ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸಿಯುವ ಅಪಾಯಕ್ಕೆ ಸಿಲುಕಿದ ಪಶ್ಚಿಮ ಘಟ್ಟ: ಆತಂಕದಲ್ಲಿ ಸ್ಥಳೀಯರು

ಪ್ರಾಕೃತಿಕ ಅವಘಡ ನಡೆದ ಗ್ರಾಮಗಳಲ್ಲಿ ದೂರವಾಗಿಲ್ಲ ಆತಂಕ
Published 10 ಜೂನ್ 2024, 5:34 IST
Last Updated 10 ಜೂನ್ 2024, 5:34 IST
ಅಕ್ಷರ ಗಾತ್ರ

ಕಾರವಾರ: ಪಶ್ಚಿಮ ಘಟ್ಟ ಹಾದುಹೋಗಿರುವ ಉತ್ತರ ಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಮೃದ್ಧವೋ ಮಳೆಗಾಲದಲ್ಲಿ ಅಷ್ಟೇ ಅಪಾಯಕಾರಿಯೂ ಹೌದು!

ಇಲ್ಲಿನ ಹಸಿರು ಪರಿಸರ, ಧುಮ್ಮಿಕ್ಕುವ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ನಾನಾ ಕಡೆಯಿಂದ ಜನರು ಬರುತ್ತಿದ್ದರು. ಕುಮಟಾದ ತಂಡ್ರಕುಳಿ, ಯಲ್ಲಾಪುರದ ಕಳಚೆ, ಭಟ್ಕಳದ ಮುಟ್ಟಳ್ಳಿಯಲ್ಲಿ ಸಂವಿಸಿದ ಭೂಕುಸಿತ ಜನರನ್ನು ತಲ್ಲಣಗೊಳಿಸಿತು. ಕೆಲ ವರ್ಷಗಳಿಂದೀಚೆಗೆ ಜಿಲ್ಲೆಯಲ್ಲಿ ಸಾಲು ಸಾಲು ಭೂಕುಸಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಪರಿಸರ ಸೂಕ್ಷ್ಮ ಜಿಲ್ಲೆಯಲ್ಲಿ ಭೂಕುಸಿತದ ಕುರಿತು ಪರಿಶೀಲಿಸಿದ್ದ ಭಾರತೀಯ ಭೂಗರ್ಭಶಾಸ್ತ್ರ ಮಾಹಿತಿ ಕೇಂದ್ರದ ತಜ್ಞರು ಜಿಲ್ಲೆಯಲ್ಲಿ 436 ಸ್ಥಳಗಳಲ್ಲಿ ಭೂಕುಸಿತ ಸಂಭವಿಸುವ ಸಂಭವನೀಯ ಸ್ಥಳಗಳಿವೆ. ಕ್ವಾರಿ, ಅತಿಕ್ರಮಣ ಕುಸಿತಕ್ಕೆ ಪ್ರಮುಖ ಕಾರಣ ಎಂಬ ವರದಿ ಸಲ್ಲಿಸಿದ್ದರು. ಈ ಪಟ್ಟಿಯಲ್ಲಿ ಕೊಡಸಳ್ಳಿಯ ಅಣೆಕಟ್ಟೆ ಪ್ರದೇಶದ ಸಮೀಪವೂ ಕುಸಿತಗೊಳ್ಳುವ ಸಾಧ್ಯತೆ ಇದೆ ಎಂಬ ಉಲ್ಲೇಖ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದರು.

ಕಾರವಾರದಿಂದ ಕುಂದಾಪುರದವರೆಗೆ ನಿರ್ಮಾಣ ಹಂತದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಭೂಕುಸಿತ ನಡೆಯುವ ಸಾಧ್ಯತೆಗಳಿವೆ. ಆದರೆ, ಇದುವರೆಗೂ ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿಲ್ಲ ಎಂಬ ದೂರುಗಳಿವೆ.

ಶಿರಸಿ ತಾಲ್ಲೂಕಿನ ಮತ್ತಿಘಟ್ಟ ಕೆಳಗಿನಕೇರಿಯಲ್ಲಿ ಎರಡು ವರ್ಷಗಳ ಹಿಂದೆ ಭೂಕುಸಿತಕ್ಕೆ ನಾಲ್ಕು ಎಕರೆ ಅಡಿಕೆ ತೋಟ ನೆಲಸಮವಾಗಿತ್ತು. ಮಂಜುಗುಣಿ ಕಲ್ಲಳ್ಳಿ ಸಮೀಪವೂ ಭೂಕುಸಿತ ಸಂಭವಿಸಿತ್ತು. ಅಲ್ಲೆಲ್ಲ ಈವರೆಗೆ ಯಾವುದೇ ಕ್ರಮವಾಗಿಲ್ಲ. ಜಾಜಿಗುಡ್ಡೆ ಗ್ರಾಮದಲ್ಲಿ ಇಂಥದ್ದೇ ಘಟನೆ ನಡೆಯುತ್ತಿದ್ದರೂ, ಗ್ರಾಮಸ್ಥರ ಸ್ಥಳಾಂತರ ಕಾರ್ಯ ನಡೆದಿಲ್ಲ. ಇವುಗಳ ಜತೆ, ಅಡವಿಮನೆ, ಅಜ್ಜರಣಿ, ಬುಗಡಿ ಭಾಗದಲ್ಲಿ ಸಂಪರ್ಕ ಸೇತು ಇಲ್ಲದ ಕಾರಣ ಜೋರು ಮಳೆಯಲ್ಲಿ ಅತಂತ್ರ ಸ್ಥಿತಿ ಎದುರಿಸುವ ಸನ್ನಿವೇಶವಿದೆ.

'ಭೂಕುಸಿತದ ಆತಂಕವಿರುವ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗಿದೆ’ ಎಂದು ತಹಶೀಲ್ದಾರ್ ಎಚ್.ಜಿ.ಫೀರ್ಜಾದೆ ಹೇಳುತ್ತಾರೆ.

ಭಟ್ಕಳ ತಾಲ್ಲೂಕಿನಲ್ಲಿ ಮುಟ್ಟಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಮುಟ್ಟಳ್ಳಿಯಲ್ಲಿ ಧರೆ ಕುಸಿದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅದಾದ ನಂತರ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭಟ್ಕಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಳೆಗಾಲದಲ್ಲಿ ಧರೆಕುಸಿಯುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಆಧುನಿಕ ಉಪಕರಣಗಳನ್ನು ಇಟ್ಟು ಧರೆಕುಸಿಯುವ ಮೊದಲೇ ಮುನ್ಸೂಚನೆ ಸಿಗುವಂತೆ ಮಾಡುವುದಾಗಿ ತಿಳಿಸಿದ್ದರು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಗ್ರಾಮೀಣ ಭಾಗದಲ್ಲಿ ಹಲವೆಡೆ ಕೆಂಪುಕಲ್ಲು ಕ್ವಾರಿ ಅಗೆಯಲು ತೆಗೆದ ಎಷ್ಟೋ ಹೊಂಡಗಳನ್ನು ಸ್ಥಳೀಯರು ತಮ್ಮ ವಾಸದ ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದು, ಎತ್ತರದ ಗುಡ್ಡ ಕುಸಿದು ಕೆಳಗೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿನ ಮನೆಗಳು ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಸಮರ್ಪಕ ಚರಂಡಿ ವ್ಯವಸ್ಥೆಗೆ ಮುಂದಾಗಿಲ್ಲ.

ಅಂಕೋಲಾ ತಾಲ್ಲೂಕಿನ ರಾಮನಗುಳಿ ,ಶಿರೂರು, ಕುರ್ವೆ, ಬಿಳಿಹೊಂಯ್ಗಿ, ಮಂಜಗುಣಿ, ಕೇಣಿ ಇನ್ನಿತರ ಬಾಗಗಳಲ್ಲಿ ಮನೆಗೆ ನೀರು ನುಗ್ಗಿ ಅನಾಹುತಗಳು ಹಲವು ವರ್ಷಗಳಿಂದ ನಡೆಯುತ್ತಿದೆ. ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಲಾಗಿದ್ದರೂ ಶಿರೂರು ಭಾಗದಲ್ಲಿ ಭೂಕುಸಿತ ಸಮಸ್ಯೆ ಹೆಚ್ಚಿದೆ.

ಹೊನ್ನಾವರ ತಾಲ್ಲೂಕಿನ ಕಳೆದ ಹಲವು ವರ್ಷಗಳ ಮಳೆಗಾಲದ ದುಃಸ್ಥಿತಿ ಈ ವರ್ಷವೂ ಮುಂದುವರಿದಿದೆ. ಜೋರು ಮಳೆ ಸುರಿಯುತ್ತಿದ್ದಂತೆ ಗುಂಡಬಾಳಾ, ಬಡಗಣಿ ನದಿ ಹಾಗೂ ಭಾಸ್ಕೇರಿ ಮೊದಲಾದ ಹಳ್ಳಗಳ ದಂಡೆ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಜನರ ನಿದ್ದೆಗೆಡಿಸುತ್ತಿದೆ. ಗುಂಡಬಾಳಾ ನದಿ ತೀರದ ನೆರೆ ಸಂತ್ರಸ್ತರಿಗೆ ಎತ್ತರದ ಜಾಗದಲ್ಲಿ ಮನೆ ನಿರ್ಮಿಸುವ ಭರವಸೆ ಈಡೇರಿಲ್ಲ. ಗುಡ್ಡ ಕಡಿದು ಅತಿಕ್ರಮಿಸುವ ಚಟುವಟಿಕೆಗೆ ಕ್ರಮವಾಗದ ಪರಿಣಾಮ ಗುಡ್ಡ ಕುಸಿತದ ಭೀತಿ ಇನ್ನಷ್ಟು ಹೆಚ್ಚಿದೆ.

‘ಅಪ್ಸರಕೊಂಡದಲ್ಲಿ ಗುಡ್ಡ ಕುಸಿತ ತಡೆಗಟ್ಟಲು ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಹಶೀಲ್ದಾರ್ ರವಿರಾಜ ದೀಕ್ಷಿತ ತಿಳಿಸುತ್ತಾರೆ.

ಕುಮಟಾ ತಾಲ್ಲೂಕಿನ ಕೆಲವೆಡೆ ಭೂ ಕುಸಿತ ಉಂಟಾಗಿ ಜನ ಜೀವನಕ್ಕೆ ತೊಂದರೆಯಾಗುವಂತಹ ಸ್ಥಳಗಳನ್ನು ತಾಲ್ಲೂಕು ಆಡಳಿತದ ಪ್ರಾಕೃತಿಕ ವಿಕೋಪ ವಿಭಾಗ ಗುರುತಿಸಿ ಕ್ರಮಕ್ಕೆ ಮುಂದಾಗಿದೆ.

‘ದೀವಗಿ ಸುತ್ತಲಿನ ಪ್ರದೇಶ ದಶಕದಿಂದ ಈಚೆಗೆ ಭೂ ಕುಸಿತ ಅನಾಹುತದಿಂದಾಗಿ ಸುದ್ದಿಯಲ್ಲಿದೆ. ತಂಡ್ರಕುಳಿಯಲ್ಲಿ ಹೆದ್ದಾರಿ ಬದಿ ಕುಸಿದು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಸಂಭವಿಸಿತ್ತು. ದೀವಗಿ ಬಸ್ ನಿಲ್ದಾಣ ಸಮೀಪ ಉಂಟಾದ ಭೂ ಕುಸಿತ ತಡೆಯಲು ಕ್ರಮ ಕೈಕೊಳ್ಳಬೇಕು’ ಎಂಬುದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ.ಅಂಬಿಗ ಅವರ ಒತ್ತಾಯ.

‘ರಾಮನಗಿಂಡಿ ಬೀಚ್ ರಸ್ತೆ, ಮಿರ್ಜಾನ-ಕತಗಾಲ ರಸ್ತೆ, ದೀವಗಿ-ಮಣಕೋಣ-ಅಂತ್ರವಳ್ಳಿ ರಸ್ತೆಗಳಲ್ಲಿ ಅಲ್ಲಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಅದನ್ನು ತಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಸುಮಾರು ₹72 ಲಕ್ಷ ಮೊತ್ತದ ಕ್ರಿಯಾಯೋಜನೆ  ತಯಾರಿಸಿ ಮಂಜೂರಾತಿಗಾಗಿ ಜಿಲ್ಲಾಧಿಕಾರಿ ಅವರಿಗೆ ಕಳಿಸಲಾಗಿದೆ’ ಎಂದು ತಹಶೀಲ್ದಾರ್ ಪ್ರವೀಣ ಕರಾಂಡೆ ತಿಳಿಸುತ್ತಾರೆ.

ಮುಂಡಗೋಡ ತಾಲ್ಲೂಕಿನ ಯರೇಬೈಲ್‌ ಗ್ರಾಮದಲ್ಲಿ ಕಳೆದ ಆರು ವರ್ಷಗಳ ಹಿಂದೆ ಬೇಡ್ತಿ ಹಳ್ಳ ಉಕ್ಕಿ ಹರಿದ ಪರಿಣಾಮ ಅಲ್ಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಅತಿಯಾದ ಮಳೆಯ ಸಂದರ್ಭದಲ್ಲಿ ಕೆರೆಕಟ್ಟೆಗಳು ಒಡೆದು ಗದ್ದೆಗಳಿಗೆ ನುಗ್ಗಿ, ಬೆಳೆ ಹಾನಿ ಮಾಡುವ ಘಟನೆಗಳು ಪ್ರತಿ ವರ್ಷ ನಡೆಯುತ್ತವೆ. ಶಾಶ್ವತ ಪರಿಹಾರಕ್ಕೆ ರೈತರು ಒತ್ತಾಯಿಸುತ್ತಿದ್ದು, ಇನ್ನೂ ಈಡೇರಿಲ್ಲ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಜ್ಞಾನೇಶ್ವರ ದೇಸಾಯಿ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯಲ್ಲಿ ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದ ಬಳಿ ಭೂಕುಸಿತ ಉಂಟಾಗಿದ್ದರಿಂದ ಗುಡ್ಡಕ್ಕೆ ಮೆಶ್ ಅಳವಡಿಸಲಾಗಿರುವುದು 
ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯಲ್ಲಿ ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದ ಬಳಿ ಭೂಕುಸಿತ ಉಂಟಾಗಿದ್ದರಿಂದ ಗುಡ್ಡಕ್ಕೆ ಮೆಶ್ ಅಳವಡಿಸಲಾಗಿರುವುದು 
ಅಪ್ಸರಕೊಂಡ ಹಾಗೂ ಕೆಳಗಿನೂರು ಪ್ರದೇಶಗಳಲ್ಲಿ ಸುಮಾರು 200 ಕುಟುಂಬಗಳು ಗುಡ್ಡಕುಸಿತದ ಅಪಾಯದ ಆತಂಕ ಎದುರಿಸುತ್ತಿದ್ದು ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ
-ಮಂಜುನಾಥ ಗೌಡ ಕೆಳಗಿನೂರು ನಿವಾಸಿ
ಮಳೆಗಾಲ ಆರಂಭವಾದರೆ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಮನೆಗೆ ಯಾವಾಗ ನೀರು ನುಗ್ಗಬಹುದು ಎನ್ನುವ ಆತಂಕದಿಂದ ದಿನ ಕಳೆಯುತ್ತೇವೆ.
ರಮೇಶ ಹರಿಕಂತ್ರ ಬಿಳಿಹೊಂಯ್ಗಿ ಗ್ರಾಮಸ್ಥ
ಭೂಕುಸಿತ ನಡೆಯಬಹುದಾದ ಸ್ಥಳಗಳಲ್ಲಿ ಶಾಶ್ವತ ಪರಿಹಾರಕ್ಕೆ ದೊಡ್ಡ ಅನುದಾನದ ಅಗತ್ಯವಿದೆ. ಸ್ಥಳ ಪರಿಶೀಲಿಸಿ ತಹಶೀಲ್ದಾರ್‌ಗಳು ವರದಿ ಸಲ್ಲಿಸಿದ್ದಾರೆ. ಮಳೆಗಾಲದಲ್ಲಿ ತಾತ್ಕಾಲಿಕ ಮುನ್ನೆಚ್ಚರಿಕೆಗೆ ಕ್ರಮವಾಗಲಿದೆ.
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ತಡೆಗೋಡೆ ನಿರ್ಮಾಣದ ಬೇಡಿಕೆ
ಯಲ್ಲಾಪುರ ತಾಲ್ಲೂಕಿನ ತಳಕೆಬೈಲ್ ಕಳಚೆ ಬೀಗಾರ ಗ್ರಾಮದಲ್ಲಿ ಭೂಕುಸಿತ ಸಂಭವಿಸುತ್ತಿದೆ. ತಳಕೆಬೈಲಿನಿಂದ ಬಾರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವೆಡೆ ಕುಸಿತವಾಗಿದೆ. ಈ ಪ್ರದೇಶದಲ್ಲಿ ಭೂಕುಸಿತ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ದೂರುಗಳಿವೆ. ತಳಕೆಬೈಲಿನಲ್ಲಿ ಭೂಕುಸಿತ ಸಂಭವಿಸಿದ ಜಾಗದಲ್ಲಿ ಅರಣ್ಯ ಇಲಾಖೆ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಬೀಜ ಬಿತ್ತಿದೆ. ತಾಲ್ಲೂಕು ಆಡಳಿತ ಇಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಇದೆ. ‘ಬೀಗಾರ–ಬಾಗಿನಕಟ್ಟಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆಳಭಾಗದಲ್ಲಿ ಭೂಕುಸಿತ ಸಂಭವಿಸಿ ರಸ್ತೆಯನ್ನು ಬದಲಿಸಲಾಗಿದೆ. ಮತ್ತೆ ಭೂಕುಸಿತ ಸಂಭವಿಸದಂತೆ ತಡೆಗೋಡೆ ನಿರ್ಮಿಸಬೇಕು’ ಎಂದು ರಾಘವೇಂದ್ರ ಭಟ್‌ ಬೀಗಾರ ಒತ್ತಾಯಿಸುತ್ತಾರೆ.

ಪದೇ ಪದೇ ಕುಸಿಯುವ ರಾಜ್ಯ ಹೆದ್ದಾರಿ

ಜೊಯಿಡಾ ತಾಲ್ಲೂಕಿನಲ್ಲಿ ಹಾದು ಹೋಗಿರುವ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ ಅಣಶಿ ಘಟ್ಟದಲ್ಲಿ ದೊಣಪಾ ಸಮೀಪದಲ್ಲಿ ಕುಸಿಯುತ್ತಿದ್ದು ಎರಡು ಬಾರಿ ತಡೆಗೋಡೆ ನಿರ್ಮಾಣ ಮಾಡಿದರೂ ನಿಯಂತ್ರಣವಾಗಿಲ್ಲ. ಕರಂಜೆ ಅಸುಳ್ಳಿ ಬೊಂಡೇಲಿ ಭಾಗದ ಜನರು ಸಂಚಾರಕ್ಕೆ ಪರದಾಡುತ್ತಾರೆ. ಈ ಭಾಗದಲ್ಲಿ ಸೇತುವೆಗಳನ್ನು ನಿರ್ಮಿಸುವ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಕರಂಜೆ–ಬಜಾರಕುಣಂಗ ರಸ್ತೆ ಅಥವಾ ಕರಂಜೆ–ದುಧಮಳಾ ರಸ್ತೆಗೆ ಸೇತುವೆ ನಿರ್ಮಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುತ್ತಾರೆ ಕರಂಜೆಯ ಅನಂತ ದೇಸಾಯಿ. ‘ದೋಣಪಾದಲ್ಲಿ ಹೆದ್ದಾರಿ ಕುಸಿಯದಂತೆ ತಡೆಗೋಡೆ ನಿರ್ಮಾಣ ಮಾಡಲು ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಇಇ ಶಿವಪ್ರಕಾಶ ಶೇಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT