ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಬಿಡಿಸಿಸಿ ಬ್ಯಾಂಕ್‌ಗೆ ₹12.53 ಕೋಟಿ ಲಾಭ

1.15 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದ ಕೆಸಿಸಿ ಸಾಲ ₹1,074 ಕೋಟಿ ವಿತರಣೆ
Published : 24 ಆಗಸ್ಟ್ 2024, 14:07 IST
Last Updated : 24 ಆಗಸ್ಟ್ 2024, 14:07 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) 2023–24ನೇ ಸಾಲಿನಲ್ಲಿ ₹12.53 ಕೋಟಿ (ಕಳೆದ ವರ್ಷ ₹12.31 ಕೋಟಿ) ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 4ರಷ್ಟು ಲಾಭಾಂಶ ಘೋಷಿಸಿದೆ.

ಶನಿವಾರ  ಇಲ್ಲಿ ನಡೆದ ಬ್ಯಾಂಕ್‌ನ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಬ್ಯಾಂಕ್‌ನ ಹೆಸರು ಕೆಡಿಸಲು ಈ ಹಿಂದೆ ಯತ್ನಿಸಲಾಗಿತ್ತು. ಹೀಗಿದ್ದರೂ ಬ್ಯಾಂಕ್‌ ತನ್ನ ರೈತ ಪರ ಬದ್ಧತೆಯಲ್ಲಿ ವಿಶ್ವಾಸ ಇಟ್ಟು ಮುನ್ನಡೆದಿದೆ. ಬ್ಯಾಂಕ್‌ನ ಶಾಸನಬದ್ಧ ಲೆಕ್ಕಪರಿಶೋಧನೆ ಮತ್ತು ನಬಾರ್ಡ್‌ ಪರಿವೀಕ್ಷಣೆಯಲ್ಲಿ ‘ಎ’ ರೇಟಿಂಗ್‌ ಪಡೆದಿದೆ. ಸದೃಢ ಮತ್ತು ಸಶಕ್ತ ಬ್ಯಾಂಕ್‌ ಎಂದು ನಬಾರ್ಡ್‌ ಪರಿಗಣಿಸಿರುವುದರಿಂದ ಉತ್ಸಾಹ ಇಮ್ಮಡಿಯಾಗಿದೆ’ ಎಂದು ಅವರು ಹೇಳಿದರು.

‘ಕೃಷಿಯೇತರ ಸಾಲ ನೀಡಿಕೆ ಪ್ರಮಾಣವನ್ನು ₹40 ಲಕ್ಷದಿಂದ ₹60 ಲಕ್ಷಕ್ಕೆ ಹೆಚ್ಚಿಸಲಾಗಿದೆ. 1,15,365 ರೈತರಿಗೆ ₹1,074 ಕೋಟಿ ಶೂನ್ಯ ಬಡ್ಡಿದರದ ಕೆಸಿಸಿ ಸಾಲ ನೀಡಲಾಗಿದೆ. ಕೃಷಿಯೇತರ ಸಾಲದ ಪ್ರಮಾಣ ಕೇವಲ ಶೇ 34ರಷ್ಟಿದೆ. ಸಾಲ ವಸೂಲಾತಿಯಲ್ಲಿ ಶೇ 94.56ರಷ್ಟು ಸಾಧನೆ ತೋರಿಸಲಾಗಿದ್ದು, ಎನ್‌ಪಿಎ ಪ್ರಮಾಣ ಶೇ 3.86ರಷ್ಟಿದೆ’ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ಯೋಜನೆಗಳು: ₹10 ಲಕ್ಷದವರೆಗೆ ರೈತರಿಗೆ ಸ್ವಾಭಿಮಾನಿ ಕಿಸಾನ್‌ ಕ್ರೆಡಿಟ್ ಸಾಲ, ಆನ್‌ಲೈನ್‌ ಮೂಲಕವೇ ಕೆಸಿಸಿ ಸಾಲ ವಿತರಣೆ, ಅದಕ್ಕಾಗಿ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ, 14 ಹೊಸ ಶಾಖೆ ಆರಂಭ, ಬ್ಯಾಂಕ್‌ ಶಾಖೆ ಇಲ್ಲದ ಕಡೆಯಲ್ಲೂ ಆಫ್‌ಸೈಟ್‌ ಎಟಿಎಂ ಸ್ಥಾಪನೆಯ ಗುರಿ ಇದೆ ಎಂದು ಅಧ್ಯಕ್ಷರು ಹೇಳಿದರು.

ಬ್ಯಾಂಕ್‌ನ ಷೇರು ಬಂಡವಾಳ ₹127 ಕೋಟಿ, ಕಾಯ್ದಿಟ್ಟ ನಿಧಿ ₹158 ಕೋಟಿ, ಸ್ವಂತ ಬಂಡವಾಳ ₹226 ಕೋಟಿ, ದುಡಿಯುವ ಬಂಡವಾಳ ₹2,553 ಕೋಟಿ,  ಒಟ್ಟು ಠೇವಣಿ ₹1,563 ಕೋಟಿ, ಒಟ್ಟು ವಿತರಿಸಿದ ಸಾಲ ₹1,511 ಕೋಟಿ, ಒಟ್ಟು ಹೂಡಿಕೆ ₹646 ಕೋಟಿ ಹಾಗೂ ಸಿ.ಆರ್.ಎ.ಆರ್. ಶೇ 12.80ರಷ್ಟಿದೆ ಎಂದು ಅವರು ವಿವರಿಸಿದರು.

ಬಹುತೇಕ ಎಲ್ಲ ನಿರ್ದೇಶಕರು, ಸಿಇಒ ಬಿ.ಜಯಪ್ರಕಾಶ್‌, ಸಿಬ್ಬಂದಿ ಇದ್ದರು.

ಹೊಸಪೇಟೆಯಲ್ಲಿ ಶನಿವಾರ ನಡೆದ ಬಿಡಿಸಿಸಿ ಬ್ಯಾಂಕ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರು ಸಿಬ್ಬಂದಿ ಪಾಲ್ಗೊಂಡಿದ್ದರು  –‍ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆಯಲ್ಲಿ ಶನಿವಾರ ನಡೆದ ಬಿಡಿಸಿಸಿ ಬ್ಯಾಂಕ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರು ಸಿಬ್ಬಂದಿ ಪಾಲ್ಗೊಂಡಿದ್ದರು  –‍ಪ್ರಜಾವಾಣಿ ಚಿತ್ರ/ ಲವ ಕೆ.
ಶೂನ್ಯ ಬಡ್ಡಿ ಘೋಷಿಸಿದ್ದ ರಾಜ್ಯ ಸರ್ಕಾರದಿಂದ ಬ್ಯಾಂಕ್‌ಗೆ ₹11.39 ಕೋಟಿ ಬರುವುದು ಬಾಕಿ ಇದೆ. ಈ ಮೊತ್ತ ಬಂದರೆ ಬಹಳ ಅನುಕೂಲವಾಗುತ್ತದೆ
- ಕೆ.ತಿಪ್ಪೇಸ್ವಾಮಿ ಅಧ್ಯಕ್ಷ ಬಿಡಿಸಿಸಿ ಬ್ಯಾಂಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT