ಮಂಗಳವಾರ, ಅಕ್ಟೋಬರ್ 26, 2021
23 °C

ಹೊಸಪೇಟೆ: ಸಕ್ಕರೆ ಕಾರ್ಖಾನೆ ಪುನಾರರಂಭಿಸಲು ಮುಖ್ಯಮಂತ್ರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನಗರದ ‘ಇಂಡಿಯನ್‌ ಶುಗರ್‌ ರಿಫೈನರಿ’ (ಐಎಸ್‌ಆರ್‌) ಸಕ್ಕರೆ ಕಾರ್ಖಾನೆ ಪುನಾರರಂಭಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಐಕ್ಯ ಹೋರಾಟ ಸಮಿತಿಯ (ರೈತರು, ಕಾರ್ಮಿಕರು, ಕೂಲಿಕಾರರು ಮತ್ತು ಜನಪರ ಸಂಘಟನೆಗಳ ಸಮನ್ವಯ ವೇದಿಕೆ)  ಮುಖಂಡರು ಆಗ್ರಹಿಸಿದರು.

ತಾಲ್ಲೂಕಿನ ಕಮಲಾಪುರ ಸಮೀಪದ ಆರೆಂಜ್‌ ಕೌಂಟಿಯಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರ ಮುಖಂಡರು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.

‘ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ. 2016–17ರಿಂದ ಸಕ್ಕರೆ ಕಾರ್ಖಾನೆ ಮುಚ್ಚಿರುವುದರಿಂದ ಕಬ್ಬು ಬೆಳೆಗಾರರು ತೊಂದರೆ ಎದುರಿಸುತ್ತಿದ್ದಾರೆ. ಆದ್ಯತೆಯ ಮೇರೆಗೆ ಕಾರ್ಖಾನೆ ಆರಂಭಿಸಲು  ಶೀಘ್ರ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

‘ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ನಡುವೆ ವಿವಾದ ಉಂಟಾಗಿ ಸಮಸ್ಯೆ ತಲೆದೋರಿದೆ. ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಬಗೆಹರಿಸಿಲ್ಲ. ಕೆಲ ಕಾಣದ ಸ್ವಾರ್ಥ ವ್ಯಕ್ತಿಗಳ ಕೈವಾಡವೂ ಇದರಲ್ಲಿ ಇದೆ. ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಿ ಕಾರ್ಖಾನೆ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

‘ಕಾರ್ಖಾನೆಯನ್ನು ಸರ್ಕಾರವೇ ಸ್ವಾಧೀನ ಪಡಿಸಿಕೊಂಡು, ಸಹಕಾರಿ ಕ್ಷೇತ್ರದಿಂದಲೇ ಆರಂಭಿಸಬೇಕು. ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಪಟ್ಟಾ ನೀಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌, ಶಾಸಕ ರಾಜೂಗೌಡ, ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌, ಐಕ್ಯ ಹೋರಾಟ ಸಮಿತಿಯ ಮುಖಂಡರಾದ ರಾಮಚಂದ್ರಗೌಡ, ಸಣ್ಣಕ್ಕಿ ರುದ್ರಪ್ಪ, ಆರ್‌. ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ, ಸೋಮಶೇಖರ್‌ ಘಂಟೆ, ಎನ್‌. ಯಲ್ಲಾಲಿಂಗ, ದಮ್ಮೂರು ಮಹೇಶ್, ರಮೇಶ್ ಗೌಡ, ವಿನಾಯಕ ಗೌಡ, ಕಟಗಿ ಕರೆ ಹನುಮಪ್ಪ, ಗುಜ್ಜಲ್ ಕರೆಹನುಮಪ್ಪ, ಸತ್ಯಮೂರ್ತಿ,  ರಮೇಶ್‍ಕುಮಾರ್, ತಾಯಪ್ಪ ನಾಯಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು