ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರರ ಭಾಷೆ, ಬದುಕು ಸುಂದರ: ಪ್ರೊ.ಸ.ಚಿ.ರಮೇಶ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ.ರಮೇಶ
Last Updated 22 ಮಾರ್ಚ್ 2021, 15:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬಂಜಾರ ಸಮಾಜದವರ ಭಾಷೆ, ಬದುಕು ಬಹಳ ಸುಂದರವಾದುದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ ಹಾಗೂ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ ‘ಭಾಷಾ ಶಾಸ್ತ್ರೀಯ ನೆಲೆಯಲ್ಲಿ ದಕ್ಷಿಣ ಭಾರತದ ಲಂಬಾಣಿ ಭಾಷೆ’ ಕುರಿತ ವಿಚಾರ ಸಂಕೀರ್ಣ ಸೋಮವಾರ ಉದ್ಘಾಟಿಸಿ ಮಾತನಾಡಿದರು.

‘ಬಂಜಾರ ಸಮಾಜದ ಜನ ವಿಶ್ವಮಾನವ ತತ್ವ ಜಗತ್ತಿಗೆ ಸಾರುವಂತಹ ಮುಗ್ಧರು. ನಾಗರಿಕ ಸಮಾಜದ ಭಾಷೆಗಳಿಗಿಂತ ಬಂಜಾರರ ಭಾಷೆ ವಿಭಿನ್ನವಾಗಿದೆ. ಹಲವು ಭಾಷೆಗಳ ಮಿಳಿತವಾಗಿದ್ದು, ಸಮೃದ್ಧಿಯ ದ್ಯೋತಕ’ ಎಂದು ತಿಳಿಸಿದರು.

‘ಕರಕುಶಲ, ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಬಂಜಾರ ಸಮಾಜದ ಮಹಿಳೆಯರು ವಿಶಿಷ್ಟ ಕೌಶಲ ಸಾಧಿಸಿದ್ದಾರೆ. ಮಾರುಕಟ್ಟೆಯಲ್ಲಿ ಅವುಗಳಿಗೆ ಅಪಾರವಾದ ಬೇಡಿಕೆ ಇದೆ. ಅದಕ್ಕೆ ದೊಡ್ಡ ಮಾರುಕಟ್ಟೆ ಸೃಷ್ಟಿಸುವ ಅಗತ್ಯ ಇದೆ’ ಎಂದರು.

ಪ್ರಾಧ್ಯಾಪಕ ಶಾಂತ ನಾಯ್ಕ ಮಾತನಾಡಿ, ‘ಬಂಜಾರ ಸಮಾಜದವರು ಉಡುಗೆ-ತೊಡುಗೆ, ಆಚಾರ-ವಿಚಾರ, ಭಾಷೆ, ಸಂಸ್ಕೃತಿ, ಸಂಪ್ರದಾಯದಿಂದ ದೇಶದ ಸಾಂಸ್ಕೃತಿಕ ವೈಭವ, ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಅವರ ಉಡುಗೆಯಂತೆ ಅವರ ಸಾಂಸ್ಕೃತಿಕ ಬದುಕು ಸಹ ವರ್ಣಮಯವಾಗಿದೆ’ ಎಂದರು.

‘ಕೊಂಕಣಿ, ಗೋರ್‍ಬೋಲಿ, ರಾಜಸ್ತಾನಿ, ಕಡಿಗೋಲಿ, ಗುಜರಾತಿ, ಮರಾಠಿ ಭಾಷೆಗಳ ಮಿಶ್ರಿತವಾದ ಬಂಜಾರ ಭಾಷೆ ಮತ್ತು ಸಂಸ್ಕೃತಿ ಸಮೃದ್ಧಿಯಿಂದ ಕೂಡಿದೆ. ಈಗಲೂ ಸಂಪೂರ್ಣವಾಗಿ ನಾಗರಿಕ ಸಮಾಜದಿಂದ ದೂರದಲ್ಲಿದ್ದಾರೆ. ಕಾಡು, ಗುಡ್ಡ, ನದಿ ಪಾತ್ರಗಳಲ್ಲಿ ಬದುಕು ಕಟ್ಟಿಕೊಂಡರೂ ಸಹ ಇವರ ಸಾಂಸ್ಕೃತಿಕ ಜೀವನ ಮಾತ್ರ ಬಹಳ ವಿಶಿಷ್ಟವಾದುದು. ಇಂದಿನ ಭಾಷಾ ರಾಜಕಾರಣದಿಂದ ಬಂಜಾರ ಭಾಷೆ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ’ ಎಂದು ವಿಷಾದಿಸಿದರು.

ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥ ಸುಚೇತ ನವರತ್ನ, ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಮಾಧವ ಪೆರಾಜೆ, ಕೆ.ರಮೇಶ, ಕೆ.ಆರ್.ಕೇಶವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT