ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಾಮುಲುಗೆ ಸೋಲು: ಮನೆಯಲ್ಲೇ ಕೂರ್ತಾರಾ? ಸಂಡೂರಿನತ್ತ ನೋಡ್ತಾರಾ?

ಪ್ರಯೋಜನಕ್ಕೆ ಬರಲಿಲ್ಲ ಅನುಕಂಪದ ಭಾಷಣ
Published 5 ಜೂನ್ 2024, 6:42 IST
Last Updated 5 ಜೂನ್ 2024, 6:42 IST
ಅಕ್ಷರ ಗಾತ್ರ

ಬಳ್ಳಾರಿ: ‘ಈ ಬಾರಿ ನನ್ನನ್ನು ನೀವು ಗೆಲ್ಲಿಸಲೇಬೇಕು, ಸೋತರೆ ನನ್ನ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತದೆ, ನಾನು ಮನೆಯಲ್ಲೇ ಕೂರಬೇಕಾಗುತ್ತದೆ’ ಎಂದು ಹಲವು ಸಾರ್ವಜನಿಕ ಪ್ರಚಾರ ಭಾಷಣಗಳಲ್ಲಿ ಹೇಳಿದ್ದ ಬಿ.ಶ್ರೀರಾಮುಲು ಸೋತೇಬಿಟ್ಟಿದ್ದಾರೆ. ಅವರೇ ಹೇಳಿದಂತೆ ಮನೆಯಲ್ಲೇ ಕೂರ್ತಾರಾ? ಸಂಡೂರಿನತ್ತ ನೋಡ್ತಾರಾ?

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಾರ್ಯಕರ್ತರು ಶ್ರೀರಾಮುಲು ಅವರನ್ನು ಸೋಲಿಸಿಯೇ ಬಿಟ್ಟಿದ್ದಾರೆ, ಆದರೆ ಹೊಸಪೇಟೆ ಮಂದಿ ಮಾತ್ರ ಸ್ವಲ್ಪ ಕರುಣೆ ತೋರಿದ್ದಾರೆ. ಹೀಗಿದ್ದರೂ ಒಟ್ಟಾರೆ ಫಲಿತಾಂಶದಲ್ಲಿ ಸುಮಾರು 98 ಸಾವಿರ ಅಂತರದ ಹಿನ್ನೆಡೆ ಅಷ್ಟು ಸುಲಭವಾಗಿ ಮರೆಯುವ ವಿಷಯವಲ್ಲ.

ಉಪಚುನಾವಣೆಯತ್ತ ಕಣ್ಣು: ಇ.ತುಕಾರಾಂ ಅವರು ಗೆಲುವು ಸಾಧಿಸಿದ್ದರಿಂದ ಸಂಡೂರು ಕ್ಷೇತ್ರದಲ್ಲಿ ವಿಧಾನಸಭೆಗೆ ಉಪಚುನಾವಣೆ ಅಗತ್ಯವಾಗುತ್ತದೆ. ಕಾಂಗ್ರೆಸ್‌ನಿಂದ ತುಕಾರಾಂ ಅವರ ಪುತ್ರಿ ಚೈತನ್ಯಾಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ. ಬಿಜೆಪಿಯಿಂದ ತಮಗೆ ಟಿಕೆಟ್ ನೀಡಬೇಕು ಎಂದು ಶ್ರೀರಾಮುಲು ವರಿಷ್ಠರನ್ನು ಕೇಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ರಾಜ್ಯದ ವಾಲ್ಮೀಕಿ ಸಮುದಾಯದ ಮೇರು ನಾಯಕ ಶ್ರೀರಾಮುಲು ಎಂಬುದರಲ್ಲಿ ಎರಡು ಮಾತಿಲ್ಲ. ಸಚಿವರಾಗಿದ್ದಾಗ ಈ ಸಮುದಾಯ ಸಹಿತ ಎಸ್‌ಟಿ ಸಮುದಾಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ನೂತನ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಅವರ ಪ್ರಯತ್ನ ಸಾಲದು. ಬಹುಶಃ ಇದು ಅವರ ಹಿನ್ನಡೆಗೆ ಕಾರಣ ಆಗಿರಬಹುದು’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

ಚುನಾವಣಾ ಪ್ರಚಾರದ ಸಮಯದಲ್ಲಿ ಹೊಸಪೇಟೆಯ ನಾಯಕರ ಕೇರಿಗಳಲ್ಲಿ ಶ್ರೀರಾಮುಲು ವಿರುದ್ಧ ಭಿನ್ನ ಧ್ವನಿ ಕೇಳಿಸಿತ್ತು. ‘ಅಧಿಕಾರದಲ್ಲಿದ್ದಾಗ ನೀವು ಎಷ್ಟು ಬಾರಿ ಇಲ್ಲಿಗೆ ಬಂದಿದ್ದೀರಿ? ನಮ್ಮ ಒಬ್ಬ ಯಜಮಾನನ್ನು ಗುರುತಿಸುವುದು ನಿಮಗೆ ಸಾಧ್ಯವಿದೆಯೇ?’ ಎಂಬ ಪ್ರಶ್ನೆಯನ್ನೇ ಕೇರಿಯ ಗುರಿಕಾರರು ಕೇಳಿದ್ದರು. ಕೇರಿಯವರ ಸಿಟ್ಟನ್ನು ಶಮನಗೊಳಿಸಲು ಶ್ರೀರಾಮುಲು ಮತ್ತೆ ಕೇರಿಗೆ ಬಂದರಾದರೂ ಅದು ಹೆಚ್ಚು ಫಲ ಕೊಟ್ಟಿಲ್ಲ ಎಂಬುದು ಫಲಿತಾಂಶದಿಂದ ಗೊತ್ತಾಗುತ್ತಿದೆ. ಹೀಗಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಹೊಸದಾಗಿ ರೂಪಿಸಿಕೊಳ್ಳಲು ಶ್ರೀರಾಮುಲು ಭಾವನಾತ್ಮಕ ವಿಚಾರಗಳಿಗಿಂತ ತಾವು ತಪ್ಪಿದ್ದೆಲ್ಲಿ ಎಂಬ ಆತ್ಮವಿಮರ್ಶೆ ಮಾಡಿಕೊಂಡರೆ ದಾರಿ ಸುಗಮವಾಗಬಹುದು ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT