ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ಗೆ ಜಮೀನು: ಸಚಿವ ಆನಂದ್‌ ಸಿಂಗ್‌ ರಾಜೀನಾಮೆ ಕೊಡಲಿ

ಸಾರ್ವಜನಿಕರನ್ನು ವಂಚಿಸುವ ಸಚಿವರ ಕ್ರಮ ಬೇಜವಾಬ್ದಾರಿತನದ್ದು, ಟೀಕೆ
Last Updated 4 ಮೇ 2021, 7:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವುದನ್ನು ವಿರೋಧಿಸಿ ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆನಂದ್‌ ಸಿಂಗ್‌ ಅವರು ಈಗ ಯಾವುದೇ ರೀತಿಯ ಸಬೂಬು ನೀಡದೆ ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಈ ಸಂಬಂಧ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು. ಬಸವರಾಜ, ಮರಡಿ ಜಂಬಯ್ಯ ನಾಯಕ, ಆರ್‌. ಭಾಸ್ಕರ್‌ ರೆಡ್ಡಿ, ನಾಗರತ್ನಮ್ಮ, ಎ. ಕರುಣಾನಿಧಿ, ಗೋಪಾಲ ಅವರು ಮಂಗಳವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜಿಂದಾಲ್‌ಗೆ ಜಮೀನು ಕೊಡಬಾರದು ಎಂದು ಈ ಹಿಂದೆ ಆನಂದ್‌ ಸಿಂಗ್‌ ಅವರು ಕಾಂಗ್ರೆಸ್‌ ಮುಖಂಡ ಅನಿಲ್‌ ಲಾಡ್‌ ಅವರೊಂದಿಗೆ ಜಿಲ್ಲೆಯ ವಿವಿಧೆಡೆ ಹೋರಾಟ ನಡೆಸಿದ್ದರು. ಜಿಂದಾಲ್‌ ಈಸ್ಟ್‌ ಇಂಡಿಯಾ ಕಂಪನಿ ಎಂದು ಟೀಕಿಸಿದ್ದರು. ಈಗ ಅವರದೇ ಸರ್ಕಾರ ಜಿಂದಾಲ್‌ಗೆ ಜಮೀನು ಮಾರಾಟ ಮಾಡಿದೆ. ಜಮೀನು ಮಾರಾಟದ ವಿಷಯ ನನಗೆ ಗೊತ್ತಿರಲಿಲ್ಲ. ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರಿಂದ ಸಂಪುಟ ಸಭೆಗೆ ಹೋಗಲು ಆಗಿರಲಿಲ್ಲ ಎಂದು ಬೇಜವಾಬ್ದಾರಿತನದ ಹೇಳಿಕೆ ಕೊಟ್ಟಿದ್ದಾರೆ. ಇದು ಜಿಲ್ಲೆಯ ಜನತೆಯನ್ನು ವಂಚಿಸುವ ಕ್ರಮ. ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಅವಕಾಶವಾದಿ ರಾಜಕೀಯ ಮಾಡುತ್ತಿವೆ. ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್‌. ಯಡಿಯೂರಪ್ಪನವರು, ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಕ್‌ಬ್ಯಾಕ್‌ ಆರೋಪ ಮಾಡಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಇಂದು ಅವರೇ ಲಾಕ್‌ಡೌನ್‌ ಸಂದರ್ಭದಲ್ಲಿ ಜಿಂದಾಲ್‌ಗೆ ಜಮೀನು ಮಾರಾಟ ಮಾಡಿದ್ದಾರೆ. ಇದು ಅವರ ಇಬ್ಬಗೆಯ ನೀತಿ ತೋರಿಸುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಮಿತ್ತಲ್‌, ಜಿಂದಾಲ್‌ ಸೇರಿದಂತೆ ಇತರೆ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಅತಿ ಕಡಿಮೆ ಬೆಲೆಗೆ ರೈತರ ಜಮೀನು ಖರೀದಿಸುತ್ತಿವೆ. ಇಷ್ಟೇ ಅಲ್ಲ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿ ವರ್ಗದ ಬಡ ಸಾಗುವಳಿದಾರರ ಜಮೀನು ಕೂಡ ಅವರ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ. ತಾಲ್ಲೂಕಿನ ಜಿ. ನಾಗಲಾಪುರದಲ್ಲಿ 850 ಎಕರೆ ಜಮೀನು ಜಿಂದಾಲ್‌ ಹೆಸರಿಗೆ ವರ್ಗವಾಗಿದೆ’ ಎಂದು ಆರೋಪಿಸಿದರು.

‘ಜನ ಹಾಸಿಗೆ, ಆಮ್ಲಜನಕ, ವೆಂಟಿಲೇಟರ್‌, ಔಷಧ ಇಲ್ಲದೆ ಸಾಯುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಿಂದಾಲ್‌ ಕಂಪನಿಗೆ ಸಾರ್ವಜನಿಕರ ಆಸ್ತಿ ಮಾರಾಟ ಮಾಡುವುದರ ತುರ್ತಾದರೂ ಏನಿತ್ತು?’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT