ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿ.ವಿ.ಯಲ್ಲಿ ಲಂಚ; ವಾರದಲ್ಲಿ ದಾಖಲೆ ಬಿಡುಗಡೆ –ಚಾನಾಳ್ ಶೇಖರ್

Last Updated 9 ಡಿಸೆಂಬರ್ 2021, 12:47 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 17 ಬೋಧಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಲಂಚ ಪಡೆದಿರುವುದರ ಬಗ್ಗೆ ವಾರದೊಳಗೆ ದಾಖಲೆಗಳನ್ನು ಬಿಡುಗಡೆಗೊಳಿಸಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್ ತಿಳಿಸಿದರು.

‘ವಿಶ್ವವಿದ್ಯಾಲಯದಲ್ಲಿ ನಿಯಮಬಾಹಿರವಾಗಿ ಬೋಧಕ ಹುದ್ದೆ ಭರ್ತಿಗೆ ಮುಂದಾಗಿರುವುದು ಸರಿಯಲ್ಲ. ವಿಶ್ವವಿದ್ಯಾಲಯದ ಅಧಿಕಾರಿಗಳ ದುರಾಡಳಿತ ನಾಡಿಗೆ ಬೇಸರ ತರಿಸಿದೆ. ಕುಲಸಚಿವರ ಅಸಹಾಯಕತೆ, ಕಾನೂನು ಘಟಕದ ದುರಾಡಳಿತ ಖಂಡನಾರ್ಹ’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕುಲಸಚಿವ ಸುಬ್ಬಣ್ಣ ರೈ ಅವರು ಕುಲಪತಿಗಳ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ‌. ಇದು ತಲೆ ತಗ್ಗಿಸುವ ವಿಷಯ. ಹುದ್ದೆ ಗಿಟ್ಟಿಸಿಕೊಳ್ಳಲು ₹ 50 ರಿಂದ ₹ 60 ಲಕ್ಷ ಹಣ ನೀಡಿರುವುದಾಗಿ ಹಲವರು ಕರೆ ಮಾಡಿ ತಿಳಿಸಿದ್ದಾರೆ. ಪ್ರಾಧ್ಯಾಪಕರು, ನಿವೃತ್ತ ನೌಕರರಿಗೂ ಹಣದ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಎಲ್ಲ ದಾಖಲೆಗಳನ್ನು ಬಿಡುಗಡೆಗೊಳಿಸಲಾಗುವುದು’ ಎಂದು ತಿಳಿಸಿದರು.

‘ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ರಕ್ಷಣಾ ವೇದಿಕೆಯಿಂದ ನಿರಂತರವಾಗಿ ಹೋರಾಟ ಮಾಡಲಾಗಿತ್ತು. ಕಳೆದ ವರ್ಷ ಟ್ವಿಟರ್ ಅಭಿಯಾನ ಸಹ ಕೈಗೊಳ್ಳಲಾಗಿತ್ತು. ಅಭಿಯಾನಕ್ಕೆ ಸ್ಪಂದಿಸಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅನುದಾನ ಬಿಡುಗಡೆಗೆ ಭರವಸೆ‌ ನೀಡಿದ್ದರು. ಆದರೆ, ವಿ.ವಿ.ಯಲ್ಲಿ ನಡೆಯುತ್ತಿರುವುದೇ ಬೇರೆ’ ಎಂದರು.

‘ಹಣ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವವರನ್ನು ಸೂಕ್ತ ತನಿಖೆಗೆ ಒಳಪಡಿಸಿ ವಜಾಗೊಳಿಸಬೆಕು. ಡಿ.19ರಂದು ವೇದಿಕೆಯ ರಾಜ್ಯ ಅಧ್ಯಕ್ಷ ನಾರಾಯಣ ಗೌಡ ಜಿಲ್ಲೆಗೆ ಬರಲಿದ್ದು, ಅವರ ನೇತೃತ್ವದಲ್ಲಿ ಹೋರಾಟ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಮುಖಂಡರಾದ ಮೀರ್ ಜಾಫರ್, ಅಮೀರ್ ಖಾನ್, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT