ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ, ಜೊಯಿಡಾದಲ್ಲಿ ಅನುಮತಿಯಿಲ್ಲದೇ ನಡೆಯುತ್ತಿರುವ ಹತ್ತಾರು ರೆಸಾರ್ಟ್‌ಗಳು

ಅನಧಿಕೃತ ರೆಸಾರ್ಟ್
Last Updated 18 ಮಾರ್ಚ್ 2023, 7:39 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಕಾಡಿನಂಚಿನಲ್ಲಿ ಅರಣ್ಯ ಇಲಾಖೆಯ ಅನುಮತಿಯಿಲ್ಲದ ನಡೆಯುತ್ತಿರುವ ನೂರಾರು ಅನಧಿಕೃತ ರೆಸಾರ್ಟ್‌ ಗಳಿಂದಾಗಿ ಸರ್ಕಾರಕ್ಕೆ ನಿರಂತರವಾಗಿ ಆದಾಯ ನಷ್ಟವಾಗುತ್ತಿದೆ.

ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಗರಿಗೆದರಿದ್ದು, ವಿಶೇಷವಾಗಿ ಕಾಡಿನಂಚಿನ ದಾಂಡೇಲಿ, ಜೊಯಿಡಾ ಭಾಗಗಳಲ್ಲಿ ಬೆರಳೆಣಿಕೆಯ ರೆಸಾರ್ಟ್ ಗಳಷ್ಟೇ ಅಧಿಕೃತ ಪಟ್ಟಿಯಲ್ಲಿವೆ. ಹೆಚ್ಚಿನವು ಅನುಮತಿ ಪಡೆಯದ ರೆಸಾರ್ಟ್‌ಗಳು, ಹೋಮ್‌ಸ್ಟೇ, ಜಲಸಾಹಸ ಕ್ರೀಡೆಗಳನ್ನು ನಡೆಸುವ ಸಂಸ್ಥೆಗಳಿವೆ ಎಂಬ ದೂರುಗಳಿವೆ. ಇತ್ತೀಚೆಗೆ ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರದ ವೇಳೆ ಪರಿಷತ್ ಸದಸ್ಯ ರವಿಕುಮಾರ ಎನ್. (ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು) ಕೂಡ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದಾರೆ.

‘ಜೊಯಿಡಾ, ದಾಂಡೇಲಿ ಭಾಗದಲ್ಲಿರುವ ರೆಸಾರ್ಟ್‌ಗಳಲ್ಲಿ ಕೇವಲ ಎಂಟು ಅಧಿಕೃತ ರೆಸಾರ್ಟ್ ಗಳಿವೆ. ಇವುಗಳಲ್ಲಿ ಜೆ.ಎಲ್.ಆರ್. ನಿರ್ವಹಣೆಯ ಎರಡು ರೆಸಾರ್ಟ್ ಗಳಿಂದ ಮಾತ್ರ ಸರ್ಕಾರಕ್ಕೆ ಆದಾಯ ಬರುತ್ತಿದೆ. ಅನಧಿಕೃತ ರೆಸಾರ್ಟ್ ಗಳ ಮಾಹಿತಿ ಇಲಾಖೆ ಬಳಿಯಿಲ್ಲ. ಇದ್ದರೂ ಅವುಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಜಲಸಾಹಸ ಚಟುವಟಿಕೆ ನಡೆಸಲು ಅಕ್ವಾ ವುಡ್, ಸಿಲ್ವರ್ ಬಿಲ್, ಲಗೂನಾ ವಾಟರ್ ಸ್ಪೋರ್ಟ್ಸ್, ಹಾರ್ನ್ ಬಿಲ್ ರಿವರ್ ರೆಸಾರ್ಟ್, ವಿಸ್ಲಿಂಗ್‌ ವುಡ್ ರೆಸಾರ್ಟ್, ಬೈಸನ್ ರಿವರ್ ರೆಸಾರ್ಟ್, ಮಾನಸಾ ಅಡ್ವೆಂಚರ್ಸ್ ಹಾಗೂ ಆಲ್ ಗೊ ಟ್ರಿಪ್ ಹಾಸ್ಪಿಟಾಲಿಟಿ ಸಂಸ್ಥೆಗಳು ಅನುಮತಿ ಪಡೆದಿವೆ. ಜೊತೆಗೆ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಸ್ಟಾರ್ ಲಿಂಗ್, ಶ್ರೀಯೋಗ್, ಡ್ರೀಮ್ ಫ್ಲವರ್‌, ಹಾರ್ನ್ ಬಿಲ್, ವಿಸ್ಲಿಂಗ್‌ ವುಡ್, ಅಂಶ ರೆಸಾರ್ಟ್ ಹಾಗೂ ಜಿ.ಎಲ್.ಆರ್. ಸಂಸ್ಥೆ ನಿರ್ವಹಣೆ ಮಾಡುತ್ತಿರುವ ಕಾಳಿ ಸಾಹಸ ಶಿಬಿರ, ಓಲ್ಡ್ ಮ್ಯಾಗಜಿನ್ ಹೌಸ್ ರೆಸಾರ್ಟ್‌ಗಳು ಇಲಾಖೆ ಪಟ್ಟಿಯಲ್ಲಿವೆ ಎಂದು ಸಿಂಗ್ ಉತ್ತರಿಸಿದ್ದಾರೆ.

ಪ್ರವಾಸಿಗರು ಹೆಚ್ಚಳ; ಆದಾಯಕ್ಕೆ ಬರ

ರೆಸಾರ್ಟ್‌ಗಳಲ್ಲಿ ಜಲಸಾಹಸ ಕ್ರೀಡೆ ಮತ್ತಿತರ ಚಟುವಟಿಕೆಗಳಿಗೆ ಒಬ್ಬ ವ್ಯಕ್ತಿಗೆ ದಿನಕ್ಕೆ ಕನಿಷ್ಠ ₹800 ರಿಂದ ₹1,000 ಸಾವಿರ ಶುಲ್ಕ ವಿಧಿಸುತ್ತವೆ. ವಸತಿಗೆ ಪ್ರತ್ಯೇಕ. ಜಲಸಾಹಸ ಕ್ರೀಡೆ ಆಯೋಜಿಸುವ ಸಂಸ್ಥೆಗಳು, ರೆಸಾರ್ಟ್ ನವರು ಲಾಭದಲ್ಲಿ ಶೇ 20ರಷ್ಟು ಮೊತ್ತ ಪ್ರವಾಸೋದ್ಯಮ ಸಮಿತಿಗೆ ನೀಡಬೇಕು. ಆದರೆ ಈ ಹಣ ಸರ್ಕಾರಕ್ಕೆ ಸಂದಾಯವಾಗುತ್ತಿಲ್ಲ.

ಕೋವಿಡ್‌ ಕಾಲದಲ್ಲಿ ಎರಡು ವರ್ಷ ರೆಸಾರ್ಟ್‌ಗಳು ನಷ್ಟದಲ್ಲಿದ್ದವು. ಆದರೆ 2022ರ ಮಾರ್ಚ್‌ನಿಂದ ಈವರೆಗೆ ಜೊಯಿಡಾ, ದಾಂಡೇಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿದ್ದಾರೆ‌. ‘ಇಷ್ಟೆಲ್ಲ ಪ್ರವಾಸಿಗರು ಬಂದರೂ ಪ್ರವಾಸೋದ್ಯಮ ಸಮಿತಿಯು ಪ್ರವಾಸಿಗರ ರಕ್ಷಣೆಗೆ ನೇಮಿಸಿದ ಲೈಫ್‌ ಗಾರ್ಡ್‌ಗಳು, ಪ್ರವಾಸಿ ಮಿತ್ರ ಸಿಬ್ಬಂದಿಗೆ ಸಂಬಳ ನೀಡಲು ಹಣ ಇಲ್ಲ ಎಂಬ ಸ್ಥಿತಿಯಿದೆ’ ಎನ್ನಲಾಗುತ್ತಿದೆ.

ಕಾಳಿ ಹುಲಿ ಅಭಯಾರಣ್ಯದಲ್ಲಿ ಪರಿಸರ ಸೂಕ್ಷ್ಮ ವಲಯವನ್ನು ಇನ್ನೂ ಗುರುತಿಸಿಲ್ಲ. ಹೀಗಾಗಿ ಕಾನೂನು ಪ್ರಕಾರ ಕಾಡಿನ ಸುತ್ತ 10 ಕಿ.ಮೀ ಅನ್ನು ಸೂಕ್ಷ್ಮ ವಲಯ ಎಂದೇ ಪರಿಗಣಿಸಬೇಕು. ಇಲ್ಲಿಯ ಕಂದಾಯ ಭೂಮಿಯಲ್ಲಿ ಅನೇಕ ರೆಸಾರ್ಟ್‌, ಹೋಂಸ್ಟೇಗಳಿದ್ದರೂ ಅವುಗಳು ಪರಿಸರ ಸೂಕ್ಷ್ಮ ವಲಯ ಉಸ್ತುವಾರಿ ಸಮಿತಿಯಿಂದ ಅನುಮತಿ ಪಡೆಯಬೇಕು. ಪ್ರವಾಸೋದ್ಯಮ ಇಲಾಖೆ, ಮಾಲಿನ್ಯ ನಿಯಂತ್ರಣ ಇಲಾಖೆಯಿಂದಲೂ ಅನುಮತಿ ಪಡೆಯಬೇಕು. ಆದರೆ ಈ ಭಾಗದಲ್ಲಿ ಶಾಶ್ವತ ಕಾಮಗಾರಿಗೆ ಅನುಮತಿಯಿಲ್ಲ. ಆದರೂ ಕ್ರಮ ತೆಗೆದುಕೊಳ್ಳದೆ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಪರಿಸರ ಕಾರ್ಯಕರ್ತ ಗಿರಿಧರ ಕುಲಕರ್ಣಿ ಆರೋಪಿಸುವರು.

ಕರೆ ಸ್ವೀಕರಿಸದ ಜಿಲ್ಲಾಧಿಕಾರಿ: ಜೊಯಿಡಾ, ದಾಂಡೇಲಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಮಾಹಿತಿ ಕಲೆ ಹಾಕುತ್ತಿರುವ ಇಲಾಖೆ

ಜೊಯಿಡಾ ಮತ್ತು ದಾಂಡೇಲಿಯಲ್ಲಿ ನಿಯಮ ಬಾಹಿರವಾಗಿ ಹೋಮ್‌ಸ್ಟೇ, ರೆಸಾರ್ಟ್‌ಗಳು, ಜಲಸಾಹಸ ಕ್ರೀಡೆ ನಡೆಸುತ್ತಿರುವ ಸಂಸ್ಥೆಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮಾಹಿತಿ ಕಲೆಹಾಕುತ್ತಿದೆ‌. ಸಿಬ್ಬಂದಿ ನೇಮಕ, ಜಲಸಾಹಸ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಿ ಆದಾಯ ನಷ್ಟವಾಗದಂತೆ ತಡೆಯುವ ಆ್ಯಪ್‌ ಸಿದ್ದಪಡಿಸುತ್ತಿದೆ. ಇಲಾಖೆಯ ಆ್ಯಪ್ ಮೂಲಕ ಪ್ರವಾಸಿಗರು ಜಲಸಾಹಸ ಕ್ರೀಡೆಗೆ ನೋಂದಣಿ ಮಾಡಿಕೊಳ್ಳಬೇಕಿದೆ ಎಂಬುದು ಇಲಾಖೆಯ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT