ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲೊಂದು ಕುಗ್ರಾಮ ‘ಗುಡ್ಡಳ್ಳಿ’

ವಾಹನ ಬರಲಾರದ ದಾರಿ; ಅಧಿಕಾರಿಗಳು ತಲುಪದ ಕೇರಿ
Last Updated 23 ಏಪ್ರಿಲ್ 2014, 9:42 IST
ಅಕ್ಷರ ಗಾತ್ರ

ಕಾರವಾರ: ಗುಡಿಸಲು ಮನೆಗಳು, ಅಂಗಡಿಗಳಿಲ್ಲದ ಓಣಿ, ಸುತ್ತಲೂ ಕಾನನದ ಗೋಡೆ, ಕಲ್ಲು, ಮುಳ್ಳು, ತಗ್ಗು ದಿಣ್ಣೆಗಳ ದಾರಿ, ವಾಹನ ಸಂಪರ್ಕ ಎನ್ನುವುದು ಕನಸಿನ ಮಾತು. ಇಂತಹ ಕುಗ್ರಾಮವೊಂದು ಇಂದಿಗೂ ಕಾರವಾರ ನಗರದಲ್ಲಿದೆ.

ಹೌದು, ಕಾರವಾರ ನಗರದಲ್ಲಿರುವ ಗುಡ್ಡಳ್ಳಿ ಗ್ರಾಮ, ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಇದು ನಗರದಿಂದ 8 ಕಿ.ಮೀ. ದೂರದಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು 800 ರಿಂದ 100 ಅಡಿ ಎತ್ತರದಲ್ಲಿದೆ. ಆದರೂ, ಈ ಗ್ರಾಮ ಕಾರವಾರ ನಗರಸಭೆಯ ಬಿಣಗಾ ವಾರ್ಡ್‌ (31) ವ್ಯಾಪ್ತಿಗೆ ಸೇರಿದೆ.
ಇಲ್ಲಿ ಸುಮಾರು 25 ಕುಟುಂಬಗಳು ವಾಸವಿದ್ದು, 150ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಂದು ಪ್ರಾಥಮಿಕ ಶಾಲೆ ಹಾಗೂ ನಿತ್ಯವೂ ಕಣ್ಣಾ ಮುಚ್ಚಾಲೆ ಆಡುವ ವಿದ್ಯುತ್‌ ಸೌಲಭ್ಯ ಬಿಟ್ಟರೆ ಸರ್ಕಾರದ ಮತ್ತೆ ಯಾವ ಸೌಲಭ್ಯವನ್ನೂ ಇಲ್ಲಿ ಕಾಣಲು ಸಾಧ್ಯವಿಲ್ಲ.

ನಿತ್ಯ ಚಾರಣ: ಗುಡ್ಡಳ್ಳಿಗೆ ಹೋಗಲು ನಗರದ ಹೈ ಚರ್ಚ್‌ (8 ಕಿ.ಮೀ.) ಹಾಗೂ ಬಿಣಗಾದಿಂದ (5ಕಿ.ಮೀ.) ದಾರಿ ಇದೆ. ಇದರಲ್ಲಿ ಯಾವ ಮಾರ್ಗದಿಂದ ಹೋದರೂ, ಚಾರಣ ಹೊರಟಂತೆಯೇ. ಕಡಿದಾದ ಗುಡ್ಡ ಪ್ರದೇಶ, ಕಲ್ಲು ಮುಳ್ಳುಗಳಿಂದ ಕೂಡಿದ ದಾರಿ. ಒಮ್ಮೆ ನಗರಕ್ಕೆ ಬಂದು ಹೋದರೆ, ಒಂದು ದಿನ ಅಲ್ಲಿಗೆ ಮುಗಿದು ಹೋಗುತ್ತದೆ. ಹೀಗಾಗಿ ಪೂರ್ವ ಸಿದ್ಧತೆ ಇಲ್ಲದೇ ಗುಡ್ಡಳ್ಳಿಗೆ ಹೋಗುವುದು ಬಲು ಕಷ್ಟ. ಆದರೆ, ಗ್ರಾಮದ ಜನರಿಗೆ ಮಾತ್ರ ಇದೇ ನಿತ್ಯದ ದಾರಿ.

ಇನ್ನು ವಿದ್ಯಾರ್ಥಿಗಳ ಪಾಡು ಹೇಳ ತೀರದು. ಪ್ರಾಥಮಿಕ ಶಿಕ್ಷಣದ ನಂತರ ವ್ಯಾಸಂಗ ಮಾಡಬೇಕಾದರೆ, ನಿತ್ಯವೂ 5ಕಿ.ಮೀ. ನಡೆದು ಬಿಣಗಾಕ್ಕೆ ಬರಬೇಕು. ಕತ್ತಲೆಯಾಗುವುದರೊಳಗೆ ಮರಳಿ ಮನೆ ಸೇರಬೇಕು. ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದ ನಂತರ ಓದಲು ಹೆದರುತ್ತಾರೆ ಎನ್ನುತ್ತಾರೆ ರವಿ ಗೌಡ.

ಕಂಬಳಿಯೇ ಅಂಬುಲನ್ಸ್‌: ಗುಡ್ಡಳ್ಳಿ ಜನ ಪ್ರತಿಯೊಂದಕ್ಕೂ ನಗರಕ್ಕೆ ಬರಬೇಕು. ಊರಿನಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ, ಕಂಬಳಿಯಲ್ಲಿ ಹೊತ್ತು ಕಾರವಾರಕ್ಕೆ ತರಬೇಕು. ರೋಗಿಯನ್ನು ಆಸ್ಪತ್ರೆಗೆ ಮುಟ್ಟಿಸುವುದೇ ದೊಡ್ಡ ಸವಾಲು. ಗರ್ಭಿಣಿಯರಿಗಂತು ಇದು ನರಕ. ಎಷ್ಟೋ ಮಕ್ಕಳು ಕಾಡಿನ ದಾರಿ ಮಧ್ಯೆಯೇ ಜನಿಸಿದ ಉದಾಹರಣೆಗಳನ್ನು ಗ್ರಾಮಸ್ಥರು ನೀಡುತ್ತಾರೆ.

‘ನಗರಸಭೆ ಸದಸ್ಯ ಗಣಪತಿ ಉಳ್ವೇಕರ ಅವರು ದೇವಸ್ಥಾನ ನಿರ್ಮಿಸಿಕೊಟ್ಟಿದ್ದು ಬಿಟ್ಟರೆ, ಮತ್ತೆ ಯಾವ ಜನಪ್ರತಿನಿಧಿಯಿಂದಲೂ ಊರಿಗೆ ಅನುದಾನ ಸಿಕ್ಕಿಲ್ಲ. ಸದ್ಯ ನಮಗೆ ಮುಖ್ಯವಾಗಿ ಬೇಕಿರುವುದು ರಸ್ತೆ. ವಾಹನ ಬಾರದಿದ್ದರೂ ಪರವಾಗಿಲ್ಲ. ಕನಿಷ್ಠ ನಾಲ್ಕು ಜನ ಜೊತೆಯಾಗಿ ಹೋಗುವಷ್ಟು ಅಗಲವಾದ ರಸ್ತೆ ನಿರ್ಮಿಸಿದರೆ ಸಾಕು. ಪ್ರಥಮ ಚಿಕಿತ್ಸೆಗಾಗಿ ಸಣ್ಣ ಆರೋಗ್ಯ ಕೇಂದ್ರ ತೆರೆದರೆ ಅದುವೇ ನಮ್ಮ ಭಾಗ್ಯ’ ಎನ್ನುತ್ತಾರೆ ರಾಮ ಗೌಡ.

ನಮಗೂ ಗೊಂದಲ!
‘ರಸ್ತೆ ಬಗ್ಗೆ ಊರಿನವರು ಖಾಳಜಿ ತೋರುತ್ತಿಲ್ಲ. ಜವಾಬ್ದಾರಿ ಗುತ್ತಿಗೆದಾರರಿಗೆ ಬಿಟ್ಟರೆ, ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಾರೆ. ಅಲ್ಲದೇ ರಸ್ತೆ ಬೇಕು, ಬೇಡ ಎನ್ನುವುದರ ಬಗ್ಗೆ ಗ್ರಾಮಸ್ಥರಲ್ಲಿಯೇ ಗೊಂದಲ ಇದೆ. ಹೀಗಾಗಿ ನಾವು ಗೊಂದಲದಲ್ಲಿದ್ದೇವೆ’
ರಮೇಶ ಗೌಡ ನಗರಸಭೆ ಸದಸ್ಯ

ವೆಚ್ಚವೇ ಹೆಚ್ಚು
‘ಗುಡ್ಡಳ್ಳಿ ಅರಣ್ಯ ಪ್ರದೇಶದಲ್ಲಿದೆ. ಹೀಗಾಗಿ ಇಲ್ಲಿ ರಸ್ತೆ ನಿರ್ಮಾಣ ಮಾಡಲು ತುಂಬ ವೆಚ್ಚ ತಗಲುತ್ತದೆ. ನಗರಸಭೆಯಿಂದ ಒಂದೇ ಬಾರಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಗರಸಭೆಯಿಂದ ಪ್ರತೀ ವರ್ಷ ಸ್ವಲ್ಪ ಸ್ವಲ್ಪ ಹಣ ಹಾಕಿ ರಸ್ತೆ ಮಾಡಲಾಗುವುದು.’
ಸಿ.ಡಿ. ದಳವಿ, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT