತ್ತದೆ’ ಎಂದು ನಿವಾಸಿ ಶೈಲೇಶ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಟುಪಲೇವ್ ಯುದ್ಧ ವಿಮಾನದ ವಸ್ತು ಸಂಗ್ರಹಾಲಯವನ್ನು ಆದಷ್ಟು ಶೀಘ್ರ ಆರಂಭಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.
ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ

‘ಕಡಲತೀರದಲ್ಲಿ ಯುದ್ಧನೌಕೆ, ಯುದ್ಧವಿಮಾನ ವಸ್ತು ಸಂಗ್ರಹಾಲಯ ಒಟ್ಟಿಗೆ ಇರುವ ಅಪರೂಪದ ತಾಣವಾದರೂ 8 ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ಬಿಡುತ್ತಿಲ್ಲ. ಪ್ರವಾಸೋದ್ಯಮವನ್ನೇ ಆಧರಿಸಿರುವ ಕಾರವಾರ ಅವಕಾಶ ಇದ್ದೂ ನಷ್ಟ ಎದುರಿಸುತ್ತಿದೆ’ ಎಂದು ಅವರು ತಿಳಿಸಿದರು.

‘ಯುದ್ಧವಿಮಾನ ವಸ್ತು ಸಂಗ್ರಹಾಲಯಕ್ಕೆ ಹವಾನಿಯಂತ್ರಕ ಅಳವಡಿಕೆ ಸೇರಿ ಕೆಲ ಸಣ್ಣಪುಟ್ಟ ನಿರ್ವಹಣೆ ಕೆಲಸ ನಡೆಯಬೇಕಿದೆ’  ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT