ಮಂಗಳವಾರ, ಡಿಸೆಂಬರ್ 7, 2021
24 °C

ಗವಿಯಪ್ಪ ಮನೆಗೆ ಆನಂದ್‌ ಸಿಂಗ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಬುಧವಾರ ಬಿಜೆಪಿ ಮುಖಂಡ ಎಚ್‌.ಆರ್‌. ಗವಿಯಪ್ಪ ಅವರ ಮನೆಗೆ ಭೇಟಿ ನೀಡಿದರು.

ನೆಹರೂ ಕಾಲೊನಿಯ ಸಹಕಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಆನಂದ್‌ ಸಿಂಗ್, ಸಮೀಪದಲ್ಲೇ ಇದ್ದ ಗವಿಯಪ್ಪ ಅವರ ಮನೆಗೆ ಭೇಟಿ ನೀಡಿದರು. ಆದರೆ, ಗವಿಯಪ್ಪನವರು ಮನೆಯಲ್ಲಿ ಇರಲಿಲ್ಲ.

ಗವಿಯಪ್ಪನವರ ತಂದೆ ಎಚ್‌.ಆರ್‌. ರಂಗನಗೌಡ ಅವರನ್ನು ಆನಂದ್ ಸಿಂಗ್‌ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ಆನಂದ್‌ ಸಿಂಗ್‌ ಪರಿಚಯಿಸಿದರು. 

‘ನಿಮ್ಮ ಮನೆಯ ಪಕ್ಕದಲ್ಲೇ ಕಾರ್ಯಕ್ರಮ ಇತ್ತು. ಮುಗಿಸಿಕೊಂಡು ಹೋಗುವಾಗ ನಿಮ್ಮ ನೆನಪಾಗಿ ಇಲ್ಲಿಗೆ ಬಂದಿರುವೆ. ಆರೋಗ್ಯದಿಂದ ಇದ್ದೀರಿ ಎಂದು ಭಾವಿಸಿರುವೆ. ಹೊಸ ಜಿಲ್ಲೆ ಕಟ್ಟುವ ಕೆಲಸ ನಡೆಯುತ್ತಿದೆ. ಬರುವ ಜನವರಿಯಿಂದ ಎಲ್ಲ ಸರ್ಕಾರಿ ಸೇವೆಗಳು ಹೊಸ ಜಿಲ್ಲಾ ಕೇಂದ್ರದಲ್ಲಿ ಸಿಗುವಂತೆ ಪ್ರಯತ್ನಿಸುತ್ತಿರುವೆ’ ಎಂದು ಆನಂದ್‌ ಸಿಂಗ್‌ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರಂಗನಗೌಡ, ‘ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಾಯ, ಸಹಕಾರ ಕೊಡಲಾಗುವುದು. ಹೊಸ ಜಿಲ್ಲೆಯಾಗಿರುವುದು ಸಂತಸದ ವಿಷಯ. ಜನರಿಗೆ ಅನುಕೂಲವಾದರೆ ಸಾಕು’ ಎಂದು ಹೇಳಿದರು. ಗವಿಯಪ್ಪನವರ ಮಗ ವಿರೂಪಾಕ್ಷ ಇದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಆನಂದ್‌ ಸಿಂಗ್‌– ಗವಿಯಪ್ಪ ಎದುರಾಳಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್‌, ಬಿಜೆಪಿಯ ಗವಿಯಪ್ಪನವರನ್ನು ಸೋಲಿಸಿದ್ದರು. ಅದಾದ ಒಂದು ವರ್ಷದ ತರುವಾಯ, 2019ರಲ್ಲಿ ಆನಂದ್‌ ಸಿಂಗ್‌ ಕಾಂಗ್ರೆಸ್‌ ತೊರೆದು, ಪುನಃ ಬಿಜೆಪಿ ಸೇರಿದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಜಯಶಾಲಿಯಾಗಿದ್ದರು. ಆ ಚುನಾವಣೆಯಲ್ಲಿ ಗವಿಯಪ್ಪ ಸ್ಪರ್ಧಿಸಿರಲಿಲ್ಲ. ಬಿಜೆಪಿ ಗವಿಯಪ್ಪನವರಿಗೆ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಸ್ಥಾನ ನೀಡಿತ್ತು. ಆದರೆ, ಗವಿಯಪ್ಪ ಅದನ್ನು ತಿರಸ್ಕರಿಸಿದ್ದರು. ಅಷ್ಟೇ ಅಲ್ಲ, ಪಕ್ಷದ ಎಲ್ಲ ಚಟುವಟಿಕೆಗಳಿಂದ ಅವರು ದೂರ ಉಳಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು