ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಸರ್ಕಾರಿ ಶಾಲೆಗಳಿಗೆ ‘ನರೇಗಾ’ ಬಲ

181 ಶಾಲೆಗಳಲ್ಲಿ ಹೈಟೆಕ್ ಶೌಚಾಲಯ; 84 ಅಡುಗೆ ಕೋಣೆ
Published 30 ಮೇ 2024, 4:17 IST
Last Updated 30 ಮೇ 2024, 4:17 IST
ಅಕ್ಷರ ಗಾತ್ರ

ಹರಪನಹಳ್ಳಿ: 2024-25ನೇ ಶೈಕ್ಷಣಿಕ ವರ್ಷ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು ವಿವಿಧ ಯೋಜನೆಗಳಡಿ ನಳನಳಿಸುತ್ತಿರುವ ಸರ್ಕಾರಿ ಶಾಲೆಗಳೀಗ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜುಗೊಂಡಿವೆ.

ಶಾಲಾ ಕಾಂಪೌಂಡ್, ಹೈಟೆಕ್ ಶೌಚಾಲಯ, ಸುಸಜ್ಜಿತ ಅಡುಗೆ ಕೋಣೆ, ಆಟದ ಮೈದಾನ, ಶುದ್ಧ ಕುಡಿಯುವ ನೀರು ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬಿದಂತಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು ಅವರ ಮಾರ್ಗದರ್ಶನದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ ಅವರ ನೇತೃತ್ವದ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ತಂಡ 2023-24ನೇ ಸಾಲಿನಲ್ಲಿ ಒಟ್ಟು 181 ಶಾಲೆಗಳಲ್ಲಿ ಹೈಟೆಕ್ ಶೌಚಾಲಯ, 104 ಶಾಲಾ ಕಾಂಪೌಂಡ್, 84 ಅಡುಗೆ ಕೋಣೆ, 31 ಆಟದ ಮೈದಾನ ಅಭಿವೃದ್ಧಿ ಪಡಿಸಲು ಗುರಿ ಹಾಕಿಕೊಂಡಿತ್ತು. ಈ ಪೈಕಿ 32 ಹೈಟೆಕ್ ಶೌಚಾಲಯ, 33 ಶಾಲಾ ಕಾಂಪೌಂಡ್, 55 ಅಡುಗೆ ಕೋಣೆ ಮತ್ತು 16 ಶಾಲೆಗಳ ಆಟದ ಮೈದಾನ ಅಭಿವೃದ್ಧಿಗೆ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ 131 ಕಾಮಗಾರಿಗಳು ಪೂರ್ಣಗೊಂಡಿವೆ.

ತಾಲ್ಲೂಕಿನಲ್ಲಿ ಖಾತ್ರಿ ಯೋಜನೆಯಡಿ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೇ 65ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಶೇ 35ರಷ್ಟು ಕಾಮಗಾರಿ ಜರೂರಾಗಿ ಪೂರ್ಣಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್.

ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಕಾನಹಳ್ಳಿ, ಜಿ.ದಾದಾಪುರ, ನಿಲುವಂಜಿ, ಮುತ್ತಿಗಿ, ಮೈದೂರು ಮತ್ತು ಬಳಿಗನೂರು ಗ್ರಾಮದ ಸರ್ಕಾರಿ ಶಾಲೆಗಳ ಗೋಡೆ, ಕಾಂಪೌಂಡ್‌ಗಳ ಮೇಲೆ ಆಕರ್ಷಕ ರೇಖಾಚಿತ್ರಗಳು ಗಮನ ಸೆಳೆಯುತ್ತಿವೆ. ಶಾಲಾ ಶಿಕ್ಷಣ ಇಲಾಖೆ ಶೇ 80ರಷ್ಟು ಪಠ್ಯ ಪುಸ್ತಕ ಮತ್ತು ಶೇ 100ರಷ್ಟು ಸಮವಸ್ತ್ರಗಳನ್ನು ಶಾಲೆಗಳಿಗೆ ಪೂರೈಕೆ ಮಾಡಿದ್ದು, ಪ್ರಾಥಮಿಕ ಶಾಲೆಯಲ್ಲಿ 322, ಪ್ರೌಢಶಾಲೆಯಲ್ಲಿ 31 ಶಿಕ್ಷಕರ ಕೊರತೆಯಿದ್ದು, ಇಲಾಖೆ ಅತಿಥಿ ಶಿಕ್ಷಕರ ನೇಮಕ ನಿರೀಕ್ಷೆಯಲ್ಲಿದೆ.

ಹರಪನಹಳ್ಳಿ ತಾಲ್ಲೂಕು ನಿಲುವಂಜಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕಾಂಪೌಂಡ್ ಮತ್ತು ಹೈಟೆಕ್ ಶೌಚಾಲಯ ನಿರ್ಮಿಸಿರುವುದು
ಹರಪನಹಳ್ಳಿ ತಾಲ್ಲೂಕು ನಿಲುವಂಜಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕಾಂಪೌಂಡ್ ಮತ್ತು ಹೈಟೆಕ್ ಶೌಚಾಲಯ ನಿರ್ಮಿಸಿರುವುದು

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ತಾಲ್ಲೂಕಿನ 166 ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ. ಉದ್ಯೋಗ ಖಾತ್ರಿ ಯೋಜನೆಯಿಂದ ಹಲವು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ

-ಎಂ.ಪಿ.ಲತಾ ಮಲ್ಲಿಕಾರ್ಜುನ್ ಶಾಸಕಿ ಹರಪನಹಳ್ಳಿ

23 ಶಾಲೆಗಳಲ್ಲಿ ಎಲ್‌ಕೆಜಿ/ ಯುಕೆಜಿ

ಪ್ರಸಕ್ತ ವರ್ಷ ಸರ್ಕಾರ ಶೈಕ್ಷಣಿಕ ಬಲವರ್ಧನ ವರ್ಷವೆಂದು ಘೋಷಿಸಿದೆ. ತಾಲ್ಲೂಕಿನ 23 ಶಾಲೆಗಳಲ್ಲಿ ಅರ್ಲಿ ಚೈಲ್ಡ್ ವುಡ್ ಕೇರ್ ಅಂಡ್ ಎಜ್ಯುಕೇಷನ್ (ECCE) ದ್ವಿಭಾಷಾಧಾರಿತ (BILINGUAL} ಶಿಕ್ಷಣವನ್ನು ಆರಂಭಿಸಲಾಗಿದೆ. ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್ ವರ್ಕ್ (NSQF) ತರಗತಿಗಳನ್ನು ಹಗರಿಗಜಾಪುರ ಹಿಕ್ಕಿಮಗೆರೆ ಕಡಬಗೆರೆ ಕುಂಚೂರು ಮಾದಿಹಳ್ಳಿ ತೌಡೂರು ಗೋವೆರಹಳ್ಳಿ ಅನಂತನಹಳ್ಳಿ ಆದರ್ಶ ವಿದ್ಯಾಲಯ ಹರಪನಹಳ್ಳಿಯಲ್ಲಿ ಆರಂಭಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT