ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದ ಏಕೈಕ ಸಫಾರಿ ತಾಣಕ್ಕೆ ಹೊಸ ಕಳೆ

ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ವನ್ಯಜೀವಿ ಉದ್ಯಾನ
Published 9 ಜೂನ್ 2023, 23:18 IST
Last Updated 9 ಜೂನ್ 2023, 23:18 IST
ಅಕ್ಷರ ಗಾತ್ರ

ಎಂ.ಜಿ.ಬಾಲಕೃಷ್ಣ

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಭಾಗದ ಅತಿದೊಡ್ಡ ವನ್ಯಜೀವಿ ಉದ್ಯಾನ ಮತ್ತು ಮೃಗಾಲಯ ಎಂಬ ಖ್ಯಾತಿ ಗಳಿಸಿರುವ ಸಮೀಪದ ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ವನ್ಯಜೀವಿ ಉದ್ಯಾನದಲ್ಲಿ ವನ್ಯಜೀವಿಗಳಿಗೆ ಬದುಕಲು ಯೋಗ್ಯವಾದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಹಲವು ವನ್ಯಜೀವಿಗಳನ್ನು ಇಲ್ಲಿಗೆ ತಂದು ಇರಿಸುವ ಪ್ರಯತ್ನ ಸಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಫಾರಿ ವ್ಯವಸ್ಥೆ ಇರುವ ಏಕೈಕ ವನ್ಯಜೀವಿ ಧಾಮ ಎಂಬ ಖ್ಯಾತಿಯೂ ಈ ಉದ್ಯಾನಕ್ಕೆ ಇದ್ದು, ಉದ್ಯಾನದ ತುಂಬೆಲ್ಲ ಬಿರು ಬೇಸಿಗೆಯಲ್ಲೂ ನೀರು ಲಭ್ಯವಿರುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಸುಮಾರು 2 ಲಕ್ಷ ಲೀಟರ್‌ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಉದ್ಯಾನದ ಮೂಲೆ ಮೂಲೆಗೂ ನೀರು ಪೂರೈಸುವ ನಿಟ್ಟಿನಲ್ಲಿ ಸ್ಪ್ರಿಂಕ್ಲರ್‌ ವ್ಯವಸ್ಥೆ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಸಫಾರಿ ಪ್ರದೇಶದಲ್ಲಿ ಸದ್ಯ ಮೂರು ಸಿಂಹಗಳು, ಬಿಳಿ ಹುಲಿ ಸಹಿತ ಮೂರು ಹುಲಿಗಳು ಇವೆ. ಜತೆಗೆ ಜಿಂಕೆ, ಕೃಷ್ಣಮೃಗ, ಸಾರಂಗದಂತಹ  ಸಾಧು ಪ್ರಾಣಿಗಳೂ ಇವೆ. ಸಮೀಪದಲ್ಲೇ ಇರುವ ಮೃಗಾಲಯದಲ್ಲಿ ತಲಾ ನಾಲ್ಕು ಚಿರತೆಗಳು ಹಾಗೂ ಹುಲಿಗಳು, ಕರಡಿಗಳು, ಹಲವು ಅಪರೂಪದ ಹಕ್ಕಿಗಳು, ಮೊಸಳೆ, ಆಮೆ ಸಹಿತ ಹಲವು ಬಗೆಯ ಪ್ರಾಣಿಗಳಿವೆ. 

ಅತ್ಯಂತ ಭದ್ರತೆ: ಸಫಾರಿ ವಾಹನ ತೆರಳುವ ವೇಳೆ ಹುಲಿ, ಸಿಂಹಗಳು ದಾಳಿ ನಡೆಸುವುದಕ್ಕೆ ಯಾವುದೇ ರೀತಿಯಲ್ಲೂ ಅವಕಾಶ ನೀಡದ ರೀತಿಯಲ್ಲಿ ಅತ್ಯಂತ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಂದು ದ್ವಾರ ತೆರೆದ ಬಳಿಕ ವಾಹನ ಆವರಣದೊಳಕ್ಕೆ ತೆರಳಬೇಕು. ಆ ದ್ವಾರವನ್ನು ಮುಚ್ಚಿದ ಬಳಿಕ ಇನ್ನೊಂದು ದ್ವಾರವನ್ನು ತೆರೆಯಲಾಗುತ್ತದೆ. ಗೇಟ್‌ ನಿರ್ವಹಿಸುವ ವ್ಯಕ್ತಿಗಳಿಗೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಫಾರಿ ಹೋಗುವಾಗ ಅತ್ಯಂತ ಸುರಕ್ಷಿತ ಭಾವನೆ ಮೂಡುತ್ತದೆ. ಸಫಾರಿಯ  ವಾಹನಗಳಿಗೂ ಕಬ್ಬಿಣದ ಮೆಶ್‌ ಸಹಿತ ಸೂಕ್ತ ಭದ್ರತಾ ವ್ಯವಸ್ಥೆ ಇದೆ.

ಇಲ್ಲಿ ಇದುವರೆಗೆ ಯಾವುದೇ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವನ್ಯಪ್ರಾಣಿಗಳಿಂದ ದಾಳಿಯಾದ ವಿದ್ಯಮಾನ ನಡೆದಿಲ್ಲ. ವನ್ಯಪ್ರಾಣಿಗಳಿಗೆ ಆಹಾರ ನೀಡುವ ಸಿಬ್ಬಂದಿಯೂ ಇಲ್ಲಿ ಸುರಕ್ಷಿತ ವಾತಾವರಣದಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ಉದ್ಯಾನದ ಅಧಿಕಾರಿಯೊಬ್ಬರು ತಿಳಿಸಿದರು.

’ಈಗ ಇಲ್ಲಿಗೆ ಉತ್ಸಾಹದಿಂದಲೇ ಪ್ರವಾಸಿಗರು ಬರುತ್ತಿದ್ದಾರೆ. ಅವರ ಸಂಖ್ಯೆ ಹೆಚ್ಚಿದಂತೆಲ್ಲ ವನ್ಯಜೀವಿ ಧಾಮದಲ್ಲಿ ವ್ಯವಸ್ಥೆಯೂ ಉತ್ತಮಗೊಳ್ಳುತ್ತದೆ. ಪ್ರವಾಸಿಗರಿಂದ ಪಡೆಯುವ ಪ್ರವೇಶ ಶುಲ್ಕವೇ ಇಲ್ಲಿನ ಆದಾಯದ ಮೂಲ‘ ಎಂದು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಭೀಮರಾಯ ಶಿಳ್ಳೆಕ್ಯಾತ ‘ಪ್ರಜಾವಾಣಿ‘ಗೆ ತಿಳಿಸಿದರು.

ದೊಡ್ಡ ಆವರಣ, ಕಡಿಮೆ ಪ್ರಾಣಿಗಳು: 350 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ವನ್ಯಜೀವಿ ಉದ್ಯಾನದ ಗಾತ್ರವನ್ನು ಹೋಲಿಸಿದರೆ ಮತ್ತು ಇಲ್ಲಿನ ಭದ್ರತಾ ವ್ಯವಸ್ಥೆಗಳನ್ನು ನೋಡಿದರೆ ಇಲ್ಲಿರುವ ವನ್ಯಜೀವಿಗಳ ಸಂಖ್ಯೆ ಕಡಿಮೆಯೇ ಎಂದು ಹೇಳಬೇಕು.

’ಹಂತ ಹಂತವಾಗಿ ವನ್ಯಪ್ರಾಣಿಗಳನ್ನು ಸೇರಿಸಿಕೊಳ್ಳುವ  ಕಾರ್ಯ ನಡೆಯುತ್ತಿದೆ. ಪ್ರಾಣಿಗಳನ್ನು ಸೇರಿಸಿಕೊಂಡಂತೆ ವ್ಯವಸ್ಥೆಯೂ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ‘ ಎಂದು ವನ್ಯಜೀವಿ ಉದ್ಯಾನ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಿಸಿಎಫ್‌ ಕಿರಣ್‌ ಎಂ.ಎನ್‌. ’ಪ್ರಜಾವಾಣಿ‘ಗೆ ತಿಳಿಸಿದರು.

’ಈ ಬಾರಿ ಬಿರು ಬೇಸಿಗೆಯಲ್ಲೂ ನೀರಿಗೆ ತೊಂದರೆ ಆಗಲಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಹಂತದಲ್ಲೂ ನೀರಿಗೆ ತೊಂದರೆ ಆಗದ ರೀತಿಯಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ, ಅಲ್ಲಲ್ಲಿ ವಾಟರ್‌ ಗನ್‌ (ಸ್ಪ್ರಿಂಕ್ಲರ್‌) ಅಳವಡಿಕೆ ನಡೆಯುತ್ತಿದೆ. ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಕಾರ್ಯ ಒಂದು ತಿಂಗಳೊಳಗೆ ಕೊನೆಗೊಳ್ಳಲಿದೆ‘ ಎಂದು ಅವರು ಮಾಹಿತಿ ನೀಡಿದರು.

ವಿಶ್ವ ಪಾರಂಪರಿಕ ತಾಣ ಹಂಪಿಯ ಸಮೀಪದಲ್ಲೇ ಇರುವ ಈ ವನ್ಯಜೀವಿ ಧಾಮ ಪ್ರವಾಸಿಗರಿಗೆ ತಮ್ಮ ಪ್ರವಾಸವನ್ನು ಪೂರ್ಣಗೊಳಿಸಲು ಸಿದ್ಧಪಡಿಸಿದಂತಹ ಸೂಕ್ತ ತಾಣ ಎಂಬಂತೆ ಬೆಳೆಯುತ್ತಿದೆ.

ಮೃಗಾಲಯದಲ್ಲಿ ಚಿರತೆಯ ಮೋಹಕತೆ  –ಪ್ರಜಾವಾಣಿ ಚಿತ್ರ/ ಲವ 
ಮೃಗಾಲಯದಲ್ಲಿ ಚಿರತೆಯ ಮೋಹಕತೆ  –ಪ್ರಜಾವಾಣಿ ಚಿತ್ರ/ ಲವ 

ವನ್ಯಜೀವಿ ಉದ್ಯಾನ–ಶುಲ್ಕ ವಿವರ

ಸಫಾರಿ ಮತ್ತು ಮೃಗಾಲಯ;₹150 (6–12 ವರ್ಷದ ಮಕ್ಕಳಿಗೆ ₹ 75) ಸಫಾರಿ  ಮಾತ್ರ;₹100 (ಮಕ್ಕಳಿಗೆ ₹50) ಮೃಗಾಯಲಯ ಮಾತ್ರ:₹50 (ಮಕ್ಕಳಿಗೆ ₹25) *6  ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ––––– ಸಫಾರಿಗೆ  5 ಬಸ್‌ಗಳು 4 ಜೀಪುಗಳು 2 ತೆರೆದ ಚೀಪುಗಳಿವೆ

ಐವರಷ್ಟೇ ಕಾಯಂ ಸಿಬ್ಬಂದಿ

ವನ್ಯಜೀವಿ ಉದ್ಯಾನದಲ್ಲಿ ಸುಮಾರು 45 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಐವರು ಮಾತ್ರ ಕಾಯಂ ಸಿಬ್ಬಂದಿ. ಉಳಿದವರನ್ನು ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT