ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾವಲಂಬಿಯಾಗಿಸಿದ ಸಮಗ್ರ ಕೃಷಿ: ಹಣ್ಣು, ಗಡ್ಡೆ ಬೆಳೆದು ಆದಾಯ ಗಳಿಸುವ ಅನ್ನಪೂರ್ಣ

Published 15 ಸೆಪ್ಟೆಂಬರ್ 2023, 5:28 IST
Last Updated 15 ಸೆಪ್ಟೆಂಬರ್ 2023, 5:28 IST
ಅಕ್ಷರ ಗಾತ್ರ

ಮುಂಡಗೋಡ: ಒಂದೇ ಬೆಳೆಯನ್ನು ಬೆಳೆದರೆ ಲಾಭ ಕಡಿಮೆ ಎಂಬುದನ್ನು ಮನಗಂಡು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸುಧಾರಣೆ ಕಂಡುಕೊಳ್ಳುವ ಮೂಲಕ ತಾಲ್ಲೂಕಿನ ಕೊಪ್ಪ ಗ್ರಾಮದ ಅನ್ನಪೂರ್ಣ ನಾಗರಾಜ ಬೆಣ್ಣಿ ಮಾದರಿ ಕೃಷಿಕರೆನಿಸಿದ್ದಾರೆ.

ಒಟ್ಟು ಎರಡು ಎಕರೆಯಲ್ಲಿ ರೆಡ್‌ ಲೇಡಿ ಪಪ್ಪಾಯಿ, ಸ್ಥಳೀಯ ಪಪ್ಪಾಯಿ, ಅರಿಶಿಣ, ಗಡ್ಡೆ ಕೇಸು, ಸೀತಾಫಲ, ಭತ್ತ ಬೆಳೆದಿದ್ದಾರೆ. ಈ ಭಾಗದ ಬಹುತೇಕ ರೈತರು ಅಡಿಕೆ ಬೆಳೆಯತ್ತ ಹೆಚ್ಚು ಒಲವು ತೋರಿದ್ದರೆ ಅನ್ನಪೂರ್ಣ ಅದರ ಹೊರತಾಗಿ ವೈವಿಧ್ಯಮಯ ಬೆಳೆಯ ಮೂಲಕ ಲಾಭ ಪಡೆಯುವ ಪ್ರಯತ್ನ ನಡೆಸಿದ್ದಾರೆ.

‘ಪತಿ ನಾಗರಾಜ ಅವರ ಬೆಂಬಲ ಹಾಗೂ ಪ್ರೇರಣೆಯಿಂದ ಸಮಗ್ರ ಕೃಷಿ ಪದ್ಧತಿಯಲ್ಲಿ ಏನಾದರೂ ಹೊಸದನ್ನು ಬೆಳೆಯಬೇಕು ಎಂಬ ಆಲೋಚನೆ ಕೈ ಹಿಡಿದಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆದರೆ ಕೈ ತುಂಬ ಆದಾಯವೂ ಬರುತ್ತದೆ. ಸುಧಾರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದರೆ, ಬೆಳೆಯ ಮೌಲ್ಯವೂ ಹೆಚ್ಚಾಗುತ್ತದೆ’ ಎನ್ನುತ್ತಾರೆ ಕೃಷಿಕ ಮಹಿಳೆ ಅನ್ನಪೂರ್ಣ ಬೆಣ್ಣಿ.

‘ಅಡಿಕೆ ಮಾರುಕಟ್ಟೆ ಭವಿಷ್ಯದಲ್ಲಿ ಸ್ಥಿರವಾಗಿರುತ್ತದೆ ಎಂಬ ನಂಬಿಕೆ ಇಲ್ಲ. ಹೀಗಾಗಿ, ಅಡಿಕೆಯ ಜತೆಗೆ ಇನ್ನಿತರ ಪರ್ಯಾಯ ಬೆಳೆಗಳನ್ನು ಬೆಳೆದರೆ ಲಾಭವಾದಿತು ಎಂಬ ಕನಸಿನೊಂದಿಗೆ ವಿವಿಧ ಬೆಳೆಗಳನ್ನು ಬೆಳೆದಿದ್ದೇನೆ. ನೆಟ್ಟ ಸಸಿಗಳು ನಿರೀಕ್ಷೆಯಷ್ಟು ಫಸಲು ಕೊಟ್ಟಿವೆ. ಅವುಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಇದೆ’ ಎಂದರು.

‘ಒಟ್ಟು 12 ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡುತ್ತೇವೆ. ಅಡಿಕೆ, ಗೋವಿನಜೋಳ, ಭತ್ತ, ಜೇನು ಸಾಕಾಣಿಕೆ, ಮೊಲ ಸಾಕಾಣಿಕೆ, ಮೀನು ಸಾಕಾಣಿಕೆ, ಸೆಣಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಇದರಲ್ಲಿ ಪತ್ನಿಯ ಹೆಸರಿನಲ್ಲಿರುವ ಎರಡು ಎಕರೆಯಲ್ಲಿ ಆಕೆಯೇ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಬೇಸಾಯ ಮಾಡುತ್ತಾರೆ. ಅವರ ಕೃಷಿ ಕಾರ್ಯ ಪರಿಗಣಿಸಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ನೀಡಲಾಗಿದೆ’ ಎಂದು ಕೃಷಿಕ ನಾಗರಾಜ ಬೆಣ್ಣಿ ಹೇಳಿದರು.

ಅಡಿಕೆ ಹಾಳೆಯಿಂದಲೂ ಉತ್ಪನ್ನ
‘ತೋಟದಲ್ಲಿ ಬಿದ್ದ ಅಡಿಕೆ ಹಾಳೆಯಿಂದಲೂ ಆದಾಯ ಗಳಿಸುತ್ತಿದ್ದೇವೆ. ಹಾಳೆಯಿಂದ ತಟ್ಟೆ ಪ್ಲೇಟ್ ತಯಾರಿಸಲಾಗುತ್ತದೆ. ಪ್ರತಿ ದಿನ 800-1000 ಅಡಿಕೆ ಹಾಳೆಯ ಪ್ಲೇಟ್‌ಗಳನ್ನು ತಯಾರಿಸಲಾಗುತ್ತಿದ್ದು ಈ ಘಟಕದಲ್ಲಿ ಆರು ಜನ ಕಾರ್ಮಿಕರು ಕೆಲಸ ಮಾಡುತ್ತಾರೆ. ನಮ್ಮದೇ ಅಡಿಕೆ ತೋಟದಲ್ಲಿ ಸಿಗುವ ಹಾಳೆಗಳು ಸಂಬಂಧಿಕರ ತೋಟಗಳಿಂದ ಸಿಗುವ ಹಾಳೆಗಳನ್ನು ಒಟ್ಟುಗೂಡಿಸಿ ಪ್ಲೇಟ್‌ಗಳನ್ನು ತಯಾರಿಸಲಾಗುತ್ತಿದೆ. ತೋಟದಲ್ಲಿರುವ ವ್ಯರ್ಥ ಎನ್ನಿಸುವ ಉತ್ಪನ್ನಗಳಿಂದಲೇ ಲಾಭ ಮಾಡುವ ಹಾಗೂ ಕಾರ್ಮಿಕರಿಗೆ ಕೆಲಸ ನೀಡುವ ಘಟಕ ಇದಾಗಿದೆ’ ಎಂದು ಅನ್ನಪೂರ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT