ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಿಗೆಕೆರೆ ಮುತ್ತಿಕೊಂಡ ಬೆಳ್ಳಕ್ಕಿ

ಸೋಂದಾ ಗ್ರಾಮ: ಮುಂಗಾರು ಆಗಮನದ ನಿರೀಕ್ಷೆ
Last Updated 1 ಜೂನ್ 2022, 13:42 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಸೋಂದಾ ಗ್ರಾಮದಲ್ಲಿರುವ ಮುಂಡಿಗೆಕೆರೆಗೆ ಬೆಳ್ಳಕ್ಕಿ ಹಿಂಡು ಆಗಮಿಸುತ್ತಿದೆ. ಇದು ಮುಂಗಾರು ಆರಂಭದ ಮುನ್ಸೂಚನೆ ಎಂದು ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಮುಂಗಾರು ಅವಧಿಯಲ್ಲಿ ಸಾವಿರಾರು ಬೆಳ್ಳಕ್ಕಿಗಳಿಗೆ ಆಸರೆ ನೀಡುವ ಮುಂಡಿಗೆಕೆರೆ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಸುತ್ತಲೂ ಆಳೆತ್ತರದ ಗಿಡಗಂಟಿಗಳಿಂದ ಆವೃತ್ತವಾದ ಕೆರೆ ಬೆಳ್ಳಕ್ಕಿಗಳು ಗೂಡುಕಟ್ಟಿ, ಮರಿ ಮಾಡಲು ಪ್ರಶಸ್ತ ಸ್ಥಳವಾಗಿದೆ. ಹೀಗಾಗಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಪಕ್ಷಿಗಳ ಹಿಂಡು ಇಲ್ಲಿಗೆ ವಲಸೆ ಬರುತ್ತವೆ.

ಸೋಂದಾ ಜಾಗೃತಿ ವೆದಿಕೆ ಸದಸ್ಯರು ಪಕ್ಷಿಧಾಮದ ಸ್ಥಿತಿಗತಿಯ ಮಾಹಿತಿ ಪ್ರತಿನಿತ್ಯ ಕಲೆಹಾಕಲು ಆರಂಭಿಸಿದ್ದು ಮೇ 31 ರಂದು ನೂರಕ್ಕೂ ಹೆಚ್ಚು ಬೆಳ್ಳಕ್ಕಿಗಳು ವಲಸೆ ಬಂದಿವೆ ಎಂದು ತಿಳಿಸಿದ್ದಾರೆ.

‘ಮೊದಲ ದಿನ ಬಂದ ಹಕ್ಕಿಗಳ ಪೈಕಿ 70ರಷ್ಟು ಇಲ್ಲಿಯೇ ಉಳಿದಕೊಂಡಿವೆ. ಬೆಳ್ಳಕ್ಕಿಗಳು ಬಂದು ವಾಸ ಮಾಡಿದ ಐದರಿಂದ ಆರು ದಿನದಲ್ಲಿ ಮುಂಗಾರು ಆರಮಭಗೊಳ್ಳುವುದು ವಾಡಿಕೆ’ ಎನ್ನುತ್ತಾರೆ ಸೋಂದಾ ಜಾಗೃತ ವೇದಿಕೆಯ ಪ್ರಮುಖ ರತ್ನಾಕರ ಹೆಗಡೆ ಬಾಡಲಕೊಪ್ಪ.

‘ಹಲವು ವರ್ಷದಿಂದ ಪಕ್ಷಿಧಾಮಕ್ಕೆ ಬೆಳ್ಳಕ್ಕಿಗಳು ವಲಸೆ ಬಂದ ಈ ಅವಧಿಯಲ್ಲೇ ಮಳೆಗಾಲ ಆರಂಭವಾಗಿದೆ. ಅದರ ಆಧಾರದಲ್ಲಿ ಈ ಭಾಗದ ಜನರಿಗೆ ಮುಂಗಾರಿನ ಆರಂಭ ನಿಖರವಾಗಿ ತಿಳಿಯುತ್ತಿದೆ’ ಎನ್ನುತ್ತಾರೆ ಅವರು.

ಮಳೆಗಾಲದ ಮುನ್ನ ವಾಸಕ್ಕೆ ಬರುವ ಹಕ್ಕಿಗಳು ಅಕ್ಟೋಬರ್ ವರೆಗೆ ಇಲ್ಲಿಯೇ ನೆಲೆಗೊಳ್ಳುತ್ತವೆ. ಬಳಿಕ ಗುಂಪು ಗುಂಪಾಗಿ ಇಲ್ಲಿಂದ ಹಾರಿ ಹೋಗುತ್ತವೆ. ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ ಕೆರೆಯ ಸಮೀಪ ಇರುವ ವೀಕ್ಷಣಾ ಗೋಪುರದಿಂದ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT