ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಿಬೊಮ್ಮನಹಳ್ಳಿ: ಅಂಕಸಮುದ್ರಕ್ಕೆ ಪಕ್ಷಿಗಳ ವಲಸೆ ಆರಂಭ; ಪಕ್ಷಿ ಪ್ರಿಯರಿಗೆ ಹಬ್ಬ

Published 5 ಡಿಸೆಂಬರ್ 2023, 7:58 IST
Last Updated 5 ಡಿಸೆಂಬರ್ 2023, 7:58 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಚಳಿಗಾಲದ ಚುಮುಚುಮು ಇಬ್ಬನಿಯಲ್ಲಿ ಸೂರ್ಯ ಉದಯವಾಗುವ ಮುನ್ನ ಇಲ್ಲಿ ಬಾನಾಡಿಗಳ ಕಲರವ, ಇಂಪಾದ ಧ್ವನಿ ಪ್ರತಿದಿನ ಇಲ್ಲಿಗೆ ಬರುವ ಪಕ್ಷಿ ಪ್ರಿಯರ ಕಿವಿಯಲ್ಲಿ ಗುನುಗುತ್ತಲೇ ಇರುತ್ತದೆ.

ತಾಲ್ಲೂಕಿನ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿರುವ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶ. 244 ಎಕರೆ ಪ್ರದೇಶದ ವಿಸ್ತಾರದಲ್ಲಿ ಪ್ರತಿವರ್ಷ ದೇಶ ವಿದೇಶಗಳ ಹಲವಾರು ಪಕ್ಷಿಗಳು ಆಹಾರ ಅರಸಿ ಇಲ್ಲಿಗೆ ವಲಸೆ ಬರುತ್ತವೆ, ಚಳಿಗಾಲ ಆರಂಭವಾಗುತ್ತಲೇ ಪಕ್ಷಿಗಳ ಪೆರೇಡ್ ಆರಂಭವಾಗುತ್ತದೆ. ಆತಿಥ್ಯ ನೀಡಲು ಅಂಕಸಮುದ್ರ ಕೆರೆಯಲ್ಲಿರುವ ಮೀನುಗಳು, ತುಂಗಭದ್ರಾ ಹಿನ್ನೀರು ಪ್ರದೇಶಗಳಲ್ಲಿ ದೊರೆಯುವ ಕೀಟಗಳು ಇವೆ. ಬೆಳಗಿನ ಜಾವ ಆಹಾರಕ್ಕೆ ಹೊರಡುವ ಸಮಯ ಹಾಗೂ ಮತ್ತೆ ತಮ್ಮ ಸ್ಥಳಕ್ಕೆ ಬರುವ ಸೂರ್ಯ ಮುಳುಗುವ ಸಂದರ್ಭದಲ್ಲಿ ಹಕ್ಕಿಗಳ ನಿನಾದ ಕೇಳಲೆಂದೇ ವಿವಿಧ ಕಡೆಗಳಿಂದ ಪಕ್ಷಿ ಪ್ರಿಯರು ಬರುತ್ತಾರೆ.

ನಾರ್ಥನ್ ಶೆವಲರ್ (ಚಿಲಕ ಬಾತು), ಗಾರ್ಗೆನಿ (ಬಿಳಿ ಹುಬ್ಬಿನ ಬಾತು), ವುಡ್ ಶಾಂಡ್ ಪೈಪರ್ (ಚುಕ್ಕೆ ಗದ್ದೆ ಗೊರವ), ಕಾಮನ್ ಸ್ಯಾಂಡ್ ಪೈಪರ್ (ಗದ್ದೆ ಗೊರವ), ಪೇಂಟೆಡ್ ಸ್ಟಾರ್ಕ್ (ಬಣ್ಣದ ಕೊಕ್ಕರೆ) ಸ್ಪಾಟ್ ಬಿಲ್ಡ್ ಡಕ್, ಪೆಲಿಕಾನ್ (ಹೆಜ್ಜಾರ್ಲೆ), ಗ್ರೇ ಹೆರಾನ್ (ಬೂದು ಬಕ), ನೈಟ್ ಹೆರಾನ್ (ಇರುಳು ಬಕ), ಕ್ಯಾಟಲ್ ಈಗ್ರೇಟ್ (ಗೋವಕ್ಕಿ) ಸಹಿತ 150ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ಅಂಕಸಮುದ್ರದ ಅತಿಥಿಯಾಗಿವೆ.

ಜತೆಗೆ ಮಿಂಚು ಕೆಂಬರಲು (ಗ್ಲೋಸಿ ಐಬೀಸ್), ಪೇಂಟೆಡ್ ಸಾರ್ಟ್ (ಬಣ್ಣದ ಕೊಕ್ಕರೆ), ಓಬನ್ ಬಿಲ್ ಸ್ಟಾರ್ಕ್ (ಬಾಯ್ಕಳಕ), ಕೋಮ್ ಡಕ್ (ಕೊಂಬಿನ ಬಾತು) ಸೇರಿದಂತೆ 25ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಅಂಕಸಮುದ್ರಕ್ಕೆ ತಂಡೋಪತಂಡವಾಗಿ ಬರುತ್ತಿವೆ. ವಿವಿಧ ರಾಜ್ಯಗಳಲ್ಲಿನ ಕೆಲವು ಪಕ್ಷಿಗಳು ಇಲ್ಲಿಯೇ ವಾಸ್ತವ್ಯ ಹೂಡಿದರೆ, ವಿದೇಶಗಳ ಅತಿಥಿ ಬಾನಾಡಿಗಳು ಚಳಿಗಾಲ ಮುಗಿದ ಬಳಿಕ ಮತ್ತೆ ತಮ್ಮ ಸ್ಥಾನಕ್ಕೆ ಮರಳುತ್ತವೆ.

ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಆಹಾರ ತಿನ್ನುವಲ್ಲಿ ತಲ್ಲೀನರಾಗಿರುವ ಗ್ರೇ ಹೆಡೆಡ್ ಸ್ವಾಂಪ್‍ಹೆನ್ (ಬೂದು ತಲೆಯ ನೀರು ಕೋಳಿ)
ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಆಹಾರ ತಿನ್ನುವಲ್ಲಿ ತಲ್ಲೀನರಾಗಿರುವ ಗ್ರೇ ಹೆಡೆಡ್ ಸ್ವಾಂಪ್‍ಹೆನ್ (ಬೂದು ತಲೆಯ ನೀರು ಕೋಳಿ)
ಇಂಡಿಯನ್ ಸ್ಟಾಟ್ ಬಿಲ್ಡ್ ಡಕ್ (ವರಟೆ ಚುಕ್ಕಿ ಬಾತು)
ಇಂಡಿಯನ್ ಸ್ಟಾಟ್ ಬಿಲ್ಡ್ ಡಕ್ (ವರಟೆ ಚುಕ್ಕಿ ಬಾತು)
ಗ್ರೇ ಹೆರಾನ್ (ಬೂದು ಬಕ) ಗಾಂಭೀರ್ಯ
ಗ್ರೇ ಹೆರಾನ್ (ಬೂದು ಬಕ) ಗಾಂಭೀರ್ಯ
ಪಕ್ಷಿಗಳನ್ನು ವೀಕ್ಷಿಸಲು ದುರ್ಬೀನು ವ್ಯವಸ್ಥೆ ಮಾಡಲಾಗಿದೆ. ಪಕ್ಷಿ ಪ್ರೇಮಿಗಳು ವೀಕ್ಷಣಾ ಗೋಪುರದಿಂದಲೂ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ
ರೇಣುಕಮ್ಮ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT