ಬುಧವಾರ, ಅಕ್ಟೋಬರ್ 5, 2022
27 °C
ತಣಿಯದ ವಿಜಯನಗರ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಸಮಾಧಾನ

ವಿಜಯನಗರ: ಪಟ್ಟು ಹಿಡಿದು ಧ್ವಜಾರೋಹಣಕ್ಕೆಅವಕಾಶ ಪಡೆದ ಆನಂದ್‌ ಸಿಂಗ್‌

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಪರಿಸರ, ಜೀವಿಶಾಸ್ತ್ರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಪಟ್ಟು ಹಿಡಿದು ವಿಜಯನಗರ ಜಿಲ್ಲೆಯಲ್ಲೇ ಧ್ವಜಾರೋಹಣ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ಗೊತ್ತಾಗಿದೆ.

‘ನನಗೆ ಸೇರಿದ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ₹6 ಕೋಟಿ ವೆಚ್ಚದಲ್ಲಿ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ. ಇದು ನನ್ನ ಕನಸಿನ ಯೋಜನೆಗಳಲ್ಲಿ ಒಂದಾಗಿದೆ. ಆ.15ರಂದು ಇದನ್ನು ಉದ್ಘಾಟಿಸಲು ಯೋಜಿಸಲಾಗಿದ್ದು, ಅದಕ್ಕಾಗಿ ನನಗೇ ಅವಕಾಶ ಮಾಡಿಕೊಡಬೇಕು’ ಎಂದು ಆನಂದ್‌ ಸಿಂಗ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಉಸ್ತುವಾರಿಯೊಬ್ಬರು, ಧ್ವಜಾರೋಹಣಕ್ಕೊಬ್ಬರು: ರಾಜ್ಯ ಸರ್ಕಾರದಿಂದ ವಿಚಿತ್ರ ಆದೇಶ

ಇಷ್ಟೇ ಅಲ್ಲ, ‘ಕೊಪ್ಪಳದ ಬದಲು ನನಗೆ ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿ ಬದಲಾವಣೆ ಮಾಡಿ ಪುನಃ ಅದನ್ನು ರದ್ದುಗೊಳಿಸಿದ್ದೀರಿ. ಅದಕ್ಕೆ ನನ್ನ ತಕರಾರಿಲ್ಲ. ಆದರೆ, 405 ಅಡಿ ಎತ್ತರದ ಧ್ವಜಾರೋಹಣಕ್ಕೆ ನನಗೇ ಅವಕಾಶ ಮಾಡಿಕೊಡಬೇಕು‘ ಎಂದು ಕೇಳಿಕೊಂಡಿದ್ದಾರೆ. ಬಳಿಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಸೇರಿದಂತೆ ಹಲವು ಹಿರಿಯ ಮುಖಂಡರ ಮೂಲಕವೂ ಒತ್ತಡ ಹೇರಿ, ತಮ್ಮ ಕಾರ್ಯ ಸಾಧಿಸಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

ತಣಿಯದ ಅಸಮಾಧಾನ:

ಗಮನಕ್ಕೆ ತರದೇ ಏಕಾಏಕಿ ಈ ತೀರ್ಮಾನ ಕೈಗೊಂಡಿರುವುದಕ್ಕೆ ಮುನಿಸಿಕೊಂಡಿರುವ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರ ಅಸಮಾಧಾನ ಇನ್ನೂ ತಣಿದಿಲ್ಲ ಎಂದು ಗೊತ್ತಾಗಿದೆ.

‘ಈ ಹಿಂದೆ ನನ್ನ ಗಮನಕ್ಕೆ ತರದೇ ಉಸ್ತುವಾರಿ ಬದಲಿಸಿ, ನಂತರ ರದ್ದುಪಡಿಸಿದ್ದರು. ಈಗ ನಾನು ಉಸ್ತುವಾರಿಯಾಗಿರುವ ಜಿಲ್ಲೆಯಲ್ಲೇ ಧ್ವಜಾರೋಹಣಕ್ಕೆ ಅವಕಾಶ ಇಲ್ಲವೆಂದರೆ ಹೇಗೆ? ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಮುಖ್ಯಮಂತ್ರಿಯವರು ಕರೆದು ಚರ್ಚಿಸಬಹುದಿತ್ತು. ನನಗಿಂತ ಕಾಂಗ್ರೆಸ್‌ನಿಂದ ಬಂದವರ ಮಾತಿಗೆ ಹೆಚ್ಚು ಬೆಲೆ ಕೊಡುತ್ತಿರುವುದು ಸರಿಯಲ್ಲ. ಇದರಿಂದ ತಪ್ಪು ಸಂದೇಶ ಹೋಗಿದ್ದು, ವರಿಷ್ಠರ ಬಳಿ ಈ ವಿಷಯ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಶಶಿಕಲಾ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಶಿಕಲಾ ಅವರು ಮಂಗಳವಾರ ಮಂತ್ರಾಲಯದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬೆಳಗಾವಿಗೆ ತಲುಪಿದ್ದು, ಅವರ ಪತಿ, ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಅವರೊಂದಿಗೆ ಚರ್ಚಿಸಿದ ನಂತರ ಮುಂದಿನ ನಿರ್ಧಾರಕ್ಕೆ ಬರಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

ಶಶಿಕಲಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಆನಂದ್‌ ಸಿಂಗ್‌ ಮಾಹಿತಿಗೆ ಲಭ್ಯರಾಗಲಿಲ್ಲ.

ಆನಂದ್‌ ಸಿಂಗ್‌ ಅವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು, ವಿಜಯನಗರ ಉಸ್ತುವಾರಿ ಶಶಿಕಲಾ ಅವರು ಕೊಪ್ಪಳದಲ್ಲಿ ಧ್ವಜಾರೋಹಣಕ್ಕೆ ನೇಮಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಇರದಿದ್ದರೆ ಅಥವಾ ಅನಾರೋಗ್ಯಕ್ಕೆ ಒಳಗಾದರೆ ಅವರ ಬದಲು ಜಿಲ್ಲಾಧಿಕಾರಿ ಧ್ವಜಾರೋಹಣ ಮಾಡುತ್ತಾರೆ. ಆದರೆ, ರಾಜ್ಯ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ, ಪಕ್ಷದಲ್ಲಿ ಗೊಂದಲ ಸೃಷ್ಟಿಸಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿಯೇ ಕೇಳಿ ಬರುತ್ತಿವೆ.

ಕೆಲ ಸಚಿವರಿಂದಲೂ ಬೇಡಿಕೆ:

ಸಚಿವ ಆನಂದ್‌ ಸಿಂಗ್‌ ಅವರಿಗೆ ಸ್ವಂತ ಜಿಲ್ಲೆಯಲ್ಲಿ ಧ್ವಜಾರೋಹಣಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಕೆಲವು ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ‘ಅವರಿಗೆ ಅವಕಾಶ ಕೊಡುವುದಾದರೆ ನಮಗೂ ನಮ್ಮ ಜಿಲ್ಲೆಗಳಲ್ಲಿ ಧ್ವಜಾರೋಹಣಕ್ಕೆ ಅವಕಾಶ ಮಾಡಿಕೊಡಬೇಕು. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಮಾಡಬಾರದು ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು