ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಹಿನ್ನೀರು ಮೀನುಗಾರಿಕೆಗೀಗ ಮುಕ್ತ ಅವಕಾಶ

ಲುಕ್ಕೇರಿ:ಅಘನಾಶಿನಿ ನದಿಯ ಗೇಟಿಗೆ ಬಲೆ ಕಟ್ಟದಂತೆ ಕೋರ್ಟ್ ಆದೇಶ
Published 17 ಆಗಸ್ಟ್ 2023, 5:55 IST
Last Updated 17 ಆಗಸ್ಟ್ 2023, 5:55 IST
ಅಕ್ಷರ ಗಾತ್ರ

ಕುಮಟಾ: ಸಮೀಪದ ಲುಕ್ಕೇರಿಯ ಅಘನಾಶಿನಿ ಹಿನ್ನೀರು ಹೊಳೆಯ ಸೇತುವೆ ಗೇಟುಗಳಿಗೆ ಮೀನು ಬಲೆ ಕಟ್ಟುವುದಕ್ಕೆ ತಡೆಯೊಡ್ಡಿದ ಹೈಕೋರ್ಟ್ ಆದೇಶದಿಂದಾಗಿ ಈ ವರ್ಷದಿಂದ ಸ್ಥಳೀಯ ಮೀನುಗಾರರು ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿದು ಮಾರಾಟ ಮಾಡುತ್ತಿದ್ದಾರೆ.

ಇಲ್ಲಿಯ ಅಘನಾಶಿನಿ ನದಿಯ ಹಿನ್ನೀರು ಪ್ರದೇಶವು ಮಾಸೂರು, ಲುಕ್ಕೇರಿ, ಹೆಗಡೆ ಭಾಗದ ಕಗ್ಗ ಭತ್ತ ಬೆಳೆಯುವ ಪ್ರದೇಶ ಆವರಿಸಿದೆ. ಇದು ನೈಸರ್ಗಿಕ ಮೀನು, ಸಿಗಡಿ, ಏಡಿಗಳ ಸಂತಾನೋತ್ಪತ್ತಿಯ ಆವಾಸ ಸ್ಥಾನವಾಗಿರುವುದರಿಂದ ಈ ಪ್ರದೇಶದಲ್ಲಿ ಹೇರಳ ಪ್ರಮಾಣದಲ್ಲಿ ಮೀನು ಸಿಗುತ್ತವೆ.

ಲುಕ್ಕೇರಿ ಸೇತುವೆಯ ಗೇಟಿನ ಮೂಲಕ ಉಬ್ಬರ-ಇಳಿತ ಸಂದರ್ಭದಲ್ಲಿ ಹಾದು ಹೋಗುವ ಹಿನ್ನೀರಿಗೆ ಬಲೆ ಕಟ್ಟಿ ಮೀನು ಹಿಡಿಯಲಾಗುತ್ತಿತ್ತು. ಈ ಮೀನು ಹಿಡಿದು ಮಾರಾಟ ಮಾಡಲು ಸ್ಥಳೀಯ ಕಗ್ಗ ಬೆಳೆಗಾರರು ಪ್ರತೀ ವರ್ಷ ಗುತ್ತಿಗೆ ನೀಡುತ್ತಿದ್ದರು. ಮೀನು ಮಾರಾಟದಿಂದ ಬಂದ ಹಣವನ್ನು ರೈತರು ತಮ್ಮ ಜಮೀನು ಹಿಡುವಳಿ ಪ್ರಮಾಣಕ್ಕನುಸಾರ ಹಂಚಿಕೊಳ್ಳುವ ಪದ್ಧತಿ ಇತ್ತು.

‘ಮೀನು ಹಿಡಿಯಲು ಗುತ್ತಿಗೆ ಪಡೆದವರು ಸುತ್ತಲಿನ ಸುಮಾರು 250 ಮೀನುಗಾರರಿಗೆ ಹಿನ್ನೀರು ಪ್ರದೇಶದಲ್ಲಿ ಮೀನುಗಾರಿಕೆಗೆ ತಡೆಯೊಡ್ಡಿದ್ದರು. ಹಲವು ವರ್ಷಗಳ ನಂತರ ಮೀನುಗಾರರು ಹೈಕೋರ್ಟ್ ಮೊರೆ ಹೋದರು. ಸೇತುವೆ ಗೇಟುಗಳಿಗೆ ಬಲೆ ಕಟ್ಟದಂತೆ ಆದೇಶಿಸಿದ ಹೈಕೋರ್ಟ್ ಹಿನ್ನೀರು ಮೀನುಗಾರಿಕೆಗೆ ಅಡ್ಡಿಪಡಿಸದಂತೆ ಸೂಚಿಸಿತು. ರೈತರು ಹಾಗೂ ಮೀನುಗಾರರು ಹೊಂದಾಣಿಕೆ ಮಾಡಿಕೊಂಡು ಮೀನುಗಾರಿಕೆ ನಡೆಸಿದರೆ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮೀನು ಹಿಡಿದು ಲಾಭ ಗಳಿಸಬಹುದು’ ಎಂದು ಕುಮಟಾ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಜೈವಿಠಲ ಕುಬಲ ಅಭಿಪ್ರಾಯಪಡುತ್ತಾರೆ.

ಹೆಗಡೆ ಕಗ್ಗ ಬೆಳೆಗಾರರ ಹಾಗೂ ಸಿಗಡಿ ಉತ್ಪಾದಕರ ರೈತ ಸಂಘದವರು ಸೇತುವೆ ಗೇಟಿಗೆ ಬಲೆ ಕಟ್ಟಿ ಮೀನು ಹಿಡಿಯಲು ಅವಕಾಶ ಕೋರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು.

ಬಗೆ ಬಗೆಯ ಮೀನು ಬಲೆಗೆ
‘ಹಿನ್ನೀರು ಪ್ರದೇಶದಲ್ಲಿ ಅತ್ಯಂತ ರುಚಿಕರ ಹಾಗೂ ಬೆಲೆಬಾಳುವ ನೋಗಲೆ ಕೆಂಸ ಕುರಡೆ ಕಾಗಳಸಿ ಯೇರಿ ಮಡ್ಲೆ ಬೈಗೆ ಕೊಕ್ಕರ ಚಂದಕ ಪೇಡಿ ಏಡಿ ಕಾಯಿಶೆಟ್ಲಿ ಬಿಳಿ ಶೆಟ್ಲಿ ಕೋಳೆ ಶೆಟ್ಲಿ ಹೇರಳ ಪ್ರಮಾಣದಲ್ಲಿ ಸಿಗುತ್ತವೆ. ಮೀನುಗಾರರು ಬಲೆಯಿಂದ ಶೇ.10 ರಷ್ಟು ಪ್ರಮಾಣದ ಮೀನು ಮಾತ್ರ ಹಿಡಿಯಲು ಸಾಧ್ಯ. ಉಳಿದವು ಹಾಗೇ ನದಿ ಸೇರಿಬಿಡುತ್ತವೆ. ಮೀನುಗಾರರು ಹಾಗೂ ರೈತರು ಹೊಂದಾಣಿಕೆ ಮಾಡಿಕೊಂಡು ಮೀನು ಹಿಡಿದರೆ ಇಬ್ಬರಿಗೂ ಹೆಚ್ಚಿನ ಲಾಭ ಬರುತ್ತದೆ’ ಎಂದು ಮೀನು ಗುತ್ತಿಗೆದಾರ ಸುಬ್ರಾಯ ನಾಯ್ಕ ಹೊಲನಗದ್ದೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT