ಭಾನುವಾರ, ಫೆಬ್ರವರಿ 28, 2021
23 °C

ಪಾರ್ಕಿಂಗ್‌ ನಿಯಮ ಉಲ್ಲಂಘನೆಕ್ರಮಕ್ಕೆ ಸಚಿವರಿಂದ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ‘ನಗರದಲ್ಲಿ ಪಾರ್ಕಿಂಗ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನುಬದ್ಧವಾಗಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌, ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸಂಚಾರ ಸುವ್ಯವಸ್ಥೆಗೆ ಪೊಲೀಸ್‌ನವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ನಗರಸಭೆಯಿಂದ ಅವರಿಗೆ ಸಹಕಾರ ಸಿಗುತ್ತಿಲ್ಲ. ಅನೇಕ ಕಟ್ಟಡಗಳ ಕೆಳಗೆ ವಾಹನ ನಿಲುಗಡೆಗೆ ಜಾಗ ಮೀಸಲಿಡಲಾಗಿದೆ. ಹೀಗಿದ್ದರೂ ಅವುಗಳನ್ನು ಬಳಸುತ್ತಿಲ್ಲ. ರಸ್ತೆಬದಿ ವಾಹನ ನಿಲ್ಲಿಸುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈಗ ನಗರ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗಿರುವುದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಬಹುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದರು.

‘ಕಾಲೇಜು ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ನಗರಸಭೆ, ಸಂಚಾರ ಪೊಲೀಸರು ಒಟ್ಟಿಗೆ ಕೆಲಸ ಮಾಡಬೇಕು. ಜೂಜಾಟ ತಡೆಯಬೇಕು. ಅದಕ್ಕೆ ಆಸ್ಪದ ಕೊಡುವವರ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಬೇಕು. ವಿಸಿಲ್‌, ಸೈರೆನ್‌ನೊಂದಿಗೆ ಪೊಲೀಸರು ಎಲ್ಲ ಬಡಾವಣೆಗಳಲ್ಲಿ ಗಸ್ತು ತಿರುಗಬೇಕು’ ಎಂದು ಹೇಳಿದರು.

‘ಪೊಲೀಸರಿಗೆ ರಾತ್ರಿ ಗಸ್ತಿಗೆ ವಾಹನಗಳು ಬೇಕಿದ್ದರೆ ಕೊಡಲಾಗುವುದು. ನಗರದ ಪ್ರಮುಖ ಸ್ಥಳಗಳಲ್ಲಿ ಸಿಗ್ನಲ್‌, ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸಂಬಂಧಿಸಿದಂತೆ ಪ್ರಸ್ತಾವ ಸಿದ್ಧಪಡಿಸಬೇಕು. ಅದಕ್ಕೆ ಅಗತ್ಯ ಅನುದಾನ ಕಲ್ಪಿಸಲಾಗುವುದು’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ್‌, ಸಂಚಾರ ಇನ್‌ಸ್ಪೆಕ್ಟರ್‌ ಮಹಾಂತೇಶ ಸಜ್ಜನ್‌, ‘ವ್ಯವಸ್ಥಿತ ಪಾರ್ಕಿಂಗ್‌ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪಾರ್ಕಿಂಗ್‌ಗೆ ಅವಕಾಶವಿದ್ದರೂ ಅದನ್ನು ಬಳಸದ ಕಟ್ಟಡ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಈಗಾಗಲೇ ರಾತ್ರಿ ಗಸ್ತು ನಡೆಸಲಾಗುತ್ತಿದೆ. ಶೇ 90ರಷ್ಟು ಅಪರಾಧ ಪ್ರಕರಣಗಳು ತಗ್ಗಿವೆ’ ಎಂದು ತಿಳಿಸಿದರು.

ಬಳಿಕ ಮಾಧ್ಯಮದವರನ್ನು ಹೊರಗೆ ಕಳಿಸಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು