ಕಾರವಾರ: ಸಮಾನ ಮನಸ್ಕ ಯುವಕ, ಯುವತಿಯರು ಸೇರಿ ಕಟ್ಟಿಕೊಂಡಿರುವ ಯುವ ಪ್ರಗತಿಪರ ಸಂಘಟನೆ ಮುಂಡಗೋಡ ತಾಲ್ಲೂಕಿನ ಕ್ಯಾದಗಿಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೊಳಪು ಕೊಟ್ಟಿದೆ.
ಕ್ಯಾದಗಿಕೊಪ್ಪ ಮತ್ತು ಸುತ್ತಮುತ್ತಲಿನ ಕೆಲ ಹಳ್ಳಿಗಳ ಪ್ರಮುಖರನ್ನು ಭೇಟಿ ಮಾಡಿದ ಯುವ ತಂಡ ಶಾಲೆಗೆ ಸುಧಾರಣೆ ತರಲು ಮನವೊಲಿಸಿತ್ತು. ದಾನಿಗಳು ನೀಡಿದ ದೇಣಿಗೆಗೆ ತಮ್ಮ ಪಾಲನ್ನೂ ಸ್ವಲ್ಪ ಸೇರಿಸಿ ಶಾಲೆಗೆ ಬಣ್ಣ ಬಳಿದಿದ್ದಾರೆ. ಮುರಿದು ವರ್ಷಗಳೆ ಕಳೆದಿದ್ದ ಗೇಟನ್ನು ಬದಲಾಯಿಸಿ ಹೊಸ ಗೇಟು ಅಳವಡಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಶಾಲೆಯ ಕೊಠಡಿಗಳಿಗೆ ಬಣ್ಣ ಬಳಿಯುವ ಕಾರ್ಯವನ್ನು 14 ಜನರ ಯುವ ತಂಡ ಮಾಡುತ್ತಿತ್ತು. 17 ವಿದ್ಯಾರ್ಥಿಗಳಿರುವ ಶಾಲೆಯ ಕಟ್ಟಡ ಮಾಸಿದ್ದನ್ನು ಗಮನಿಸಿದ್ದ ತಂಡ ಈ ಶಾಲೆಯಲ್ಲಿ ಸುಧಾರಣೆ ತರುವ ಮೂಲಕ ಸರ್ಕಾರಿ ಶಾಲೆಗಳ ಸುಧಾರಣೆಗೆ ಅಭಿಯಾನ ಆರಂಭಿಸಲು ನಿರ್ಧರಿಸಿತ್ತು.
‘ವಿದ್ಯಾರ್ಥಿಗಳು, ಖಾಸಗಿ ಉದ್ಯೋಗಗಳಲ್ಲಿದ್ದವರು ಸೇರಿ ಸಂಘಟನೆ ಕಟ್ಟಿಕೊಂಡಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ತರಬೇಕು ಎಂಬುದೇ ಸಂಘಟನೆಯ ಉದ್ದೇಶ’ ಎನ್ನುತ್ತಾರೆ ಸಂಸ್ಥಾಪಕ ಗುರುರಾಜ್ ನಾಯ್ಕ ಕ್ಯಾದಗಿಕೊಪ್ಪ.
‘ಶಾಲೆಗಳಿಗೆ ಬಣ್ಣ ಬಳಿದು ಹೊಸತನ ಮೂಡಿಸುವ ಯೋಚನೆಯೊಂದಿಗೆ ಈ ಕೆಲಸ ಆರಂಭಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದ ಸದಸ್ಯರೇ ಹೆಚ್ಚಿರುವ ಕಾರಣ ದಾನಿಗಳ ನೆರವು ಪಡೆಯಲು ಮುಂದಾಗಲಾಯಿತು. ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿಯ ನೆರವಿನಿಂದ ಸುಮಾರು ₹25 ಸಾವಿರಕ್ಕೂ ಹಚ್ಚು ಮೊತ್ತ ಸಂಗ್ರಹವಾಯಿತು. ಕೆಲ ಸದಸ್ಯರೂ ವೆಚ್ಚ ಭರಿಸಿದರು. ಇದರಲ್ಲಿ ಶಾಲೆಗೆ ಬಣ್ಣ ಬಳಿದಿದ್ದೇವೆ. ನಲಿಕಲಿ ಕೊಠಡಿಗಳಿಗೆ ಅಗತ್ಯವಿರುವ ಚಿತ್ರ ರಚಿಸಿಕೊಡಲಾಗಿದೆ. ಬರಹಗಳಿಗೆ ನುರಿತ ಕಲಾವಿದರನ್ನು ಕರೆಯಿಸಿದ್ದೇವೆ’ ಎಂದು ವಿವರಿಸಿದರು.
‘ಯುವಕರ ತಂಡವೊಂದು ರಜಾದಿನದಲ್ಲಿ ಮೋಜು ಮಸ್ತಿ ಮಾಡದೆ ಶಾಲೆಗೆ ಬಣ್ಣ ಬಳಿದಿದ್ದು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಸಂಕೇತ ಎನಿಸಿದೆ. ಬಣ್ಣ ಮಾಸಿದ್ದ ಶಾಲೆಯ ಕಟ್ಟಡ ಯುವಕರ ಪ್ರಯತ್ನದಿಂದ ಕಂಗೊಳಿಸುತ್ತಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ರವಿ ಭಜಂತ್ರಿ ಹರ್ಷ ವ್ಯಕ್ತಪಡಿಸಿದರು.
ಶಾಲೆ ಸುಧಾರಣೆ ಅಭಿಯಾನ:
‘ಕ್ಯಾದಗಿಕೊಪ್ಪ ಶಾಲೆಗೆ ಬಣ್ಣ ಬಳಿಯುವ ಮೂಲಕ ಸರ್ಕಾರಿ ಶಾಲೆ ಸುಧಾರಿಸುವ ಅಭಿಯಾನ ಆರಂಭಿಸುತ್ತಿದ್ದೇವೆ. ತಿಂಗಳಿಗೊಂದು ಶಾಲೆ ಆಯ್ದುಕೊಂಡು ಅಲ್ಲಿ ಅಗತ್ಯ ಸೌಕರ್ಯ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಇನ್ನೂ ಮೂರರಿಂದ ನಾಲ್ಕು ಶಾಲೆಗಳಿಂದ ಬೇಡಿಕೆ ಇದೆ’ ಎನ್ನುತ್ತಾರೆ ಗುರುರಾಜ್.
ತಮಡದಲ್ಲಿ ವಿ.ಟಿ.ಪ್ರಶಾಂತ್, ಎಸ್.ಜಿ.ಭಾರ್ಗವ, ರಿತೇಶ್ ನಾಯ್ಕ, ಅಭಿಜಿತ್ ನಾಯ್ಕ, ಸಚಿನವ ಗೌಡ, ಬಿ.ಡಿ.ಸುನೀಲ್, ಪುನೀತ್, ಕೆ.ಬಿ.ದರ್ಶನ್, ಸೌಮ್ಯ ಕಲ್ಬುರ್ಗಿ, ಪೂಜಾ ನಾಯ್ಕ, ಎಚ್.ಪ್ರಿಯಾ, ಸಂಗೀತಾ ಹಿರೇಮಠ, ಶಂಭುಲಿಂಗ ಅಂಡಗಿ ಇದ್ದಾರೆ.
****
ಕುಗ್ರಾಮಗಳ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸುಧಾರಣೆ ತರಲು ಸಹಾಯಹಸ್ತ ಚಾಚಲು ನಿರ್ಧರಿಸಿದ್ದು ಸಮಾನ ಮನಸ್ಕ ಸ್ನೇಹಿತರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.
ಗುರುರಾಜ್ ನಾಯ್ಕ, ಯುವ ಪ್ರಗತಿಪರ ಸಂಘಟನೆ ಸಂಸ್ಥಾಪಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.