ಹೊನ್ನಾವರ: ತಾಲ್ಲೂಕಿನ ಹೆರಾವಲಿ ಗ್ರಾಮದಲ್ಲಿ ಕಾಡುಹಂದಿಗಳ ಅಸಹಜ ಸಾವಿನ ಸರಣಿ ಮುಂದುವರಿದಿದ್ದು ಗುರುವಾರ ಮತ್ತೊಂದು ಕಾಡುಹಂದಿಯ ಮೃತದೇಹ ಪತ್ತೆಯಾಗಿದೆ.
ಗುರುವಾರ ಪತ್ತೆಯಾದ ಕಾಡುಹಂದಿ 2-3 ದಿನಗಳ ಹಿಂದೆ ಸತ್ತಿರಬಹುದೆಂದು ಶಂಕಿಸಲಾಗಿದ್ದು ಕೊಳೆತ ಸ್ಥಿತಿಯಲ್ಲಿತ್ತು. ಸುದ್ದಿ ತಿಳಿದ ಉಪವಲಯ ಅರಣ್ಯಾಧಿಕಾರಿ ವಿಶಾಲ ಡಿ. ಇತರ ಸಿಬ್ಬಂದಿ ಜೊತೆ ತಕ್ಷಣ ಸ್ಥಳಕ್ಕೆ ಬಂದು ಹಂದಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು.
ಕಳೆದ 10 ದಿನಗಳಲ್ಲಿ ಹೆರಾವಲಿ ಗ್ರಾಮದ ವಿವಿಧೆಡೆ 5 ಕ್ಕೂ ಹೆಚ್ಚು ಕಾಡು ಹಂದಿಗಳ ಮೃತದೇಹ ಪತ್ತೆಯಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹಂದಿಗಳು ಅಸಹಜವಾಗಿ ಸಾವನ್ನಪ್ಪುತ್ತಿರುವುದಕ್ಕೆ ಆಹಾರದ ಕೊರತೆ, ವಿಷ ಪ್ರಾಷನ ಅಥವಾ ಯಾವುದೋ ಕಾಯಿಲೆ ಕಾರಣವಿರಬಹುದೆಂದು ಊಹಿಸಲಾಗಿದೆ. ‘ಸತ್ತ ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಸಾವಿನ ಕಾರಣ ತಿಳಿದುಬರಬೇಕಿದೆ’ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.