ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ಮಹೇಶ್ ಉಚ್ಚಾಟನೆ

ನಗರಸಭೆ ಸದಸ್ಯತ್ವ ರದ್ದು ಕೋರಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ
Published : 24 ಸೆಪ್ಟೆಂಬರ್ 2024, 14:44 IST
Last Updated : 24 ಸೆಪ್ಟೆಂಬರ್ 2024, 14:44 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೆ.12ರಂದು ನಡೆದಿದ್ದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿಪ್‌ ಉಲ್ಲಂಘಿಸಿ ಮತದಾನದಿಂದ ದೂರ ಉಳಿದಿದ್ದ 20ನೇ ವಾರ್ಡ್‌ ಸದಸ್ಯ ಕೆ.ಮಹೇಶ್‌ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಹಾಗೂ ನಗರಸಭೆ ಸದಸ್ಯತ್ವ ರದ್ದತಿಗೆ ಕೋರಿ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಲಾಗಿದೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ ಅವರು ಮಂಗಳವಾರ ಉಚ್ಛಾಟನೆ ಆದೇಶ ನೀಡಿದ್ದು, ವಿಪ್‌ ಉಲ್ಲಂಘಿಸಿ ನಗರಸಭೆ ಚುನಾವಣೆಯಲ್ಲಿ ಗೈರು ಹಾಜರಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ತೀವ್ರತರನಾದ ಮುಜುಗರ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಡಿ.ಸಿಗೆ ದೂರು: ‘ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿದ ಬಳಿಕವು ಅದನ್ನು ಉಲ್ಲಂಘನೆ ಮಾಡುವುದು ಹಾಗೂ ಮತದಾನದಿಂದ ದೂರ ಉಳಿಯುವುದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ವಿಪ್ ಉಲ್ಲಂಘನೆ ಮಾಡಿ ಮತದಾನದಿಂದ ದೂರ ಉಳಿಯುವುದು ಕೂಡ ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಅವರ ನಗರಸಭಾ ಸದಸ್ಯತ್ವ ರದ್ದುಪಡಿಸಲು ಕೋರಿ ಜಿಲ್ಲಾಧಿಕಾರಿ ಅವರಿಗೆ ದೂರು ಸಲ್ಲಿಸಲಾಗಿದೆ’ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಶಿಸ್ತನ್ನು ತರುವ ಕೊನೆಯ ಪ್ರಯತ್ನ:

‘ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಎಂಬುದು ಇರಲೇ ಇಲ್ಲ. ಇದು ಶಿಸ್ತು ತರುವ ಕೊನೆಯ ಪ್ರಯತ್ನದಂತಿದೆ. ಕಳೆದ 15 ವರ್ಷಗಳಿಂದಲೂ ಪಕ್ಷದಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದೆ. ಈ ಬಾರಿ ಮತ್ತೆ ಅದು ಪುನರಾವರ್ತನೆಯಾಗಿದೆ. ಹಣದ ಮುಂದೆ ಪಕ್ಷ, ಸಿದ್ಧಾಂತ ಎಲ್ಲವೂ ಮಾಯವಾಗುತ್ತಿದೆ. ಇನ್ನಾದರೂ ಬುದ್ಧಿ ಬಂದರೆ ಪಕ್ಷಕ್ಕೆ ಒಳಿತಾಗುತ್ತದೆ’ ಎಂದು ಹೆಸರು ಹೇಳಲು ಬಯಸದ ಪಕ್ಷದ ಮುಖಂಡರೊಬ್ಬರು ಹೇಳಿದರು.

ಪಕ್ಷದಲ್ಲೇ ಇರುತ್ತೇನೆ: ಮಹೇಶ್‌

‘ನಾನು ನಗರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದುದು ನಿಜ. ಆದರೆ ನನಗೆ ಕೆಲವರು ಮೋಸ ಮಾಡಿದರು. ಹೀಗಿದ್ದರೂ ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಮತದಾನದ ಹಿಂದಿನ ದಿನ ನನಗೆ ಅಸೌಖ್ಯ ಕಾಡಿತ್ತು. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಮತದಾನ ದಿನವೂ ನನಗೆ ಅಸೌಖ್ಯ ಮುಂದುವರಿದಿತ್ತು. ಹೀಗಾಗಿ ನಾನು ಮತದಾನಕ್ಕೆ ಬಂದಿರಲಿಲ್ಲ. ಮತದಾನ ಮಾಡದಂತೆ ನನಗೆ ಯಾರೂ ಹೇಳಿಲ್ಲ. ಅದಾದ ಬಳಿಕವೂ ನನ್ನನ್ನು ಕರೆದು ವಿಚಾರಿಸುವ ಕೆಲಸವನ್ನು ಪಕ್ಷ ಮಾಡಿಲ್ಲ’ ಎಂದು ಮಹೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನಾನು ಇನ್ನು ಮುಂದೆಯೂ ಪಕ್ಷದಲ್ಲೇ ಇರುತ್ತೇನೆ. ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಕೈಲಾದ ಜನಸೇವೆ ಮಾಡುತ್ತ ಬಂದಿದ್ದೇನೆ ಅದನ್ನು ಮುಂದುವರಿಸುತ್ತೇನೆ ಮೂರು ಎಂಪಿ ಚುನಾವಣೆ ಎರಡು ಎಂಎಲ್ಎ ಚುನಾವಣೆಗಳಲ್ಲಿ ನಾನು ಪ್ರಾಮಾಣಿಕವಾಗಿ ದುಡಿದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT