ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ|ರಾಜಕೀಯ ಪ್ರಾತಿನಿಧ್ಯ ನಮಗೆ ಸಿಕ್ಕಿಲ್ಲ: ಪ್ರಣವಾನಂದ ಸ್ವಾಮೀಜಿ

ಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ
Published 4 ಜೂನ್ 2023, 13:03 IST
Last Updated 4 ಜೂನ್ 2023, 13:03 IST
ಅಕ್ಷರ ಗಾತ್ರ

ಕುಮಟಾ: ಈಡಿಗ, ಬಿಲ್ಲವ, ನಾಮಧಾರಿ ಸಮಾಜಕ್ಕೆ ಸೂಕ್ತ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಪ್ರಾತಿನಿಧ್ಯ ಸಿಗದಿದ್ದಾಗ ಸಮಾಜದ ಜನರು, ನಾಯಕರು ಚಿಂತನೆ ನಡೆಸಿ ಮುಂದಿನ ಮಾರ್ಗಗಳನ್ನು ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ ಎಂದು ಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಹಾಗೂ ರಾಷ್ಟ್ರೀಯ ಈಡಿಗ ಮಹಾ ಮಂಡಳಿ ಆಶ್ರಯದಲ್ಲಿ ಕುಮಟಾದಲ್ಲಿ ಭಾನುವಾರ ಮುಕ್ತಾಯಗೊಂಡ ಈಡಿಗ, ಬಿಲ್ಲವ, ನಾಮಧಾರಿ ಸಮಾಜಗಳ ಎರಡು ದಿನಗಳ ವಿಶೇಷ ಚಿಂತನ ಶಿಬಿರದಲ್ಲಿ ಅವರು ಮಾತನಾಡಿದರು.

ನಮಗೆ ಅಗತ್ಯವಿರುವುದನ್ನು ಪಡೆದುಕೊಳ್ಳಲಾಗದಿದ್ದಲ್ಲಿ ಅಗತ್ಯದ ಬಗ್ಗೆ ಸಮಾಜದ ಜನರೊಡನೆ ಗ್ರಾಮ, ತಾಲ್ಲೂಕು ಮಟ್ಟದ ಚಿಂತನ ಶಿಬಿರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ನಂತರ ಜಿಲ್ಲಾ ಮಟ್ಟದಲ್ಲಿ ನಮ್ಮ ಒಗ್ಗಟ್ಟು ತೋರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂತಿಮವಾಗಿ ರಾಜ್ಯ ಮಟ್ಟದಲ್ಲಿ ಸ್ವಾಭಿಮಾನ ಸಮಾವೇಶ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಆಗಬೇಕು ಎಂದರು.

ನಾರಾಯಣಗುರು ಶಕ್ತಿ ಪೀಠ ಸಮೀಪದಲ್ಲಿಯೇ ಇರುವುದರಿಂದ ರಾಜ್ಯ ಮಟ್ಟದ ಸಮಾವೇಶ ನಡೆಸಲು ಉಡುಪಿ ಸೂಕ್ತ ಸ್ಥಳ ಎನಿಸುತ್ತದೆ. ಪ್ರತೀ ಜಿಲ್ಲೆಯಿಂದ 2 ಸಾವಿರ ಬಸ್‌ಗಳ ಮೂಲಕ ತಲಾ ಒಂದು ಲಕ್ಷ ಜನರಂತೆ ಸಮಾವೇಶಕ್ಕೆ ಒಟ್ಟೂ ನಾಲ್ಕು ಲಕ್ಷ ಜನರನ್ನು ಕರೆ ತರುವ ಯೋಜನೆ ಇದೆ. ಸಮಾವೇಶಕ್ಕೆ ದೇಶದ ವಿವಿಧ ರಾಜ್ಯಗಳಲ್ಲಿರುವ ಸಮಾಜದ ಗಣ್ಯರು, ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜಕೀಯ ನಾಯಕರನ್ನು ಆಹ್ವಾನಿಸಿದರೆ ನಮ್ಮ ಸ್ವಾಭಿಮಾನದ ಶಕ್ತಿ ಪರಿಚಯಿಸಲು ಸಾಧ್ಯ ಎಂದರು.

ಉಡುಪಿಯ ಚಂದ್ರಶೇಖರ ಕಾಪು ಹಾಗೂ ಇತರೆ ಮುಖಂಡರು, ಹಿಂದೆ ಉಡುಪಿಯಲ್ಲಿ ಇಂತದೇ ಸಮಾವೇಶ ಆಯೋಜಿಸಿದಾಗ ನಮ್ಮೆಲ್ಲರ ನಿರೀಕ್ಷೆಗೆ ಮೀರಿ ಯಶ ಕಂಡರೂ ಈ ಸಲದ ಚುನಾವಣೆಯಲ್ಲಿ ನಮ್ಮ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಿಲ್ಲ. ಈ ಬಾರಿ ದೊಡ್ಡ ಮಟ್ಟದ ಸಮಾವೇಶ ನಡೆಸಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಕೊಳ್ಳಬೇಕು ಎಂದರು.

ನಿವೃತ್ತ ಡೀನ್ ಡಾ.ನಾಗೇಶ ನಾಯ್ಕ, ಹಿಂದೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ಸಮಾಜದ ರಾಜಕೀಯ ಶಕ್ತಿ ಈಗ ಸಮಾಜಕ್ಕಾಗಿ ಬಳಕೆಯಾಗುತ್ತಿಲ್ಲ. ರಾಜ್ಯ ಮಟ್ಟದ ಸಮಾವೇಶ ನಡೆಯವುದರಿಂದ ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯ ಎಂದರು.

ಮುಖಂಡರಾದ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ನಾಯ್ಕ, ಮುಖಂಡರಾದ ಬಿ.ಎಚ್. ಮಂಚೇಗೌಡ, ಜಯಂತ ನಾಯ್ಕ, ರವೀಂದ್ರನಾಥ ನಾಯ್ಕ, ಆರ್.ಎಚ್. ನಾಯ್ಕ, ಬಿ.ಎಚ್. ನಾಗರಾಜ, ಗಾಯತ್ರಿ ಶಿವಮೊಗ್ಗಾ, ವೆಂಕಟೇಶ ಗುಂಡಾನೂರು, ಸಂತೋಷಕುಮಾರ, ಗುರುರಾಜ ಎನ್., ಸುನಿಲ್ ಎನ್, ಆನಂದಪ್ಪ ವೈ.ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT