ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ ಅಭಿವೃದ್ಧಿಗೆ ಬೇಕು ₹1,334 ಕೋಟಿ

Published 23 ಜೂನ್ 2024, 4:48 IST
Last Updated 23 ಜೂನ್ 2024, 4:48 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆ ರಚನೆಯಾಗಿ ಮೂರು ವರ್ಷವಾಗುತ್ತ ಬಂದಿದ್ದು, ಹಲವು ಅಭಿವೃದ್ಧಿ ಕಾರ್ಯಗಳು ಇನ್ನೂ ಬಾಕಿ ಉಳಿದಿವೆ. ಹೀಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ₹500 ಕೋಟಿ ಸಹಿತ ₹1,334 ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.

ಶುಕ್ರವಾರ ಇಲ್ಲಿ ನಡೆದ ಸಿಎಂ ನೇತೃತ್ವದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ಪ್ರತಿ ವಿಭಾಗವಾರು ಅನುದಾನದ ಪಟ್ಟಿ ಸಹಿತ ಮನವಿಯನ್ನು ಸಲ್ಲಿಸಿದರು.

ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್‌ನಿಂದ 400 ಬೆಡ್‌ಗೆ ಹೆಚ್ಚಿಸುವುದಕ್ಕೆ ಮುಖ್ಯಮಂತ್ರಿ ಅವರು ತಾತ್ವಿಕ ಒಪ್ಪಿಗೆ ಕೊಟ್ಟಿದ್ದು, ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ ತಿಳಿಸಿದ್ದಾರೆ.

ಶಾಸಕ ಗವಿಯಪ್ಪ ಮನವಿ

ವಿಜಯನಗರ ಕ್ಷೇತ್ರದ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಸಹ ಮುಖ್ಯಮಂತ್ರಿ  ಅವರಿಗೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಗಳನ್ನು ಸಲ್ಲಿಸಿದ್ದಾರೆ. ಹೊಸಪೇಟೆ ಪಟ್ಟಣದ ವಸತಿ ರಹಿತ ಕುಟುಂಬಸ್ಥರಿಗೆ ಐದು ಸಾವಿರ ಜಿ+2 ಮಾದರಿಯ ಮನೆಗಳನ್ನು ಮಂಜೂರು ಮಾಡಬೇಕು, ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ 50 ಎಂ.ಎಲ್‌.ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಬೇಕು, ಹೊಸಪೇಟೆ ವ್ಯಾಪ್ತಿಯಲ್ಲಿ 220 ಕೆವಿ ವಿದ್ಯುತ್ ವಿತರಣಾ ಉಪ ಕೇಂದ್ರವನ್ನು ಮಂಜೂರು ಮಾಡಬೇಕು,  ಹೊಸಪೇಟೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಜೂರು ಮಾಡಬೇಕು,   ವಿಜಯನಗರ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು, ಸರ್ಕಾರಿ ಕಾನೂನು ಮತ್ತು ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಅವರು ಈ ಮನವಿಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಗವಿಯಪ್ಪ ತಿಳಿಸಿದ್ದಾರೆ.

ಡಿಎಂಎಫ್ ಗೊಂದಲ ಶೀಘ್ರ ಇತ್ಯರ್ಥ

ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯ (ಡಿಎಂಎಫ್) ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿ, ಈ ಬಗ್ಗೆ ಸಂಬಂಧಪಟ್ಟ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದ್ದು, ₹218 ಕೋಟಿ ಬರಬೇಕೆಂದು ಹೇಳುತ್ತಿದ್ದಾರೆ. ಬಳ್ಳಾರಿಯವರು ಅಷ್ಟು ಕೊಡಬೇಕಿಲ್ಲ ಎಂದು ಹೇಳುತ್ತಿದ್ದಾರೆ. ಜಿಲ್ಲೆ ವಿಭಜನೆಯಾದ ನಂತರ ಶೇ 28ರಷ್ಟು ವಿಜಯನಗರಕ್ಕೆ, ಶೇ 72ರಷ್ಟು ಬಳ್ಳಾರಿಗೆ ನೀಡಲು ತೀರ್ಮಾನವಾಗಿದೆ. ಅದರ ಪ್ರಕಾರವೂ ₹218 ಕೋಟಿ ಬರಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ತಿಳಿಸಿದರೆ, ಬಳ್ಳಾರಿ ಜಿಲ್ಲಾಧಿಕಾರಿ ಅಷ್ಟೊಂದು ಕೊಡಬೇಕಿಲ್ಲ ಎನ್ನುತ್ತಿದ್ದಾರೆ. ಇದನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು’ ಎಂದರು.

ಸಂಸದ ಇ.ತುಕಾರಾಂ ಅವರು ಸಂಡೂರು ಶಾಸಕರಾಗಿದ್ದಾಗ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಪತ್ರ ಬರೆದಿರುವ ಬಗ್ಗೆ ಮಾಧ್ಯಮದವರು ಮುಖ್ಯಮಂತ್ರಿಗಳ ಗಮನ ಸೆಳೆದಾಗ, ತುಕಾರಾಂ ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಅವರಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ ಎಂದರು.

ಸಕ್ಕರೆ ಕಾರ್ಖಾನೆ: ಶೀಘ್ರ ಸಭೆ

‘ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ನಿಟ್ಟಿನಲ್ಲಿ ಸಕ್ಕರೆ ಸಚಿವರು, ಅಧಿಕಾರಿಗಳನ್ನು ಕರೆದು ಶೀಘ್ರ ಸಭೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಶಾಸಕ ಗವಿಯಪ್ಪ ಅವರು ತಮ್ಮಲ್ಲಿ ಈ ಬಗ್ಗೆ ವಿಷಯ ತಿಳಿಸಿದ್ದು, ಶೀಘ್ರ ಇದರ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT