ಶನಿವಾರ, ಜುಲೈ 2, 2022
25 °C

28, 29ರಂದು ಅಖಿಲ ಭಾರತ ಮುಷ್ಕರ: ಸಿಐಟಿಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಮಾ. 28, 29ರಂದು ಕರೆ ಕೊಟ್ಟಿರುವ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ, ಜಿಲ್ಲೆಯಲ್ಲೂ ಮುಷ್ಕರ ನಡೆಸಲಾಗುವುದು’ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ ತಿಳಿಸಿದರು.

ಕೇಂದ್ರ ಸರ್ಕಾರವು ರಸ್ತೆ, ಸಾರಿಗೆ, ರೈಲು, ಬ್ಯಾಂಕ್, ಜೀವ ವಿಮೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಹಲವು ಸಾರ್ವಜನಿಕ ರಂಗದ ವಲಯಗಳನ್ನು ಖಾಸಗೀಕರಣ ಮಾಡುತ್ತಿದೆ. ಸಂಘಟಿತ ಮತ್ತು ಅಸಂಘಟಿತ ವಲಯದ ಕೋಟ್ಯಂತರ ನೌಕರರು, ಕಾರ್ಮಿಕರನ್ನು ಕಾರ್ಪೊರೇಟ್‌ ಸಂಸ್ಥೆಗಳ ಜೀತದಾಳು ಮಾಡಲು ಹೊರಟಿದೆ. ಇದು ಅಪಾಯಕಾರಿ ಬೆಳವಣಿಗೆ. ಇದರ ವಿರುದ್ಧ ಧ್ವನಿ ಎತ್ತತ್ತದಿದ್ದರೆ ದೇಶಕ್ಕೆ ದೊಡ್ಡ ಗಂಡಾಂತರವಿದೆ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಸಂಬಂಧಿಸಿದ 44 ಕಾಯ್ದೆಗಳನ್ನು ಬದಲಿಸಿ 4 ಸಂಹಿತೆಗಳನ್ನಾಗಿ ಮಾಡಲಾಗಿದೆ. ಕಾರ್ಮಿಕರ ಹಕ್ಕು ಕಸಿದುಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ. ಕಾರ್ಮಿಕರ ಸಂಘ ರಚನೆ, ಬೇಡಿಕೆಗಳ ಹೋರಾಟ, ಕನಿಷ್ಠ ವೇತನಕ್ಕೆ ಯಾರೂ ಹೋರಾಟ ಮಾಡಬಾರದ ರೀತಿಯಲ್ಲಿ ಸರ್ಕಾರ ನಿಯಮಗಳನ್ನು ಜಾರಿಗೆ ತರಲು ಹೊರಟಿದೆ. ಜನಸಾಮಾನ್ಯರು ಕಷ್ಟದಲ್ಲಿ ಬದುಕುತ್ತಿದ್ದಾರೆ. ಆದರೆ, ಅಂಬಾನಿ, ಅದಾನಿ ಆಸ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಎಲ್ಲ ವಿಚಾರಗಳ ಕುರಿತು ಮುಷ್ಕರದ ಸಂದರ್ಭದಲ್ಲಿ ಜನರಿಗೆ ತಿಳಿಸಲಾಗುವುದು ಎಂದರು. 

ಮಾ. 28ರಂದು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮುಷ್ಕರ ನಡೆಸಲಾಗುವುದು. ಮಾ. 29ರಂದು ಎಲ್ಲ ತಾಲ್ಲೂಕಿನವರು ಜಿಲ್ಲಾ ಕೇಂದ್ರಕ್ಕೆ ಬಂದು ಮುಷ್ಕರ ನಡೆಸುವರು. ಬಂಡವಾಳಷಾಹಿಗಳ ಪರವಾದ ಸರ್ಕಾರ, ಕಾರ್ಪೊರೇಟ್‌ನವರಿಂದ ದೇಶವನ್ನು ರಕ್ಷಿಸುವ ಕಾಲ ಬಂದಿದೆ. ಎಲ್ಲ ಸಣ್ಣ, ದೊಡ್ಡ ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಅಂಗಡಿ, ಮುಂಗಟ್ಟುಗಳನ್ನು ಬಂದ್‌ ಮಾಡಿ, ಮುಷ್ಕರವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ನಾಗರತ್ನಮ್ಮ, ಸಿದ್ದಲಿಂಗಮ್ಮ, ಕರುಣಾನಿಧಿ, ಎನ್‌. ಯಲ್ಲಾಲಿಂಗ, ಎಲ್‌. ಮಂಜುನಾಥ, ಈರಪ್ಪ, ಪಿ. ಮಂಜುನಾಥ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು