ಶನಿವಾರ, ಮೇ 28, 2022
27 °C

ಕನ್ನಡ ವಿಶ್ವವಿದ್ಯಾಲಯದಲ್ಲಿ ಕಮಿಷನ್‌ ಆರೋಪ: ನ್ಯಾಯಾಂಗ ತನಿಖೆಗೆ ಹಕ್ಕೊತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಲಂಚ, ಕಮಿಷನ್‌ ಆರೋಪದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ ಹಾಗೂ ಬೋಧಕೇತರ ನೌಕರರ ಸಂಘ ಒಕ್ಕೊರಲ ಹಕ್ಕೊತ್ತಾಯ ಮಾಡಿವೆ.

‘ಬಡ್ತಿಗೆ ಲಂಚ, ಪಿಂಚಣಿಗೆ ಕಮಿಷನ್‌’, ‘ಶಿಷ್ಯವೇತನಕ್ಕೂ ತೆರಬೇಕು ಹಣ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಈಚೆಗೆ ಪ್ರಕಟಿಸಿದ್ದ ವರದಿ ಹಿನ್ನೆಲೆಯಲ್ಲಿ ಮಂಗಳವಾರ ಬೋಧಕ, ಬೋಧಕೇತರ ಸಿಬ್ಬಂದಿ ವಿಶ್ವವಿದ್ಯಾಲಯದಲ್ಲಿ ಸಭೆ ಸೇರಿ, ಚರ್ಚಿಸಿ ಆಗ್ರಹಿಸಿದರು. ಸಭೆ ಬಳಿಕ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಲಂಚ ಆರೋಪದ ಕುರಿತು ಕುಲಪತಿ ಪ್ರೊ. ಸ.ಚಿ. ರಮೇಶ ಅವರು ಸಿಂಡಿಕೇಟ್‌ಗೆ ತನಿಖೆಗೆ ಒಪ್ಪಿಸುವುದಾಗಿ ತಿಳಿಸಿದ್ದಾರೆ. ಕುಲಪತಿಯವರ ಈ ಮಾತನ್ನೂ ಒಪ್ಪುವುದಿಲ್ಲ. ಅದನ್ನು ಖಂಡಿಸಲಾಗುವುದು. ಸಿಂಡಿಕೇಟ್‌ ಸದಸ್ಯರು ಕೂಡ ವಿಶ್ವವಿದ್ಯಾಲಯದ ಭಾಗ. ಕುಲಪತಿ ಅವರು ಪಾರದರ್ಶಕವಾಗಿದ್ದರೆ ನ್ಯಾಯಾಂಗ ತನಿಖೆ ನಡೆಸಬೇಕು. ಇದುವರೆಗಿನ ಹಣಕಾಸಿನ ಲೆಕ್ಕಪತ್ರದ ಕುರಿತು ಶ್ವೇತಪತ್ರ ಹೊರಡಿಸಬೇಕು. ನ. 17ರೊಳಗೆ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ನ. 18ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು. 

‘ಕಾಯಂ ಹಾಗೂ ಗುತ್ತಿಗೆ ನೌಕರರ ವೇತನ, ಪಿಂಚಣಿ ಸೌಲಭ್ಯ ಕಾಲಕಾಲಕ್ಕೆ ನೀಡಬೇಕು. ಅರ್ಹರಿಗೆ ಮುಂಬಡ್ತಿ ನೀಡಬೇಕು. ನೌಕರರ ಸೇವಾ ಪೂರ್ವ ಅವಧಿ ಘೋಷಿಸಬೇಕು. ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಅವರ ವರ್ಗಾವಣೆ ಆದೇಶ ರದ್ದುಗೊಳಿಸಬೇಕು. ಮೃತ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕು. 17 ಬೋಧಕ ಹುದ್ದೆಗಳ ನೇಮಕ ಪ್ರಕ್ರಿಯೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ನನ್ನ ಸಂಬಳ ಬಿಡುಗಡೆ ಮಾಡಲು ಕುಲಪತಿಗಳು ಕಮಿಷನ್‌ ಪಡೆದುಕೊಂಡಿದ್ದಾರೆ’ ಎಂದು ವಿಶ್ವವಿದ್ಯಾಲಯದ ವೈದ್ಯ ಡಾ. ಸಂಪತ್‌ಕುಮಾರ್‌ ತೆಗ್ಗಿ ಗಂಭೀರ ಆರೋಪ ಮಾಡಿದರು.

ಗ್ರಂಥಾಲಯದ ಸಹಾಯಕ ಶಂಕರಗೌಡ ಮಾತನಾಡಿ, ‘ಸೇವಾಪೂರ್ವ ಅವಧಿ ಘೋಷಿಸಲು ಎಂಟು ತಿಂಗಳ ವೇತನವನ್ನು ಕೊಡಲು ಬೇಡಿಕೆ ಇಟ್ಟಿದ್ದಾರೆ’ ಎಂದರು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಕ್ಷೇಮಪಾಲನಾ ಘಟಕದ ಸೂಪರಿಟೆಂಡೆಂಟ್‌ ಕಾಶಿ, ‘ವಿದ್ಯಾರ್ಥಿಗಳ ಶಿಷ್ಯ ವೇತನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು