ಶುಕ್ರವಾರ, ಜನವರಿ 27, 2023
26 °C
ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಸರ

ಪ್ರವಾಸೋದ್ಯಮ ದಿನಾಚರಣೆ: ಯೋಚನೆಯಲ್ಲೇ ಉಳಿದ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ‘ಜಿಲ್ಲೆಯ ಯೋಜನೆಗಳು ಯೋಚನೆಯಲ್ಲೇ ಉಳಿದಿವೆ. ಯಾವುದೂ ಕಾರ್ಯಗತಗೊಳ್ಳುತ್ತಿಲ್ಲ. ವ್ಯವಸ್ಥೆ ಶಾಶ್ವತವಿರಬೇಕಾದರೆ ಯೋಜನೆಯ ಗುರಿ ಮಟ್ಟಬೇಕು. ಸಂಘಟಿತ ಮನೋಭಾವದ ಕೊರತೆಯಿಂದೆ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘160 ಕಿ.ಮೀ ಕಡಲತೀರವಿದ್ದರೂ ಮೀನುಗಾರಿಕೆಯಲ್ಲಿ ಕಡೆಯ ಸ್ಥಾನದಲ್ಲಿದ್ದೇವೆ. ಬಂದರು ಅಭಿವೃದ್ಧಿಗೆ ಜಾರಿಯಾಗಿದ್ದ ₹1,500 ಕೋಟಿ ಯೋಜನೆ  ಕೋರ್ಟಿನಲ್ಲಿದೆ. ಯಾವುದೇ ಅಭಿವೃದ್ಧಿ ಕಾರ್ಯದಲ್ಲೂ ಸಂಘಟಿತ ಬೆಂಬಲವಿಲ್ಲ. ಸರ್ಕಾರದ ಸಂಗಡ, ಖಾಸಗಿಯವರ ಸಹಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮಲ್ಲಿರುವ ತಾಳೆಗರಿಯನ್ನು ನಾವು ಒಲೆಗೆ ಹಾಕುತ್ತಿದ್ದೇವೆ. ಆದರೆ ವಿದೇಶಿಗರು ಅದನ್ನೇ ತೆಗೆದುಕೊಂಡು ಹೋಗಿ ಅಧ್ಯಯನ ಮಾಡುತ್ತಿದ್ದಾರೆ. ನಮ್ಮಲ್ಲಿರುವ ವ್ಯವಸ್ಥೆಯನ್ನು ಬೇರೆಯವರು ನಮಗೇ ತೋರಿಸುವ ದುಸ್ಥಿತಿ ಬಂದಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ₹100 ಕೋಟಿ ಪ್ರಸ್ತಾವ ಸಲ್ಲಿಸಿ ಮಂಜೂರಾತಿ ಪಡೆಯುತ್ತೇವೆ’ ಎಂದರು.

ಯಾಣದಲ್ಲಿ ರೋಪ್‌ ವೇಗೆ ಪ್ರಸ್ತಾವ:

‘ಜಿಲ್ಲೆ ಪ್ರವಾಸೋದ್ಯಮಕ್ಕೆ ಸೂಕ್ತವಾಗಿದೆ. ಸಾಕಷ್ಟು ಅವಕಾಶಗಳಿದ್ದರೂ ಯೋಜನೆಗಳು ಮಾತ್ರ ಕಾರ್ಯಗತಗೊಳ್ಳುತ್ತಿಲ್ಲ. ಯಾಣದಲ್ಲಿ ರೋಪ್‌ ವೇಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಕಾರವಾರದಿಂದ ಮಂಗಳೂರುವರೆಗೆ ಬೋಟ್ ಟೂರಿಸಂ ಪ್ರಾರಂಭಿಸಬಹುದು. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಅದರಿಂದ ಆದಾಯವನ್ನು ಲೆಕ್ಕಹಾಕಲು ಸರ್ಕಾರ ಪ್ರತ್ಯೇಕ ಇಲಾಖೆಯನ್ನೇ ತೆರೆಯ ಬೇಕಾಗಬಹುದು’ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

‘ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ’:

‘ಜಿಲ್ಲೆಯನ್ನು ಟೂರಿಸಂ ಬ್ರ್ಯಾಂಡ್ ಆಗಿ ಮಾಡಬೇಕಾಗಿದೆ. ಟೆಂಪಲ್ ಟೂರಿಸಂ, ಬೀಚ್ ಟೂರಿಸಂ, ಫಾರೆಸ್ಟ್ ಟೂರಿಸಂ, ಇಕೋ ಟೂರಿಸಂ, ಸಾಂಸ್ಕೃತಿಕ ಟೂರಿಸಂ ಅನ್ನು ಒಂದೇ ವೇದಿಕೆಯಡಿ ತರಬೇಕಾಗಿದೆ. ಇದರಿಂದ ಪ್ರವಸೋದ್ಯದಲ್ಲಿ ತೊಡಗಿಸಿಕೊಂಡವರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಗೇಮ್ ಎಂಬ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಮುಂದಿನ 10-15 ವರ್ಷದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಸಹಾಯ ಮಾಡಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಅಕ್ಷಯ ಫೌಂಡೇಷನ್‌ನ ರಾಜೀವ ಗಾಂವಕರ್ ಮಾತನಾಡಿ, ‘ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೆಲವು ಇಲಾಖೆಯಿಂದ ತುಂಬಾ ಕಿರುಕುಳವಾಗುತ್ತಿದೆ. ಇದರಿಂದ ಅಭದ್ರತೆಯ ಭಾವನೆ ಬರುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಜನ್ನು ಮಾತನಾಡಿ, ‘ಸ್ಥಳೀಯ ಉದ್ಯಮಿಗಳನ್ನು ಅಧಿಕಾರಿಗಳು ಅಪರಾಧಿಗಳಂತೆ ನೋಡುವ ಮನೋಭಾವ ಬದಲಾಗಬೇಕಿದೆ’ ಎಂದರು.

ಗೇಮ್ ಸಂಸ್ಥೆಯ ಸಿಇಒ ಸುರೇಶ ಗುಂಡಪ್ಪ ಮಾತನಾಡಿದರು. ಪ್ರವಾಸೋದ್ಯಮ ಅಧಿಕಾರಿ ಯೋಗೀಶ ವೇದಿಕೆಯ ಮೇಲಿದ್ದರು. ಪ್ರವಾಸೋದ್ಯಮದ ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು