ಬೆಂಗಳೂರು: ಕರ್ತವ್ಯದ ವೇಳೆ ಪಾನಮತ್ತರಾಗಿ ದುರ್ವರ್ತನೆ ತೋರುತ್ತಿದ್ದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಸೋಮಶೇಖರ್ ಪಿ. ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಅಮಾನತು ಮಾಡಿದ್ದಾರೆ.
ಶಸ್ತ್ರಚಿಕಿತ್ಸೆಯ ಅಗತ್ಯ ಇರುವ ರೋಗಿಗಳಿಗೆ ಅರಿವಳಿಕೆ ನೀಡುವ ಸಮಯದಲ್ಲಿ ಕುಡಿತದ ಅಮಲಿನಲ್ಲಿ ನೀಡಲು ಸಾಧ್ಯವಾಗದೇ ಇರುವ ಬಗ್ಗೆ ಹಲವು ಬಾರಿ ದೂರುಗಳು ಬಂದಿದ್ದವು. ತಡವಾಗಿ ಕಚೇರಿಗೆ ಬರುವುದು, ಬರುವಾಗ ಮದ್ಯ ಸೇವಿಸಿರುವುದು ಕಂಡು ಬಂದಿದ್ದರಿಂದ ನಾಲ್ಕು ಬಾರಿ ನೋಟಿಸ್ ನೀಡಿದ್ದರೂ ಡಾ. ಸೋಮಶೇಖರ್ ನೋಟಿಸ್‌ಗೆ ಉತ್ತರ ನೀಡದೇ ದುರ್ನಡತೆ ತೋರಿದ್ದರು. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು, ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಜಿಲ್ಲಾಧಿಕಾರಿಯವರು ಆಯುಕ್ತರ ಕಚೇರಿಗೆ ವರದಿ ಸಲ್ಲಿಸಿದ್ದರು.
ಈ ವರದಿಯ ಅನ್ವಯ ಆಯುಕ್ತ ಡಿ. ರಂದೀಪ್ ಅವರು ತಕ್ಷಣದಿಂದ ಸರ್ಕಾರಿ ಸೇವೆಯಿಂದ ಅಮಾನತು ಮಾಡಿರುತ್ತಾರೆ. ಅವರ ಲೀನ್ ಅನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ನೇತ್ರತಜ್ಞರ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.