ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ದೂಳು ಹಿಡಿದು ನಿಂತ ಟುಪಲೇವ್

ಪ್ರವಾಸಿ ಸೀಸನ್‍ನಲ್ಲೇ ಬಾಗಿಲು ಬಂದ್: ವಾರಶಿಪ್ ವೀಕ್ಷಿಸದ ಪ್ರವಾಸಿಗರು
Published 20 ಏಪ್ರಿಲ್ 2024, 5:41 IST
Last Updated 20 ಏಪ್ರಿಲ್ 2024, 5:41 IST
ಅಕ್ಷರ ಗಾತ್ರ

ಕಾರವಾರ: ಬೇಸಿಗೆ ರಜೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಬಿರು ಬಿಸಿಲ ನಡುವೆಯೂ ಕರಾವಳಿ ಭಾಗಕ್ಕೆ ಪ್ರವಾಸಿಗರ ಆಗಮನ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ. ಪ್ರವಾಸಿ ಸೀಸನ್‍ನಲ್ಲಿ ನೂರಾರು ಸಂಖ್ಯೆಯ ಜನರು ಕಣ್ತುಂಬಿಕೊಳ್ಳಬೇಕಿದ್ದ ಐ.ಎನ್.ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ ದುರಸ್ತಿ ನೆಪದಲ್ಲಿ ಮುಚ್ಚಲಾಗಿದ್ದರೆ, ಎಂಟು ತಿಂಗಳ ಹಿಂದೆಯೇ ಸ್ಥಾಪನೆಗೊಂಡ ಟುಪಲೇವ್ (142–ಎಂ) ಯುದ್ಧವಿಮಾನ ಮ್ಯೂಸಿಯಂ ಇನ್ನೂ ಪೂರ್ಣರೂಪ ಪಡೆಯದೆ ನಿಂತಿದೆ.

ದೇಶದ ರಕ್ಷಣಾ ಕ್ಷೇತ್ರದಲ್ಲಿ ಬಳಕೆಯಾದ ಯುದ್ಧನೌಕೆ ಮತ್ತು ಯುದ್ಧವಿಮಾನವನ್ನು ಕಣ್ತುಂಬಿಕೊಳ್ಳಲಾಗದ ಬೇಸರದಿಂದ ನಿತ್ಯ ಹತ್ತಾರು ಪ್ರವಾಸಿಗರು ಮರಳುತ್ತಿದ್ದಾರೆ. ವಸ್ತುಸಂಗ್ರಹಾಲಯ ಹೆದ್ದಾರಿಯ ಮೇಲ್ಸೇತುವೆ, ಸರ್ವೀಸ್ ರಸ್ತೆಯಿಂದ ಪ್ರವಾಸಿಗರ ಕಣ್ಣಿಗೆ ಗೋಚರಿಸುತ್ತದೆ. ಇದನ್ನು ಕಂಡು ಪುಳಕಗೊಳ್ಳುವ ಅವರು ಹತ್ತಿರದಿಂದ ವೀಕ್ಷಿಸಲು ಬಂದರೆ ಬೀಗ ಹಾಕಿ ಮುಚ್ಚಲಾದ ವಸ್ತುಸಂಗ್ರಹಾಲಯದ ಗೇಟ್ ಮಾತ್ರ ಕಾಣಿಸುತ್ತಿದೆ.

2017ರಲ್ಲಿ ಭಾರತೀಯ ಸೇನೆಯ ಕರ್ತವ್ಯದಿಂದ ನಿವೃತ್ತಿಯಾದ ಯುದ್ಧವಿಮಾನವನ್ನು ತಮಿಳುನಾಡಿನ ಅರಕ್ಕೋಣಮ್‍ನಲ್ಲಿರುವ ರಾಜೋಲಿ ನೌಕಾನೆಲೆಯಿಂದ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿಗೆ ತರಲಾಗಿದೆ. ಅಕ್ಟೋಬರ್ ವೇಳೆಯಲ್ಲಿ ಯುದ್ಧವಿಮಾನ ಜೋಡಣೆ ಮಾಡಿ ಉದ್ಯಾನದಲ್ಲಿ ಇರಿಸಲಾಗಿದೆ. ಡಿಸೆಂಬರ್ ವೇಳೆಗೆ ಯುದ್ಧವಿಮಾನ ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆ ಇತ್ತು. ಆದರೆ, ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆರಂಭದ ದಿನದಲ್ಲಿ ಹೊಸ ಬಣ್ಣದಿಂದ ಕಂಗೊಳಿಸುತ್ತಿದ್ದ ವಿಮಾನಕ್ಕೆ ಈಗ ದೂಳು ಹಿಡಿಯುತ್ತಿದೆ.

ಐ.ಎನ್.ಎಸ್ ಚಪಲ್ ಯುದ್ಧನೌಕೆಯ ಬಹುಭಾಗಗಳು ತುಕ್ಕು ಹಿಡಿದು ಹಾಳಾಗಿದ್ದರಿಂದ ಅವುಗಳ ದುರಸ್ತಿ ನಡೆಯುತ್ತಿದೆ. ಫೆಬ್ರುವರಿ 15 ರಿಂದಲೇ ದುರಸ್ತಿ ಆರಂಭಗೊಂಡಿದ್ದು, ಒಂದೂವರೆ ತಿಂಗಳಿನಲ್ಲಿ ಕೆಲಸ ಮುಗಿಯುವ ನಿರೀಕ್ಷೆ ಇತ್ತು. ಆದರೆ ಎರಡೂವರೆ ತಿಂಗಳಾದರೂ ಕೆಲಸ ಮುಗಿದಿಲ್ಲ.

‘ಪ್ರವಾಸಿ ಸೀಸನ್‍ಗೆ ಮುಂಚಿತವಾಗಿ ಯುದ್ಧನೌಕೆ ದುರಸ್ತಿಗೆ ಗುತ್ತಿಗೆ ಪಡೆದ ಸಂಸ್ಥೆಗೆ ಸೂಚನೆ ನೀಡಲಾಗಿತ್ತು. ಆದರೂ ವಿಳಂಬವಾಗಿದೆ. ಪ್ರವಾಸಿಗರು ನೌಕೆ ವೀಕ್ಷಿಸಲಾಗದೆ ಬೇಸರದಿಂದ ಮರಳುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಕಾರವಾರ ಪ್ರವಾಸಕ್ಕೆ ಬರುವ ಮುನ್ನ ಗೂಗಲ್‍ನಲ್ಲಿ ಹುಡುಕಾಡಿದಾಗ ಯುದ್ಧನೌಕೆ ವಸ್ತುಸಂಗ್ರಹಾಲಯ ಇರುವುದು ಗೊತ್ತಾಯಿತು. ಇಲ್ಲಿ ಬಂದ ಬಳಿಕ ಅದರ ವೀಕ್ಷಣೆ ಸಾಧ್ಯವಾಗಲಿಲ್ಲ. ದುರಸ್ತಿ ನಡೆಯುತ್ತಿದೆ ಎಂದು ಸಿಬ್ಬಂದಿ ಹೇಳಿದರು. ಪ್ರವಾಸಿಗರು ಬರುವ ಸಮಯದಲ್ಲಿ ಇಂತಹ ಅದ್ಭುತ ತಾಣದ ವೀಕ್ಷಣೆಗೆ ಅವಕಾಶ ಕಲ್ಪಿಸದಿರುವುದು ಬೇಸರ ತರಿಸಿತು’ ಎಂದು ಬೆಂಗಳೂರಿನ ಪ್ರವಾಸಿಗ ಎನ್.ಎಂ.ರಜತ್ ಹೇಳಿದರು.

ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಎಂಟು ತಿಂಗಳ ಹಿಂದೆಯೇ ಸ್ಥಾಪನೆಗೊಂಡಿರುವ ಟುಪಲೇವ್ (143–ಎಂ) ಯುದ್ಧವಿಮಾನ ನಿರ್ವಹಣೆ ಇಲ್ಲದೆ ದೂಳು ಹಿಡಿದಿದೆ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಎಂಟು ತಿಂಗಳ ಹಿಂದೆಯೇ ಸ್ಥಾಪನೆಗೊಂಡಿರುವ ಟುಪಲೇವ್ (143–ಎಂ) ಯುದ್ಧವಿಮಾನ ನಿರ್ವಹಣೆ ಇಲ್ಲದೆ ದೂಳು ಹಿಡಿದಿದೆ
ಯುದ್ಧನೌಕೆ ದುರಸ್ತಿ ಕೆಲಸ ವೇಗಗೊಳಿಸಲು ಸೂಚಿಸಲಾಗಿದೆ. ಟುಪಲೇವ್ ಯುದ್ಧವಿಮಾನದಲ್ಲಿ ಹವಾನಿಯಂತ್ರಕ ವ್ಯವಸ್ಥೆ ರೂಪಿಸಬೇಕಿದ್ದು ಆ ಬಳಿಕ ವೀಕ್ಷಣೆಗೆ ಮುಕ್ತವಾಗಲಿದೆ.
-ಎಚ್.ವಿ.ಜಯಂತ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ
ಯುದ್ಧವಿಮಾನ ವೀಕ್ಷಣೆಗೆ ಕಾತರ
ಸದ್ಯ ಕಾರವಾರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಪೈಕಿ ಟುಪಲೇವ್ (142–ಎಂ) ಯುದ್ಧವಿಮಾನ ವೀಕ್ಷಣೆಗೆ ಬೇಡಿಕೆ ಇಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಯುದ್ಧವಿಮಾನ ಸ್ಥಾಪನೆಯಾಗಿರುವ ಯುದ್ಧನೌಕೆ ವಸ್ತುಸಂಗ್ರಹಾಲಯದ ಉದ್ಯಾನದ ಹೊರಗಿಂದಲೇ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಪ್ರವಾಸಿಗರು ವಿಮಾನ ವೀಕ್ಷಣೆಗೆ ಅವಕಾಶ ಆರಂಭಿಸಿದ ನಂತರ ಮಾಹಿತಿ ನೀಡುವಂತೆ ಇಲ್ಲಿನ ಸಿಬ್ಬಂದಿಗೆ ಒತ್ತಾಯಿಸುತ್ತಿದ್ದಾರೆ. ಈಗಾಗಲೆ 220ಕ್ಕೂ ಹೆಚ್ಚು ಪ್ರವಾಸಿಗರು ತಮ್ಮ ಹೆಸರು ದೂರವಾಣಿ ಸಂಖ್ಯೆ ನೀಡಿ ತೆರಳಿದ್ದಾರೆ. ಇವರಲ್ಲಿ ಗೋವಾ ಮಹಾರಾಷ್ಟ್ರ ಭಾಗದ ಪ್ರವಾಸಿಗರು ಸೇರಿದಂತೆ ವಿದೇಶಿಗರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT